ರಾಷ್ಟ್ರೀಯ

ಪುಂಗಿಯ ನಾದಕ್ಕೆ ಆಡಬೇಕಿದ್ದ ಹಾವನ್ನು ಎತ್ತಿಕೊಂಡು ಓಡಿಹೋದ ಕೋತಿ!

Pinterest LinkedIn Tumblr


ಮಥುರಾ: ಕಟ್ಟೆಯ ಮೇಲೆ ಕುಳಿತಿದ್ದ ಹಾವಾಡಿಗರು ಬುಟ್ಟಿಯಿಂದ ಹಾವನ್ನು ಹೊರತೆಗೆದು ಪುಂಗಿ ಊದಲಾರಂಭಿಸಿದರು. ಜನರು ಕುತೂಹಲದಿಂದ ಸುತ್ತ ಸೇರುತ್ತಾ ಇರುವಷ್ಟರಲ್ಲಿ ಹಿಂದಿನ ಕಟ್ಟಡದಿಂದ ವಿಲನ್​ ರೀತಿ ಹಾರಿ ಬಂದ ಮಂಗ ಅಲ್ಲಿದ್ದ ಹಾವನ್ನು ಎತ್ತಿಕೊಂಡು ಓಡಿಹೋಯಿತು!

ಉತ್ತರ ಪ್ರದೇಶದ ಮಥುರಾದಲ್ಲಿ ಹಾವಾಡಿಗರು ಮತ್ತು ಸಾರ್ವಜನಿಕರ ಮುಂದೆಯೇ ಹಾವನ್ನು ಎತ್ತಿಕೊಂಡು ಹೋದ ವಿಡಿಯೋ ವೈರಲ್​ ಆಗಿದೆ.

ತಾವು ಪಳಗಿಸಿದ ಹಾವನ್ನು ಮಂಗಗಳು ಎತ್ತಿಕೊಂಡು ಹೋದ ಕೂಡಲೇ ಹಾವಾಡಿಗರು ಅವುಗಳ ಹಿಂದೆ ಓಡಿದರೂ ಹಾವನ್ನು ಅವುಗಳ ಹಿಡಿತದಿಂದ ಬಿಡಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಇಲ್ಲಿರುವ ಕೋತಿಗಳ ಅವಾಂತರಗಳು ಇಲ್ಲಿ ಬಹಳ ಪ್ರಸಿದ್ಧಿ ಪಡೆದಿವೆ. ಸುತ್ತಮುತ್ತ ಕುಳಿತವರ ಮೊಬೈಲ್​ಗಳು, ಕನ್ನಡಕ, ಹ್ಯಾಂಡ್​ ಬ್ಯಾಗ್​ಗಳನ್ನು ಎತ್ತಿಕೊಂಡು ಕಟ್ಟಡ ಅಥವಾ ಮರದ ಮೇಲೆ ಹತ್ತಿ ಕುಳಿತುಕೊಳ್ಳುವ ಕೋತಿಗಳಿಗೆ ತಿನ್ನಲು ಬಿಸ್ಕತ್​, ಚಿಪ್ಸ್​ನಂತಹವುಗಳನ್ನು ಏನಾದರೂ ನೀಡಿದರೆ ತಮ್ಮ ಕೈಲಿದ್ದ ವಸ್ತುಗಳನ್ನು ವಾಪಾಸ್​ ನೀಡುತ್ತವೆ. ಇಲ್ಲವಾದರೆ ಅವುಗಳ ಆಸೆ ಬಿಡುವುದೊಂದೇ ದಾರಿ.

ಕಟ್ಟಡ ಹತ್ತಿ ಕುಳಿತ ಮಂಗಗಳ ಬಳಿ ಹೋಗಲಾರದೆ ಹಾವಾಡಿಗ ಪರದಾಡಬೇಕಾಯಿತು. ಎತ್ತರವಾಗಿದ್ದ ಕಟ್ಟಡವನ್ನು ಹತ್ತಲಾರದೆ ಹಾವಾಡಿಗ ವಾಪಾಸಾಗಿದ್ದನ್ನು ವಿಡಿಯೋದಲ್ಲಿ ನೋಡಬಹುದು.

Comments are closed.