ರಾಷ್ಟ್ರೀಯ

ಸ್ವಘೋಷಿತ ದೇವಮಾನವನ ಮೇಲೆ ಅತ್ಯಾಚಾರ ಪ್ರಕರಣ ದಾಖಲು

Pinterest LinkedIn Tumblr


ನವದೆಹಲಿ: ಸ್ವಯಂಘೋಷಿತ ದೇವಮಾನವನೆಂದು ಕರೆಸಿಕೊಳ್ಳುವ ದಾತಿ ಮಹಾರಾಜ್​ ಅವರ ಮೇಲೆ ಸಿಬಿಐ ಇಂದು ಅತ್ಯಾಚಾರ ಪ್ರಕರಣ ದಾಖಲಿಸಿಕೊಂಡಿದೆ.

ಎರಡು ವರ್ಷದ ಹಿಂದೆ ಅವರ ಭಕ್ತೆಯಾಗಿದ್ದ ನನ್ನ ಮೇಲೆ ರಾಜಸ್ಥಾನದ ಬಾಲಗ್ರಾಮದಲ್ಲಿರುವ ಗುರುಕುಲ ಆಶ್ವಾಸನದಲ್ಲಿ ಅತ್ಯಾಚಾರ ಮತ್ತು ಅನೈಸರ್ಗಿಕ ಲೈಂಗಿಕತೆ ನಡೆಸಿದ್ದಾರೆ ಎಂದು ಆರೋಪಿಸಿ ದಾತಿ ಮಹಾರಾಜ್​ ಸೇರಿ ಮೂವರ ಮೇಲೆ 25 ವರ್ಷದ ಮಹಿಳೆಯೊಬ್ಬರು ದೂರು ದಾಖಲಿಸಿದ್ದರು. ಈ ಹಿನ್ನೆಲೆಯಲ್ಲಿ ಮೂವರು ವಿರುದ್ಧ ಸಿಬಿಐ ಅಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ.

ದೆಹಲಿ ಹೈಕೋರ್ಟ್​ ಈ ಅತ್ಯಾಚಾರ ಪ್ರಕರಣವನ್ನು ದೆಹಲಿ ಪೊಲೀಸ್​ ಅಪರಾಧ ವಿಭಾಗದಿಂದ ಸಿಬಿಐಗೆ ವರ್ಗಾಯಿಸಲು ನಿರ್ಧರಿಸಿದ್ದರಿಂದ ಕೆಲ ತಿಂಗಳ ಹಿಂದೆ ದಾತಿ ಮಹಾರಾಜ್​ ಅವರ ಕಾನೂನು ಸಲಹೆಗಾರರು ಸಿಬಿಐಗೆ ಹಸ್ತಾಂತರಿಸುವುದಕ್ಕೆ ತಡೆ ನೀಡಬೇಕೆಂದು ಸುಪ್ರೀಂಕೋರ್ಟ್​ ಮೊರೆಹೋಗಿತ್ತು. ಆದರೆ, ದೆಹಲಿ ಹೈಕೋರ್ಟ್​ ಆದೇಶದ ವಿರುದ್ಧ ಸಲ್ಲಿಸಿದ್ದ ಮನವಿಯನ್ನು ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ನಿರಾಕರಿಸಿತ್ತು.

ತಮ್ಮ ಶಿಷ್ಯೆಯ ಮೇಲೆ ಅತ್ಯಾಚಾರವೆಸಗಿದ ಆರೋಪದ ಮೇಲೆ ದಾತಿ ಮಹಾರಾಜ್ ವಿರುದ್ಧ ಐಪಿಸಿ ಸೆಕ್ಷನ್ 376 (ಅತ್ಯಾಚಾರ), 377 (ಅಸಹಜ ಲೈಂಗಿಕತೆ), 354 (ಹಿಂಸೆ), 34 (ಸಾಮಾನ್ಯ ಉದ್ದೇಶ)ದಡಿ ಚಾರ್ಜ್​ಶೀಟ್​ ದಾಖಲಿಸಲಾಗಿತ್ತು. ಆದರೆ ತಮ್ಮ ವಿರುದ್ಧ ಸುಳ್ಳು ಆರೋಪ ಮಾಡಲಾಗಿದೆ ಎಂದು ದಾತಿ ಮಹಾರಾಜ್ ಆರೋಪಿಸಿದ್ದರು. ಇದೀಗ ಈ ಪ್ರಕರಣದ ತನಿಖೆಯನ್ನು ಸಿಬಿಐ ವಹಿಸಿಕೊಂಡಿದೆ.

Comments are closed.