ರಾಷ್ಟ್ರೀಯ

ಪತ್ನಿಯ ಪಾತಿವ್ರತೆ ಸಾಬೀತಿಗೆ ‘ಅಗ್ನಿ’ ಪರೀಕ್ಷೆ!

Pinterest LinkedIn Tumblr


ಮಥುರಾ: ಲಂಕೆಯಿಂದ ಸೀತೆಯನ್ನು ಕರೆದುಕೊಂಡ ಮೇಲೆ ಆಕೆಯ ಶೀಲದ ಬಗ್ಗೆ ಅನುಮಾನಗೊಂಡ ಶ್ರೀರಾಮ, ಸೀತೆಗೆ ಅಗ್ನಿ ಪ್ರವೇಶ ಮಾಡಿ ಪಾತಿವ್ರತೆ ಸಾಬೀತು ಮಾಡುವಂತೆ ಪರೀಕ್ಷೆ ಒಡ್ಡಿದ್ದು, ಎಲ್ಲರಿಗೂ ಗೊತ್ತು. ಅದೇ ರೀತಿಯಾಗಿ ಉತ್ತರಪ್ರದೇಶದಲ್ಲಿ ತನ್ನ ಪತ್ನಿಯ ಶೀಲದ ಬಗ್ಗೆ ಶಂಕೆಗೊಂಡ ಪತಿಯೊಬ್ಬ ಆಕೆಯ ಪಾತಿವ್ರತೆ ಸಾಬೀತಿಗೆ ಅಗ್ನಿ ಪರೀಕ್ಷೆಯನ್ನೇ ಇಟ್ಟ ಘಟನೆ ಇತ್ತೀಚೆಗೆ ನಡೆದಿದೆ.

ಸುಮಾನಿ ಮತ್ತು ಜೈವೀರ್​ ಕಳೆದ ವರ್ಷದ ಏಪ್ರಿಲ್​ನಲ್ಲಿ ಉತ್ತರಪ್ರದೇಶ ಪವಿತ್ರ ಕ್ಷೇತ್ರ ಮಥುರಾದಲ್ಲಿ ಮದುವೆಯಾಗಿದ್ದರು. ಎರಡು ಕುಟುಂಬದವರ ಒಪ್ಪಿಗೆಯಲ್ಲಿ ಈ ಮದುವೆ ನಡೆದಿತ್ತು. ಅದೇ ದಿನ ಸುಮಾನಿ ತಂಗಿ ಪುಷ್ಪಾ ಅವರನ್ನು ಜೈವೀರ್​ ತಮ್ಮ ಯಶ್​ವೀರ್​ ಅವರಿಗೆ ಕೊಟ್ಟು ಮದುವೆ ಮಾಡಲಾಗಿತ್ತು. ಮದುವೆಯಾದ ಆರು ತಿಂಗಳ ನಂತರ ಸುಮಾನಿ ಶೀಲದ ಬಗ್ಗೆ ಆಕೆಯ ಅತ್ತೆ ಅನುಮಾನ ವ್ಯಕ್ತಪಡಿಸಲು ಆರಂಭಿಸಿದರು. ನಂತರ ಸುಮಾನಿ ಪತಿವ್ರತೆ ಎಂಬುದನ್ನು ಸಾಬೀತು ಮಾಡಲು ಬೆಂಕಿಯನ್ನು ಕೈಯಲ್ಲಿ ಹಿಡಿಯಬೇಕು. ಅದು ಸುಡದಿದ್ದರೆ ಆಕೆ ಪತಿವ್ರತೆ ಎಂಬುದು ಸಾಬೀತಾಗುತ್ತದೆ ಎಂಬ ತೀರ್ಮಾನಕ್ಕೆ ಬಂದ ಅತ್ತೆ, ಅದರಂತೆ ಅಗ್ನಿ ಪರೀಕ್ಷೆಯನ್ನು ಇಟ್ಟರು. ಬಲವಂತವಾಗಿ ಸುಮಾನಿ ಕೈಗೆ ಸುಡುವ ಕಟ್ಟಿಗೆ ಇಟ್ಟ ಪರಿಣಾಮ ಆಕೆಯ ಅಂಗೈ ಸಂಪೂರ್ಣ ಸುಟ್ಟು ಹೋಗಿದೆ.

ಗಂಭೀರವಾಗಿ ಗಾಯಗೊಂಡಿರುವ ಸುಮಾನಿ ಅವರು, “ನನ್ನ ಮೇಲೆ ವಿನಾಃಕಾರಣ ಅನುಮಾನ ಪಡುತ್ತಿದ್ದ ಅತ್ತೆ, ನನ್ನ ಶೀಲದ ಬಗ್ಗೆ ಸುಳ್ಳು ಆರೋಪಗಳನ್ನು ಹೊರಿಸಿದರು. ಅವರು ನನ್ನನ್ನು ಸುಳ್ಳುಗಾರ್ತಿ ಎಂದು ಕರೆದರು. ಅಲ್ಲದೇ ವರದಕ್ಷಿಣೆ ವಿಚಾರವಾಗಿ ನನಗೆ ದೈಹಿಕವಾಗಿಯೂ ಹಿಂಸೆ ನೀಡುತ್ತಿದ್ದರು,” ಎಂದು ಹೇಳಿದ್ದಾರೆ.

ಇದನ್ನು ಓದಿ: ತಮಿಳಮ್ಮನಿಗೆ ಶುರುವಾಗಿದೆ ಕನ್ನಡದ ಮೇಲೆ ಪ್ರೀತಿ; ದೂರ ಶಿಕ್ಷಣದಿಂದ ಕನ್ನಡ ಸ್ನಾತಕೋತ್ತರ ಪದವಿ ಕಲಿಯಲಿದ್ದಾರೆ ಶಶಿಕಲಾ, ಇಳವರಸಿ

ಮತ್ತೊಂದು ಘಟನೆ ಬಗ್ಗೆಯೂ ವಿವರಿಸಿದ ಸುಮಾನಿ, “ಈ ಹಿಂದೆಯೂ ಒಮ್ಮೆ ನಾನು ಮಲಗಿದ್ದಾಗ ನನ್ನ ಗಂಡ ನನ್ನ ಕೈಯನ್ನು ಚಾಕುವಿನಿಂದ ಕುಯ್ದಿದ್ದ. ಸಾಯಿಸುವುದಾಗಿಯೂ ಬೆದರಿಕೆಯೊಡ್ಡುತ್ತಿದ್ದ. ಆತನಿಗೆ ನಾನು ಮೋಸ ಮಾಡಿದ್ದೇನೆ ಎಂದು ಆರೋಪಿಸುತ್ತಿದ್ದ. ಆ ವೇಳೆ ಹಿಂಸೆ ತಾಳಲಾಗದೆ ನನ್ನ ತಂದೆಯ ಜೊತೆಗೆ ಪೊಲೀಸ್​ ಠಾಣೆಗೆ ತೆರಳಿ, ದೂರನ್ನು ದಾಖಲಿಸಿದ್ದೆ. ಆದರೆ, ಎರಡು ಕುಟುಂಬಗಳು ಸೇರಿ ಸಂಧಾನ ಮಾಡಿದ್ದರು,” ಎಂದು ವಿವರಿಸಿದರು.
ಇದೀಗ ಕೈಯನ್ನು ಸುಟ್ಟ ಪ್ರಕರಣ ಹಾಗೂ ವರದಕ್ಷಿಣೆಗಾಗಿ ದೈಹಿಕ ಹಲ್ಲೆ ಸಂಬಂಧ ಸುಮಾನಿ ಅವರು ತನ್ನ ಅತ್ತೆ ಹಾಗೂ ಇತರ ಆರು ಮಂದಿ ವಿರುದ್ಧ ದೂರು ದಾಖಲಿಸಿದ್ದಾರೆ.

Comments are closed.