ರಾಷ್ಟ್ರೀಯ

ಬಾಬರಿ ಮಸೀದಿ ಸ್ಥಳ ವಿವಾದ: ಇಂದಿನಿಂದ ಸುಪ್ರೀಂ​ನಲ್ಲಿ ವಿಚಾರಣೆ

Pinterest LinkedIn Tumblr


ನವದೆಹಲಿ: ದಶಕಗಳಿಂದ ಹಿಂದೂ ಮುಸ್ಲಿಮರ ನಡುವೆ ತಿಕ್ಕಾಟ, ವೈಮನಸ್ಸು, ಭಿನ್ನಾಭಿಪ್ರಾಯಗಳಿಗೆ ಕಾರಣವಾಗಿರುವ ಹಾಗೂ ಎಲ್ಲಾ ರಾಜಕೀಯ ಪಕ್ಷಗಳಿಗೆ ಚುನಾವಣೆಯ ದಾಳವೂ ಆಗಿರುವ ಅಯೋಧ್ಯೆ ಬಾಬ್ರಿ ಮಸೀದಿ ರಾಮಜನ್ಮಭೂಮಿ ಸ್ಥಳ ವಿವಾದ ಬಗೆಹರಿಸಲು ಸುಪ್ರೀಂ ಕೋರ್ಟ್ ಅಣಿಯಾಗಿದೆ. 2.77 ಎಕರೆಯ ವಿವಾದಿತ ಜಾಗದ ಮಾಲಕತ್ವದ ಕುರಿತು ಎದ್ದಿರುವ ಪ್ರಶ್ನೆಗಳಿಗೆ ಉತ್ತರ ನೀಡಲು ಸರ್ವೋಚ್ಚ ನ್ಯಾಯಾಲಯ ಅ. 29, ಸೋಮವಾರದಿಂದ ವಿಚಾರಣೆ ನಡೆಸಲಿದೆ.

2010ರಲ್ಲಿ ಅಲಹಾಬಾದ್ ಹೈಕೋರ್ಟ್ ಈ 2.77 ಎಕರೆ ವಿವಾದಿತ ಪ್ರದೇಶವನ್ನು ರಾಮಲಲ್ಲಾ, ಸುನ್ನಿ ವಕ್ಫ್ ಬೋರ್ಡ್ ಮತ್ತು ನಿರ್ಮೋಹಿ ಅಖರ ಈ ಮೂವರಿಗೆ ಸಮನಾಗಿ ಹಂಚಿಕೆ ಮಾಡಿ ತೀರ್ಪು ಕೊಟ್ಟಿತ್ತು. ಆ ತೀರ್ಪನ್ನು ಪ್ರಶ್ನಿಸಿ ಸಾಕಷ್ಟು ಮೇಲ್ಮನವಿಗಳು ಸುಪ್ರೀಂ ಕೋರ್ಟ್​ನಲ್ಲಿ ಸಲ್ಲಿಕೆಯಾಗಿದ್ದವು. ಈಗಿನ ಸುಪ್ರೀಂ ಕೋರ್ಟ್​ ನೂತನ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯ್, ನ್ಯಾ| ಸಂಜಯ್ ಕಿಶನ್ ಕೌಲ್ ಮತ್ತು ನ್ಯಾ| ಕೆಎಂ ಜೋಸೆಫ್ ಅವರಿರುವ ಸುಪ್ರೀಂ ಪೀಠವು ಈ ಮೇಲ್ಮನವಿಗಳ ವಿಚಾರಣೆ ನಡೆಸಲಿದೆ.

ಇಸ್ಲಾಮ್ ಧರ್ಮದಲ್ಲಿ ನಮಾಜ್ ಮಾಡಲು ಮಸೀದಿಯೇ ಆಗಬೇಕೆಂದಿಲ್ಲ. ಎಲ್ಲಿ ಬೇಕಾದರೂ ಅಲ್ಲಾಹುವಿಗೆ ನಮಿಸಬಹುದು. ಹೀಗಾಗಿ, ಮುಸ್ಲಿಮರಿಗೆ ಮಸೀದಿ ಅನಿವಾರ್ಯವಲ್ಲ ಎಂದು 1994ರಲ್ಲಿ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ಕೊಟ್ಟಿದ್ದನ್ನು ಈ ಸಂದರ್ಭದಲ್ಲಿ ಉಲ್ಲೇಖಿಸಬಹುದು. 24 ವರ್ಷಗಳ ಹಿಂದಿನ ಆ ತೀರ್ಪು ಬಾಬ್ರಿ ಮಸೀದಿ ಪ್ರಕರಣದ ವಿಚಾರಣೆಯಲ್ಲಿ ಮಹತ್ವದ ಪರಿಣಾಮ ಬೀರುವ ಸಾಧ್ಯತೆ ಇದೆ ಎಂಬುದು ಮುಸ್ಲಿಮರ ಆತಂಕ. 2.77 ಎಕರೆಯ ವಿವಾದಿತ ಜಾಗವನ್ನು ಮೂರು ಪಾರ್ಟಿಗಳಿಗೆ ಸಮನಾಗಿ ಹಂಚಿಕೆ ಮಾಡಿದ 2010ರ ಅಲಾಹಾಬಾದ್ ಹೈಕೋರ್ಟ್ ತೀರ್ಪಿನಲ್ಲಿ 1994ರ ಆ ಸುಪ್ರೀಂ ತೀರ್ಪು ಪ್ರಭಾವ ಬೀರಿತ್ತು ಎಂದು ಮುಸ್ಲಿಮರ ಪರ ವಕೀಲರು ಹೇಳುತ್ತಾರೆ.

ಹೀಗಾಗಿ, 1994ರ ಆ ತೀರ್ಪನ್ನು ಪ್ರಶ್ನಿಸಿ ಮುಸ್ಲಿಮರು ಮೇಲ್ಮನವಿ ಸಲ್ಲಿಸಿದ್ದರು. ಹಾಗೆಯೇ ಬಾಬರಿ ಮಸೀದಿ ಸ್ಥಳ ವಿವಾದವನ್ನು ಮೂವರು ಸದಸ್ಯರ ಬದಲು ಐವರು ಸದಸ್ಯರ ಸಾಂವಿಧಾನಿಕ ಪೀಠದಲ್ಲಿ ವಿಚಾರಣೆಯಾಗಬೇಕೆಂದು ಕೋರಿದ್ದರು. ಈ ಸಂಬಂಧ ಹಿಂದಿನ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರ, ನ್ಯಾ| ಅಶೋಕ್ ಭೂಷಣ್ ಮತ್ತು ನ್ಯಾ| ಎಸ್. ಅಬ್ದುಲ್ ನಜೀರ್ ಅವರು ವಿಚಾರಣೆ ನಡೆಸಿ ಸೆಪ್ಟೆಂಬರ್ 27ರಂದು ತೀರ್ಪು ನೀಡಿದರು. 1994ರ ಸುಪ್ರೀಂ ತೀರ್ಪನ್ನ ಪುನರ್​ಪರಿಶೀಲಿಸಲು ನ್ಯಾಯಪೀಠವು ನಿರಾಕರಿಸಿತು. ಹಾಗೆಯೇ, ಪಂಚ ಸದಸ್ಯರ ಸಾಂವಿಧಾನಿಕ ಪೀಠದಿಂದ ವಿಚಾರಣೆ ನಡೆಸುವ ಬೇಡಿಕೆಯನ್ನೂ ತಿರಸ್ಕರಿಸಿತು. ಮೂವರು ಸದಸ್ಯರ ಪೀಠದಿಂದಲೇ ವಿಚಾರಣೆ ನಡೆಯಲಿದೆ ಎಂದು ಸ್ಪಷ್ಟವಾಗಿ ಸೂಚಿಸಿತು. ಸೆ. 27ರಂದು ತೀರ್ಪು ಕೊಟ್ಟ ಮೂವರು ನ್ಯಾಯಮೂರ್ತಿಗಳ ಪೈಕಿ ನ್ಯಾ| ನಜೀರ್ ಅವರೊಬ್ಬರೇ ಭಿನ್ನಾಭಿಪ್ರಾಯ ಹೊಂದಿದ್ದು. ಇವರು ಐವರು ಸದಸ್ಯರ ನ್ಯಾಯಪೀಠ ರಚನೆಯ ಪ್ರಸ್ತಾಪಕ್ಕೆ ಪೂರಕವಾಗಿ ನಿಂತಿದ್ದರು. ಒಲವು ವ್ಯಕ್ತಪಡಿಸಿದ್ದರು. ಆದರೆ, ಅದರ ಅಗತ್ಯವಿಲ್ಲವೆಂದು ಇನ್ನಿಬ್ಬರು ನ್ಯಾಯಮೂರ್ತಿಗಳು ಅಭಿಪ್ರಾಯಪಟ್ಟಿದ್ದರಿಂದ ತ್ರಿಸದಸ್ಯರ ನ್ಯಾಯಪೀಠದಲ್ಲೇ ವಿಚಾರಣೆ ನಡೆಯುವ ತೀರ್ಮಾನವಾಯಿತು.

Comments are closed.