ತಿರುವನಂತಪುರಂ: ಶಬರಿಮಲೆಯ ಅಯ್ಯಪ್ಪ ದೇಗುಲದ ಆವರಣವನ್ನು ರಾಷ್ಟ್ರೀಯ ಸ್ವಯಂಸೇವಕ ಸಂಘ ಯುದ್ಧ ಭೂಮಿಯನ್ನಾಗಿ ಮಾಡುತ್ತಿದೆ. ಸುಪ್ರೀಂ ಕೋರ್ಟ್‌ನ ತೀರ್ಪಿದ್ದರೂ ಕೂಡ ವಯಸ್ಕ ಮಹಿಳೆಯರ ಪ್ರವೇಶವನ್ನು ತಡೆಯುವ ಪ್ರತಿಭಟನೆಯು ಹಿಂಸಾತ್ಮಕ ರೂಪಕ್ಕೆ ತಿರುಗಲು ಆರ್‌ಎಸ್‌ಎಸ್ ಕಾರಣ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಆರೋಪಿಸಿದ್ದಾರೆ.
ಸುಪ್ರೀಂ ಕೋರ್ಟ್‌ನ ಆದೇಶವನ್ನು ಜಾರಿಗೆ ತರಲು ಕೇರಳ ಸರ್ಕಾರ ಸಂಪೂರ್ಣ ಒಪ್ಪಿದೆ ಎಂಬುದನ್ನು ನ್ಯಾಯಾಲಯದ ಮುಂದೆಯೇ ತಿಳಿಸಲಾಗಿದೆ. ಇದಕ್ಕಾಗಿ ಅಗತ್ಯವಿರುವ ಎಲ್ಲ ಸೌಲಭ್ಯಗಳನ್ನು ಸಿದ್ಧಪಡಿಸಿದ್ದೆವು. ಕೇರಳ ಸರ್ಕಾರ ಅಥವಾ ಪೊಲೀಸರು ಭಕ್ತರನ್ನು ತಡೆಯಲು ಪ್ರಯತ್ನಿಸಿಲ್ಲ. ಆದರೆ, ಆರ್‌ಎಸ್‌ಎಸ್ ಶಬರಿಮಲೆ ದೇಗುಲವನ್ನು ರಣರಂಗವನ್ನಾಗಿ ಮಾಡಲು ಯತ್ನಿಸಿದೆ ಎಂದು ದೂರಿದ್ದಾರೆ.
ಮಹಿಳಾ ಭಕ್ತರು ಮತ್ತು ಮಾಧ್ಯಮಗಳ ಮೇಲೆ ನಡೆದಿರುವ ಹಲ್ಲೆಯನ್ನು ಖಂಡಿಸಿದ ಅವರು, ವಾಹನಗಳ ತಪಾಸಣೆಗೆ ಯತ್ನಿಸಿರುವ ಭಕ್ತರು ಮಹಿಳೆಯರು ಮತ್ತು ಮಾಧ್ಯಮಗಳ ಮೇಲೆ ಹಲ್ಲೆ ನಡೆಸಿದ್ದಾರೆ. ಕೇರಳದ ಇತಿಹಾಸದಲ್ಲೇ ಮಾಧ್ಯಮಗಳ ಮೇಲೆ ಹಲ್ಲೆ ನಡೆದಿರುವುದು ಇದೇ ಮೊದಲು ಎಂದು ಹೇಳಿದ್ದಾರೆ.
ಇನ್ನು ಮಂಗಳವಾರವಷ್ಟೇ ಸುಪ್ರೀಂ ಕೋರ್ಟ್, ಎಲ್ಲ ವಯೋಮಾನದ ಮಹಿಳೆಯರಿಗೆ ದೇಗುಲ ಪ್ರವೇಶಕ್ಕೆ ಅವಕಾಶ ಕಲ್ಪಿಸಿರುವ ತೀರ್ಪನ್ನು ಪ್ರಶ್ನಿಸಿ ಸಲ್ಲಿಕೆಯಾಗಿರುವ ಅರ್ಜಿಗಳು ನವೆಂಬರ್ 13ರಂದು ವಿಚಾರಣೆಗೆ ಬರಲಿವೆ ಎಂದು ಹೇಳಿದೆ.
Comments are closed.