ನವದೆಹಲಿ: ಬಿಜೆಪಿ ಮೈತ್ರಿಕೂಟದ ವಿರುದ್ಧ ಹೋರಾಡಲು ಸಜ್ಜಾಗಿರುವ ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ನೇತೃತ್ವದ ತೆಲುಗು ದೇಶಂ ಪಕ್ಷ ಕಾಂಗ್ರೆಸ್ ಜೊತೆಗೆ ಮೈತ್ರಿ ಮಾಡಿಕೊಂಡಿರುವುದಾಗಿ ಪ್ರಕಟಿಸಿದೆ. ಈ ಬೆನ್ನಲ್ಲೇ ಕಾಂಗ್ರೆಸ್-ಟಿಡಿಪಿ ಮೈತ್ರಿಗೆ ತೆಲುಗು ದೇಶಂ ಪಕ್ಷದ ಸಂಸ್ಥಾಪಕ & ದಿವಗಂತ ಮಾಜಿ ಸಿಎಂ ಎನ್ಟಿ ರಾಮರಾವ್ ಅವರ ಪತ್ನಿ ಲಕ್ಷ್ಮೀ ಪಾರ್ವತಿ ಅವರಿಂದಲೇ ವಿರೋಧ ವ್ಯಕ್ತವಾಗಿದೆ. ಜೊತೆಗೆ ತೆಲುಗು ದೇಶಂ ಪಕ್ಷದ ಮಾನ ಹಾನಿಗೆ ಸಿಎಂ ನಾಯ್ಡು ಮುಂದಾಗಿದ್ದಾರೆ ಎಂದು ಲಕ್ಷ್ಮೀ ಆರೋಪಿಸಿದ್ದಾರೆ.
ಎರಡು ದಿನಗಳ ಹಿಂದೆ ದೆಹಲಿಗೆ ತೆರಳಿದ್ದ ಸಿಎಂ ಚಂದ್ರಬಾಬು ನಾಯ್ಡು ರಾಹುಲ್ ಜೊತೆಗೆ ಮಾತುಕತೆ ನಡೆಸಿ ಕಾಂಗ್ರೆಸ್ನೊಂದಿಗೆ ಟಿಡಿಪಿ ಮೈತ್ರಿ ಮಾಡಿಕೊಂಡಿರುವುದಾಗಿ ಪ್ರಕಟಿಸಿದರು. ಈ ಬೆನ್ನಲ್ಲೇ ತೆಲುಗು ದೇಶಂ ಪಕ್ಷದ ಸಂಸ್ಥಾಪಕರಲ್ಲಿ ಒಬ್ಬರಾದ ಮಾಜಿ ಸಿಎಂ ಎನ್ಟಿ ರಾಮರಾವ್ ಅವರ ಪತ್ನಿ ಲಕ್ಷ್ಮೀ ಪಾರ್ವತಿ ಅವರು ಮೈತ್ರಿಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಅಲ್ಲದೇ ತೆಲುಗು ಮಣ್ಣಿನ ಮಕ್ಕಳ ಮಾನ ಹರಾಜು ಹಾಕಲು ಚಂದ್ರಬಾಬು ನಾಯ್ಡು ಹೊರಟಿದ್ದಾರೆ ಎಂದು ಪಾರ್ವತಿ ಅವರು ಕಿಡಿಕಾರಿದ್ದಾರೆ.
ಸೀದಾ ಮಾಜಿ ಸಿಎಂ ಎನ್ಟಿ ರಾಮರಾವ್ ಅವರ ಸಮಾಧಿ ಬಳಿ ತೆರಳಿದ ಲಕ್ಷ್ಮೀ ಪಾರ್ವತಿ ಅವರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ ಎನ್ನಲಾಗಿದೆ. ಸಮಾಧಿ ಮುಂದೆ ನಾಲ್ಕು ಪೇಪರ್ಗಳ ಪ್ರತಿಯೊಂದನ್ನಿಟ್ಟು ಮತ್ತೆ ಹುಟ್ಟಿ ಬನ್ನಿ ಎಂದು ನಂದಮೂರಿ ತಾರಕ ರಾಮರಾವ್ರಲ್ಲಿ ಮನವಿ ಮಾಡಿದ್ದಾರೆ. ಕಾಂಗ್ರೆಸ್ ಜೊತೆಗೆ ಮೈತ್ರಿ ಮಾಡಿಕೊಳ್ಳುವ ಮೂಲಕ ಸಿಎಂ ನಾಯ್ಡು ತೆಲುಗು ದೇಶಂ ಪಕ್ಷದ ಸ್ವಾಭಿಮಾನವನ್ನು ಕಾಂಗ್ರೆಸ್ ಪಾಲು ಮಾಡಿದ್ದಾರೆ. ತೆಲುಗು ಮಣ್ಣಿನ ಸ್ವಾಭಿಮಾನಕ್ಕಾಗಿ ಮತ್ತೆ ಹುಟ್ಟಿ ಬನ್ನಿ ಎಂದು ಪಾರ್ವತಿ ಅವರು ತಮ್ಮ ಅಸಹಾಯಕತೆಯನ್ನು ತೋರಿದ್ಧಾರೆ.
ಕಾಂಗ್ರೆಸ್ ಟಿಡಿಪಿ ಮೈತ್ರಿ: ಆಂಧ್ರಪ್ರದೇಶ ಸೇರಿದಂತೆ ತೆಲಂಗಾಣದಲ್ಲಿ ಡಿಸೆಂಬರ್ 7ರಂದು ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲೂ ಮೈತ್ರಿ ಮಾಡಿಕೊಳ್ಳುವ ಬಗ್ಗೆ ಉಭಯ ಪಕ್ಷದ ನಾಯಕರು ಚರ್ಚಿಸಿದ್ದಾರೆ ಎನ್ನಲಾಗಿದೆ. ಈಗಾಗಲೇ ಕಾಂಗ್ರೆಸ್-ಟಿಡಿಪಿ ಮೈತ್ರಿಯ ಸೀಟು ಹಂಚಿಕೆ ಕುರಿತು ಮಾತುಕತೆ ನಡೆಸಲಾಗಿದೆ. ಬಳಿಕ ಬಿಜೆಪಿಯನ್ನು ಸೋಲಿಸುವ ಸಲುವಾಗಿಯೇ ಕಾಂಗ್ರೆಸ್ ಟಿಡಿಪಿ ಮೈತ್ರಿಯಾಗಿದೆ ಎಂದು ರಾಹುಲ್ ಗಾಂಧಿ ಸ್ಪಷ್ಟಪಡಿಸಿದ್ದಾರೆ.
ತೃತೀಯ ರಂಗ ಸಾಧ್ಯತೆ: ಮುಂದಿನ ಚುನಾವಣೆ ಕಾರ್ಯತಂತ್ರಗಳ ಬಗ್ಗೆ ಚರ್ಚೆ ನಡೆಸಲಾಗುವುದು. ಈಗಾಗಲೇ ಹಲವಾರು ಪಕ್ಷಗಳು ಬಿಜೆಪಿ ಮೈತ್ರಿಕೂಟದ ವಿರುದ್ಧ ಹೋರಾಡಲು ಮುಂದಾಗಿವೆ. ಮುಂದಿನ ದಿನಗಳಲ್ಲಿ ಎಲ್ಲಾ ಸಮಾನ ಮನಸ್ಕ ಪಕ್ಷಗಳು ಒಂದೇ ವೇದಿಕೆ ಅಡಿಯಲ್ಲಿ ಬರಲಿವೆ. ಪ್ರಜಾಪ್ರಭುತ್ವವನ್ನು ತಮಗೆ ಬೇಕಾದಂತೆ ಬಳಸಿಕೊಳ್ಳುತ್ತಿರುವ ಬಿಜೆಪಿ ವಿರುದ್ಧ ಪ್ರಾದೇಶಿಕ ಪಕ್ಷಗಳ ತೃತೀಯ ರಂಗ ಪುಟಿದೇಳಲಿದೆ ಎನ್ನುತ್ತಾರೆ ಸಿಎಂ ನಾಯ್ಡು.
ಬಿಜೆಪಿ ಸೋಲಿಸುವುದೇ ನಮ್ಮ ಗುರಿ: ಬಿಜೆಪಿಯನ್ನು ಸೋಲಿಸುವುದೇ ನಮ್ಮ ಮುಖ್ಯ ಗುರಿ. ಇಡೀ ದೇಶದ ಪ್ರಜಾತಾಂತ್ರಿಕ ವ್ಯವಸ್ಥೆಯನ್ನು ಕೋಮುವಾದಿ ಬಿಜೆಪಿಯಿಂದ ಕಾಪಾಡಬೇಕಾದರೆ ಈ ಮೈತ್ರಿ ಗಟ್ಟಿಯಾಗಬೇಕು ಎಂದು ರಾಹುಲ್ ಗಾಂದಿ ತಿಳಿಸಿದ್ಧಾರೆ. ಅಲ್ಲದೇ ದೇಶದಲ್ಲಿ ಭ್ರಷ್ಟಾಚಾರ ತಡೆಗಟ್ಟುತ್ತೇವೆ ಎಂದು ಹೇಳಿದ್ದ ಕೇಂದ್ರ ಈಗ ನಾಟಕ ಮಾಡುತ್ತಿದೆ. ಭ್ರಷ್ಟಚಾರ ತನಿಖೆ ನಡೆಸುವ ಸಂಸ್ಥೆಗಳ ಮೇಲೆಯೇ ಸರ್ಕಾರ ದಾಳಿ ನಡೆಸುತ್ತಿದೆ. ಇದು ಮೋದಿ ಸರ್ಕಾರದ ಸರ್ವಾಧಿಕಾರ ಧೋರಣೆಯ ಪ್ರತೀಕ ಎಂದು ಕಿಡಿಕಾರಿದರು.
ಎನ್ಡಿಎ V/S ಟಿಡಿಪಿ: ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡಲು ಸಾಧ್ಯವಿಲ್ಲ ಎಂದು ಕೇಂದ್ರ ಸರಕಾರ ಸ್ಪಷ್ಟಪಡಿಸಿದ ಬಳಿಕ ಟಿಡಿಪಿ ಎನ್ಡಿಎ ಮೈತ್ರಿಯಿಂದ ಹೊರ ನಡೆಯಿತು. ಬಿಕ್ಕಟ್ಟು ಶಮನಗೊಳಿಸುವ ನಿಟ್ಟಿನಲ್ಲಿ ಟಿಡಿಪಿ ಸಂಸದರು ಹಣಕಾಸು ಸಚಿವ ಅರುಣ್ ಜೇಟ್ಲಿ ಜತೆಗೆ ನಡೆಸಿದ ಮಾತುಕತೆಯಯೂ ಫಲಪ್ರದವಾದ ಕಾಣಲಿಲ್ಲ. ಬಳಿಕ ಮಧ್ಯಪ್ರವೇಶಿಸಿದ ರಾಹುಲ್ ಗಾಂಧಿ ಅವರು, ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಲ್ಲಿ ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡುವುದಾಗಿ ಹೇಳಿದ್ದರು.
Comments are closed.