ಶ್ರೀನಗರ: ಆತನಿಗೆ ಗೊತ್ತಿತ್ತು… ಪೊಲೀಸ್ ಅಧಿಕಾರಿಗಳನ್ನು ಗುರಿಯಾಗಿರಿಸಿಕೊಂಡಿರುವ ಉಗ್ರರು ಮಾರ್ಗ ಮಧ್ಯೆ ತನಗೆ ಮೃತ್ಯುವಾಗಿ ಕಾಡಬಹುದೆಂದು. ಮೇಲಾಧಿಕಾರಿಗಳು ಸಹ ಆತನಿಗೆ ಈ ಬಗ್ಗೆ ಎಚ್ಚರಿಕೆ ನೀಡಿದ್ದರು. ಆದರೆ ತನ್ನ ವೃದ್ದ ತಂದೆ-ತಾಯಿಗಳನ್ನು ನೋಡಬೇಕೆನ್ನುವ ತವಕದಲ್ಲಿ ಆತ ಮನೆಗೆ ಹೊರಟು ನಿಂತೇ ಬಿಟ್ಟಿದ್ದ. ಆದರೆ ತನ್ನ ತಂದೆ-ತಾಯಿಗಳನ್ನು ನೋಡಲೇ ಇಲ್ಲ. ಮಗ ಬರುತ್ತಾನೆಂದು ಮನೆಬಾಗಿಲಲ್ಲಿ ನಿಂತು ಕಾಯುತ್ತಿದ್ದ ಅಪ್ಪ ಅಮ್ಮ ಕಂಡಿದ್ದು ಮಗನ ಕಳೆಬರ.
ಹೌದು, ಇದು ಜಮ್ಮು ಮತ್ತು ಕಾಶ್ಮೀರದ ಸಿಐಡಿ ಸಬ್ ಇನ್ಸಪೆಕ್ಟರ್ ಇಮ್ತಿಯಾಜ್ ಅಹ್ಮದ್ ಮಿರ್ (30) ಅವರನ್ನು ಕಳೆದುಕೊಂಡಿರುವ ವೃದ್ಧ ಪೋಷಕರ ಕರುಣಾಜನಕ ಕಥೆ. ಭಾನುವಾರ ಮಧ್ಯಾಹ್ನ ಪುಲ್ವಾಮಾ ಜಿಲ್ಲೆಯಲ್ಲಿ ಉಗ್ರರಿಂದ ಅಪಹರಿಸಲ್ಪಟ್ಟಿದ್ದ ಮಿರ್, ಸಂಜೆ ಶವವಾಗಿ ಪತ್ತೆಯಾಗಿದ್ದಾರೆ. ಕರ್ತವ್ಯ ಮುಗಿಸಿ ಮನೆಗೆ ಮರಳುತ್ತಿದ್ದ ಅವರ ವಾಹನವನ್ನು ತಡೆಗಟ್ಟಿದ್ದ ಉಗ್ರರು ನಿರ್ಜನ ಪ್ರದೇಶಕ್ಕೆ ಅವರನ್ನು ಎಳೆದೊಯ್ದು ಶೂಟ್ ಮಾಡಿದ್ದಾರೆ. ಸಂಜೆ ರುಶ್ಮಿ ನಲ್ಲಾ ಪ್ರದೇಶದಲ್ಲಿ ಅವರ ರಕ್ತಸಿಕ್ತ ದೇಹ ಸಿಕ್ಕಿದೆ.
ಬೇಡವೆಂದರೂ ಕೇಳಲಿಲ್ಲ
ಪುಲ್ವಾಮಾ ಜಿಲ್ಲೆಯ ಗ್ರಾಮವೊಂದರಲ್ಲಿ ವಾಸವಾಗಿರುವ ತಂದೆತಾಯಿಗಳನ್ನು ನೋಡಲೆಂದು ಮಿರ್ ಭಾನುವಾರ ಮುಂಜಾನೆ ಹೊರಟಿದ್ದ. ಕೆಲ ವಾರಗಳ ಹಿಂದೆ ಜೈಶ್- ಇ- ಮೊಹಮ್ಮದ್ ಸಂಘಟನೆಯವರು ಕೆಲಸ ಬಿಡಿ, ಇಲ್ಲದಿದ್ದರೆ ಸಾವನ್ನು ಎದುರಿಸಿ ಎಂದು ಪೊಲೀಸ್ ಇಲಾಖೆಯವರಿಗೆ ಎಚ್ಚರಿಕೆ ನೀಡಿದ್ದರು. ತಮ್ಮ ಹೇಳಿಕೆಯಂತೆ ಉಗ್ರರು ಪೊಲೀಸರನ್ನು ಗುರಿಯಾಗಿಸುತ್ತಿದ್ದುದರಿಂದ, ಸದ್ಯ ಮನೆಗೆ ಹೋಗಬೇಡಿ ಎಂದು ನಾನು ಮಿರ್‌ನನ್ನು ತಡೆದಿದ್ದೆ. ಆದರೆ ಬಹಳ ದಿನಗಳಿಂದ ತಂದೆ-ತಾಯಿಯನ್ನು ನೋಡದೆ ಹತಾಶನಾಗಿದ್ದ ಮಿರ್, ನಾನು ಹೋಗಲೇಬೇಕು, ಅವರ ಜತೆ ಕೆಲ ಸಮಯ ಕಳೆಯಲೇಬೇಕು ಎಂದು ಹಠ ಹಿಡಿದ. ಗಡ್ಡವನ್ನು ಶೇವ್ ಮಾಡಿಕೊಂಡು ತನ್ನ ಖಾಸಗಿ ವಾಹನದಲ್ಲಿ ಮನೆ ಕರೆ ಹೊರಟು ನಿಂತ ಆತ ಈಗ ನನ್ನನ್ನು ಉಗ್ರರು ಗುರುತಿಸಲಾರರು ಎಂದು ಹೇಳಿದ. ಅದೇ ಅವನು ನನ್ನ ಜತೆಯಾಡಿದ್ದ ಕೊನೆಯ ಮಾತು ಎಂದು ಮಿರ್ ಮೇಲಾಧಿಕಾರಿ ಕಂಬನಿ ಮಿಡಿಯುತ್ತ ಹೇಳಿದ್ದಾರೆ.
ಏಕೈಕ ಪುತ್ರ
ನಿವೃತ್ತ ಪೊಲೀಸ್ ಅಧಿಕಾರಿಯ ಏಕೈಕ ಪುತ್ರರಾಗಿರುವ ಮಿರ್ 2010ರಲ್ಲಿ ಸಬ್ ಇನ್ಸಪೆಕ್ಟರ್ ಆಗಿ ಕೆಲಸಕ್ಕೆ ಸೇರಿದ್ದರು. ದಕ್ಷಿಣ ಕಾಶ್ಮೀರದ ಗಂಡರ್ಬಲ್ ಜಿಲ್ಲೆಯಲ್ಲಿ ಐದು ವರ್ಷ ಕೆಲಸ ಮಾಡಿದ್ದ ಅವರು ಕಳೆದ ವರ್ಷವಷ್ಟೇ ಕುಲ್ಗಾಮ್ ಜಿಲ್ಲೆಗೆ ವರ್ಗಾವಣೆಗೊಂಡಿದ್ದರು. ಮಾರ್ಚ್ ತಿಂಗಳಲ್ಲಿ ಅವರನ್ನು ಸಿಐಡಿ ಇಲಾಖೆಗೆ ವರ್ಗಾಯಿಸಲಾಗಿತ್ತು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಮೊದಲೇ ಮಾಹಿತಿ ಸಿಕ್ಕಿತ್ತು
ಮಿರ್ ಪ್ರಯಾಣದ ಬಗ್ಗೆ ಉಗ್ರರಿಗೆ ಮೊದಲೇ ಮಾಹಿತಿ ಸಿಕ್ಕಿತ್ತು. ಮಾರ್ಗ ಮಧ್ಯೆ ಕಾದುಕೊಂಡಿದ್ದ ಉಗ್ರರು ಅವರನ್ನು ಅಪಹರಿಸಿ ಹತ್ಯೆಗೈದರು. ಉಗ್ರರಿಗೆ ಅವರು ಬರುತ್ತಿರುವ ಬಗ್ಗೆ ಮಾಹಿತಿ ನೀಡಿದವರ್ಯಾರು ಎಂಬ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಪೊಲೀಸ್ ಕೆಲಸ ಬಿಡಿ, ಇಲ್ಲ ಸಾಯಿರಿ
”ಪೊಲೀಸ್ ಕೆಲಸ ಬಿಡಿ, ಇಲ್ಲದಿದ್ದರೆ ನಮ್ಮ ಕೈಯಲ್ಲಿ ಸಾಯುತ್ತೀರ. ಕುಟುಂಬ ಸಮೇತ ನಿಮ್ಮನ್ನು ನಾಶ ಪಡಿಸುತ್ತೇವೆ”, ಎಂದು ಹಿಜ್ಬುಲ್ ಮುಜಾಹಿದ್ದೀನ್ ಉಗ್ರರು ಕಳೆದ ತಿಂಗಳು ಎಚ್ಚರಿಕೆ ನೀಡಿದ್ದರು. ಸೆಪ್ಟೆಂಬರ್ 21ರಂದು ಮೂವರು ಪೊಲೀಸರನ್ನು ಅಪಹರಿಸಿ ಕೊಂದಿದ್ದ ಅವರು ಇಲಾಖೆಯ ಸಿಬ್ಬಂದಿ ಮತ್ತು ಅವರ ಕುಟುಂಬದಲ್ಲಿ ಆತಂಕವನ್ನು ಹುಟ್ಟುಹಾಕಿದ್ದಾರೆ.
Comments are closed.