ನವದೆಹಲಿ: ಅಕ್ಟೋಬರ್-ನವೆಂಬರ್ ತಿಂಗಳು ಬಂತೆಂದರೆ ರಾಜಧಾನಿ ದಿಲ್ಲಿಯ ಜನರಿಗೆ ಭಯ, ಯಾತನೆ. ಈ ವೇಳೆ ದಿಲ್ಲಿಯಲ್ಲಿ ವಿಪರೀತ ಮಾಲಿನ್ಯ. ವರ್ಷವಿಡೀ ದಿಲ್ಲಿಯ ಗಾಳಿ ಸುರಕ್ಷಿತವಾಗಂತೂ ಇರೋದಿಲ್ಲ. ಆದರೆ, ಅಕ್ಟೋಬರ್ ತಿಂಗಳ ದ್ವಿತೀಯಾರ್ಧದಲ್ಲಿ ಮಾಲಿನ್ಯವು ಅಪಾಯಕಾರಿ ಮಟ್ಟವನ್ನೂ ಮೀರಿ ಹೋಗುತ್ತದೆ. ದಿಲ್ಲಿಯ ಮಾಲಿನ್ಯಕ್ಕೆ ಒಂದೆರಡಲ್ಲ, ಹಲವು ಕಾರಣಗಳಿವೆ. ವಾಹನಗಳ ಮಾಲಿನ್ಯ, ಕೈಗಾರಿಕೆಗಳ ಮಾಲಿನ್ಯ, ಕಟ್ಟಡ ನಿರ್ಮಾಣದ ಮಾಲಿನ್ಯ ಇತ್ಯಾದಿಗಳು ದಿಲ್ಲಿಯನ್ನ ವರ್ಷವಿಡೀ ಬಾಧಿಸುತ್ತವೆ. ಆದರೆ, ಅಕ್ಟೋಬರ್ 15ರಿಂದ 31ರವರೆಗೆ ಇಲ್ಲಿನ ಮಾಲಿನ್ಯ ಹೊಸ ಮಟ್ಟಕ್ಕೇರುತ್ತದೆ. ಇದಕ್ಕೆ ಕಾರಣ ಪಂಜಾಬ್ ರೈತರು ತಮ್ಮ ಕೃಷಿ ತ್ಯಾಜ್ಯವನ್ನು ಸುಡುವುದು. ಇಲ್ಲಿಂದ ಹೊರಹೊಮ್ಮುವ ಹೊಗೆಯು ಸಮೀಪದಲ್ಲೇ ಇರುವ ದಿಲ್ಲಿ ನಗರವನ್ನು ಮುತ್ತಿಕೊಂಡು ಅಲ್ಲಿ ಜನರಿಗೆ ಉಸಿರುಗಟ್ಟುವಂತೆ ಮಾಡುತ್ತದೆ. ಹಾಗೆಯೇ, ಅಪಾಯಕಾರಿಯಾದ ಸೂಕ್ಷ್ಮ ವಸ್ತುಗಳು ಈ ಹೊಗೆಯಲ್ಲಿ ಮಿಶ್ರವಾಗಿರುವುದರಿಂದ ಜನರ ಆರೋಗ್ಯಕ್ಕೆ ಮಾರಕವಾಗಿ ಪರಿಣಮಿಸುತ್ತವೆ. ಇಷ್ಟೆಲ್ಲಾ ಅಪಾಯ ಉಂಟು ಮಾಡಿದರೂ ಪಂಜಾಬ್ ರೈತರು ತಮ್ಮ ಕೃಷಿ ತ್ಯಾಜ್ಯವನ್ನು ಯಾಕೆ ಸುಡುತ್ತಾರೆ? ಸುಡದೇ ಇರಲು ಸಾಧ್ಯವಿಲ್ಲವಾ?
ಅಸಹಾಯಕ ರೈತರು:
ಪಂಜಾಬ್ ಮತ್ತು ಹರಿಯಾಣದಲ್ಲಿ ರೈತರು ವರ್ಷಕ್ಕೆ ಎರಡು ಬೆಳೆ ಬೆಳೆಯುತ್ತಾರೆ. ಅಕ್ಟೋಬರ್ವರೆಗೂ ಭತ್ತ ಬೆಳೆಯುತ್ತಾರೆ. ಅಕ್ಟೋಬರ್ ನಂತರ ಗೋದಿಯ ನಾಟಿ ಮಾಡುತ್ತಾರೆ. ಈ ಎರಡು ಬೆಳೆಗಳ ನಡುವೆ ಅಂತರ ಕೆಲವೇ ದಿನ ಮಾತ್ರವಿರುತ್ತದೆ. ಭತ್ತದ ಫಸಲು ಕೊಯ್ದು ಉಳಿಯುವ ತ್ಯಾಜ್ಯವನ್ನು ಒಂದೆರಡು ದಿನಗಳಲ್ಲಿ ಏನು ಮಾಡಲು ಸಾಧ್ಯ..? ಅಷ್ಟನ್ನೂ ಎಲ್ಲಿಯಾದರೂ ವಿಲೇವಾರಿ ಮಾಡಬೇಕೆಂದರೆ ವಿಪರೀತ ಕೂಲಿ ಖರ್ಚು ತಗುಲುತ್ತದೆ. ಬಡ ರೈತ ಅಷ್ಟು ದುಡ್ಡನ್ನು ಎಲ್ಲಿಂದ ತಂದಿಯಾನು? ರೈತರಿಗೆ ಇರುವ ಸಿಂಪಲ್ ಸಲ್ಯೂಷನ್ ಎಂದರೆ ಅಷ್ಟೂ ತ್ಯಾಜ್ಯವನ್ನು ಸುಡುವುದು. ಈ ಹೊಗೆಯಿಂದ ದಿಲ್ಲಿ ಜನರು ಪರಿಪಾಟಲಿಗೆ ಒಳಗಾಗುತ್ತಾರೆ ಎಂದು ಗೊತ್ತಿದ್ದರೂ ಪಂಜಾಬ್ ಮತ್ತು ಹರಿಯಾಣದ ರೈತರು ಬೇರೆ ವಿಧಿಯಿಲ್ಲದೆ ಹೊಲಕ್ಕೆ ಬೆಂಕಿ ಕಡ್ಡಿ ಗೀರಿ ಹಾಕುವುದು ಅನಿವಾರ್ಯವೇ ಆಗಿದೆ.
ನಿಜಕ್ಕೂ ಅನಿವಾರ್ಯವಾ?
ಪಂಜಾಬ್ ರೈತರಿಗೆ ತಮ್ಮ ಕೃಷಿ ತ್ಯಾಜ್ಯವನ್ನು ಸುಡುವುದು ಅನಿವಾರ್ಯವಲ್ಲ. ಅವರಿಗೆ ಬೇರೆ ದಾರಿ ಇಲ್ಲದ್ದರಿಂದ ಅವರು ಬೆಂಕಿ ಹಾಕುವ ಕೆಲಸ ಮಾಡುತ್ತಿದ್ದಾರೆ. ಸುಡದಿದ್ದರೆ ಮುಂದಿನ ಬೆಳೆಗೆ ಜಮೀನನ್ನು ಅಣಿಗೊಳಿಸಲು ಸಾಧ್ಯವಾಗುವುದಿಲ್ಲ. ಇದೊಂದು ಕಾರಣಕ್ಕೆ ಸುಡುತ್ತಿದ್ದಾರೆಯೇ ವಿನಃ, ಕೃಷಿ ತ್ಯಾಜ್ಯ ಸುಡುವುದೊಂದೇ ರೈತರ ಉದ್ದೇಶವಲ್ಲ.
ಏನಿವೆ ಮಾರ್ಗೋಪಾಯಗಳು?
1) ಒಂದು ಬೆಳೆಯಿಂದ ಮತ್ತೊಂದು ಬೆಳೆಗೆ 1 ತಿಂಗಳು ಅಂತರ ಇರಬೇಕು; ಮತ್ತು ನೀರಿನ ವ್ಯವಸ್ಥೆಯಾಗಬೇಕು
2) ತ್ಯಾಜ್ಯ ವಿಲೇವಾರಿಗೆ ಕೂಲಿ ಖರ್ಚು ಇತರೆ ಸೇರಿ ಸರಕಾರದಿಂದ ಸೂಕ್ತ ಧನಸಹಾಯ ಸಿಗಬೇಕು
3) ಸರಕಾರವೇ ರೈತರ ಎಲ್ಲಾ ಕೃಷಿ ತ್ಯಾಜ್ಯಗಳನ್ನ ವಿಲೇವಾರಿ ಮಾಡುವ ಹೊಣೆ ಹೊತ್ತುಕೊಳ್ಳಬೇಕು
ಕೆಲ ವರ್ಷಗಳ ಹಿಂದಿನವರೆಗೂ ಜೂನ್ 1ರ ಆಸುಪಾಸಿನ ದಿನದಂದು ಭತ್ತರ ನಾಟಿ ಶುರುವಾಗಿ, ಅಕ್ಟೋಬರ್ನಷ್ಟರಲ್ಲಿ ಕಟಾವಾಗಿಬಿಡುತ್ತಿತ್ತು. ಆದರೆ, ನೀರಿನ ಕೊರತೆಯಿಂದಾಗಿ ಸರಕಾರವು ಭತ್ತದ ನಾಟಿಗೆ ಜೂನ್ 20ರ ದಿನಾಂಕ ನಿಗದಿ ಮಾಡಿದೆ. ಇದರಿಂದಾಗಿ, ಕಟಾವು ವಿಳಂಬವಾಗುತ್ತಿದೆ ಎಂದು ರೈತರು ಹೇಳುತ್ತಾರೆ. ಭತ್ತ ಬೆಳೆಯ ಕಟಾವಾಗಿ ಮುಂದಿನ ಗೋದಿ ಬೆಳೆಗೆ ಸಾಕಷ್ಟು ದಿನಗಳ ಅಂತರವಿದ್ದರೆ ಭತ್ತದ ತ್ಯಾಜ್ಯವನ್ನು ಜಮೀನಿನ ಮಣ್ಣಲ್ಲಿ ಬೆರೆಸಿ ಹದ ಮಾಡಲು ರೈತರಿಗೆ ಸಮಯಾವಕಾಶ ಸಿಗುತ್ತಿತ್ತು. ಆದರೆ, ಈಗಿರುವ ಪರಿಸ್ಥಿತಿಯಲ್ಲಿ ಅದು ಸಾಧ್ಯವಿಲ್ಲ. ತ್ಯಾಜ್ಯವನ್ನು ಜಮೀನಿನಲ್ಲೇ ಉಳಿಸಿ ಹದ ಮಾಡಲು ಈ ಸಂದರ್ಭದಲ್ಲಿ ನೀರು ಸಿಕ್ಕೋದಿಲ್ಲ. ಹಾಗೆಯೇ, ತ್ಯಾಜ್ಯ ವಿಲೇವಾರಿ ಮಾಡಲು ಒಂದು ಎಕರೆಗೆ ಏಳೆಂಟು ಸಾವಿರ ರೂ ಖರ್ಚಾದರೂ ತಗುಲುತ್ತದೆ.
ತ್ಯಾಜ್ಯ ಸುಟ್ಟರೆ ವಾಯು ಮಾಲಿನ್ಯ ಉಂಟಾಗುತ್ತದೆ ಎಂದು ರೈತರಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನು ಪಂಜಾಬ್ ಸರಕಾರ ಮಾಡುತ್ತಿದೆ. ಒಂದು ಎಕರೆಯ ಭತ್ತದ ತ್ಯಾಜ್ಯ ಸುಟ್ಟರೆ 2,500 ರೂ ದಂಡ ವಿಧಿಸುವುದಾಗಿಯೂ ಸರಕಾರ ಕಟ್ಟಳೆ ವಿಧಿಸಿದೆ. ಹಾಗೆಯೇ, ಕೇಂದ್ರ ಸರಕಾರ ಕೂಡ ಭತ್ತದ ತ್ಯಾಜ್ಯ ವಿಲೇವಾರಿಗೆ ಒಂದಿಷ್ಟು ಅನುದಾನ ಕೊಡುತ್ತಿದೆ. ಇದ್ಯಾವುದೂ ರೈತರ ಮೇಲೆ ಪರಿಣಾಮ ಬೀರುತ್ತಿಲ್ಲ. ಎಕರೆಗೆ 7 ಸಾವಿರ ರೂ ಖರ್ಚು ಮಾಡುವ ಬದಲು ಎರಡೂವರೆ ಸಾವಿರ ರೂ ದಂಡ ಕಟ್ಟಿ ಕೈತೊಳೆದುಕೊಳ್ಳುವುದು ಲೇಸು ಎನ್ನುತ್ತಾರೆ ಬಡ ರೈತರು. ಐದಾರು ದಿನ ಜೈಲಿಗೆ ಬೇಕಾದರೂ ಹೋಗಲು ಈ ರೈತ ಸಮೂಹ ಸಿದ್ಧವಿದೆ.
ದಿಲ್ಲಿಯ ಜನರಿಗೆ ಅಪಾಯವಾಗುತ್ತಿದೆ ಎಂದು ತಾವು ಕಷ್ಟಕ್ಕೊಳಗಾಗಲು ಸಾಧ್ಯವಿಲ್ಲ ಎಂಬುದು ಪಂಜಾಬ್ ರೈತರ ವಾದ. ತಮಗೆ ಭತ್ತ ಅಥವಾ ಗೋದಿಗೆ ಪರ್ಯಾಯವಾಗಿ ಓಪಿಯಮ್(ಹಫೀಮು) ಬೆಳೆಯಲಾದರೂ ಅವಕಾಶ ಕೊಡಿ ಎನ್ನುತ್ತಾರವರು. ಅಷ್ಟಕ್ಕೂ ದಿಲ್ಲಿಯ ಜನರಿಂದ ತಮಗೆ ಆಗುತ್ತಿರುವ ಅನುಕೂಲವಾದರೂ ಏನು ಎಂದು ಈ ರೈತರು ಮಾರ್ಮಿಕವಾಗಿ ಪ್ರಶ್ನಿಸುತ್ತಿದ್ದಾರೆ.
ಸರಕಾರದಿಂದ ರೈತರಿಗೆ ಸರ್ವಕಾಲಕ್ಕೂ ನೀರಿನ ಪೂರೈಕೆಯಾದರೆ ಈ ಸಮಸ್ಯೆಗೆ ಮುಕ್ತ ಹಾಡಬಹುದು. ಆದರೆ, 5 ನದಿಗಳಿದ್ದರೂ ಪಂಜಾಬ್ನಲ್ಲಿ ನೀರಿನ ಅಭಾವವಿದೆ. ಈ ರಾಜ್ಯದ ಅಂತರ್ಜಲ ಬಹುತೇಕ ನಶಿಸಿ ಹೋಗುತ್ತಿದೆ. ಮುಂದಿನ 30 ವರ್ಷಗಳಲ್ಲಿ ರಾಜಸ್ಥಾನದಂತೆ ಪಂಜಾಬ್ ಕೂಡ ಬರಡು ರಾಜ್ಯವಾಗಲಿದೆ ಎಂದು ಇಲ್ಲಿನ ಪರಿಸರ ತಜ್ಞರು ಹೇಳುತ್ತಾರೆ. ಒಟ್ಟಿನಲ್ಲಿ ಇದು ಸದ್ಯಕ್ಕೆ ಭಾರತದ ಕೃಷಿ ವಲಯದ ಕರಾಳ ಸ್ಥಿತಿಗೆ ಹಿಡಿದಿರುವ ಕೈಗನ್ನಡಿಯಾಗಿದೆ.
Comments are closed.