ರಾಷ್ಟ್ರೀಯ

ಶಬರಿಮಲೆಯ ಐತಿಹ್ಯ ಮತ್ತು ಪಾವಿತ್ರ್ಯತೆ, ನಿಯಮ ಮೀರಿ ಯುವತಿಯರು ದಯವಿಟ್ಟು ಇಲ್ಲಿಗೆ ಬರಬೇಡಿ: ತಂತ್ರಿಗಳ ಮನವಿ

Pinterest LinkedIn Tumblr


ಶಬರಿಮಲ: ಅಯ್ಯಪ್ಪ ಸ್ವಾಮಿ ದೇಗುಲಕ್ಕೆ ಯುವತಿಯರು ಪ್ರವೇಶಿಸಿದರೆ ದೇಗುಲಕ್ಕೆ ಬೀಗ ಹಾಕಲು ತಂತ್ರಿಗಳು ನಿರ್ಧರಿಸಿದ್ದಾರೆ ಎಂಬ ವಿಚಾರವನ್ನು ತಳ್ಳಿಹಾಕಿರುವ ಅಲ್ಲಿನ ಪ್ರಧಾನ ಅರ್ಚಕ ಕಂಡಾರು ರಾಜೀವರು ಅದೊಂದು ವದಂತಿ ಎಂದು ಸ್ಪಷ್ಟಪಡಿಸಿದ್ದಾರೆ.

ಶಬರಿಮಲೆಯ ಐತಿಹ್ಯ ಮತ್ತು ಪಾವಿತ್ರ್ಯತೆ, ನಿಯಮ ಮೀರಿ ಯುವತಿಯರು ದಯವಿಟ್ಟು ಇಲ್ಲಿಗೆ ಬರಬೇಡಿ. ಹಾಗೆಂದು ನಾವು ಕೇಳಿಕೊಳ್ಳುತ್ತಿದ್ದೇವೆ.

ನಿಮ್ಮ ಪ್ರವೇಶದಿಂದ ಇಲ್ಲಿ ಈಗಾಗಲೇ ಸಾಕಷ್ಟು ಗೊಂದಲ ಸೃಷ್ಟಿಯಾಗಿದ್ದು, ಆತಂಕವಾಗುತ್ತಿದೆ. ಆದರೆ ಯುವತಿಯರು ಪ್ರವೇಶಿಸಿದರೆ ದೇಗುಲಕ್ಕೆ ಬೀಗ ಹಾಕುತ್ತೇವೆ ಎಂದು ನಾವು ಯಾವತ್ತೂ ಹೇಳಿಲ್ಲ. ಅದೊಂದು ಸುಳ್ಳು ಸುದ್ದಿ ಎಂದು ತಂತ್ರಿಗಳು ಸ್ಪಷ್ಟಪಡಿಸಿದ್ದಾರೆ.

ಭಕ್ತರ ಭಾವನೆಗಳಿಗೆ ಬೆಲೆ ಕೊಡಿ. ದೇಗುಲ ಪ್ರವೇಶದ ನಿಯಮ ಪಾಲಿಸಿ, ಅದರ ಹೊರತಾಗಿ ಜನರನ್ನು ಕೆರಳಿಸಲು ಯತ್ನಿಸಬೇಡಿ. ಶಬರಿಮಲೆಯು ಮಹಿಳೆಯರಿಗೆ ಗೌರವ ನೀಡುವ ತಾಣವಾಗಿದೆ.

ಶಬರಿಮಲೆಯ ಎರಡನೇ ಪ್ರಮುಖ ದೇವರೆಂದರೆ ಮಳಿಕಾಪ್ಪುರತಮ್ಮ. ನಾವು ಸುಪ್ರೀಂ ತೀರ್ಪನ್ನು ಗೌರವಿಸುತ್ತೇವೆ, ಆದರೆ ದೇವಾಲಯ ಮತ್ತು ಭಕ್ತರ ನಂಬಿಕೆ, ಆಚರಣೆಯನ್ನು ನಾವು ಪ್ರಶ್ನಿಸುವುದಿಲ್ಲ. ಅದನ್ನು ಪಾಲಿಸಬೇಕಾಗುತ್ತದೆ ಎಂದು ಅರ್ಚಕರು ಹೇಳಿದ್ದಾರೆ.

ಅಯ್ಯಪ್ಪ ದೇಗುಲದ ಸನ್ನಿಧಾನವನ್ನು ಹೂವಿನ ವನವೆಂದು ಕರೆಯಲಾಗುತ್ತದೆ. ಅದನ್ನು ಯುದ್ಧಭೂಮಿಯನ್ನಾಗಿಸಬೇಡಿ. ಭಕ್ತಿಯ ಹೆಸರಿನಲ್ಲಿ ಹಿಂಸಾಚಾರ ಸರಿಯಲ್ಲ ಎಂದು ಅವರು ಮನವಿ ಮಾಡಿಕೊಂಡಿದ್ದಾರೆ.

Comments are closed.