ಅಂತರಾಷ್ಟ್ರೀಯ

ದಶಕದ ಸೆರೆವಾಸದ ಬಳಿಕ ಭಗವದ್ಗೀತೆ ಕೊಂಡೊಯ್ದ ಪಾಕಿಸ್ತಾನಿ!

Pinterest LinkedIn Tumblr


ವಾರಾಣಸಿ: ಬರೋಬ್ಬರಿ 16 ವರ್ಷಗಳ ಬಳಿಕ ವಾರಾಣಸಿ ಜೈಲಿನಿಂದ ಪಾಕಿಸ್ತಾನದ ಪ್ರಜೆ ಜಲಾಲುದ್ದೀನ್ ಬಿಡುಗಡೆ ಹೊಂದಿದ್ದಾನೆ. ಈತ ಈಗ ತನ್ನ ತವರಿಗೆ ಕೊಂಡೊಯ್ಯುತ್ತಿರುವ ವಸ್ತು ಯಾವುದು ಗೊತ್ತೇ?

ಭಗವದ್ಗೀತೆ!

ಅನುಮಾನಾಸ್ಪದ ದಾಖಲೆಗಳನ್ನು ಹೊಂದಿದ್ದ ಪ್ರಕರಣದಲ್ಲಿ ಕಳೆದ 16 ವರ್ಷಗಳ ಹಿಂದೆ ವಾರಾಣಸಿಯ ಕಂಟೋನ್‌ಮೆಂಟ್ ಪ್ರದೇಶದಲ್ಲಿ ಬಂಧಿತನಾಗಿದ್ದ ಜಲಾಲುದ್ದೀನ್, ಭಾನುವಾರ ಬಿಡುಗಡೆ ಭಾಗ್ಯ ಹೊಂದಿದ್ದಾನೆ.

ಅನುಮಾನಾಸ್ಪದ ರೀತಿಯಲ್ಲಿ ಸುಳಿದಾಡುತ್ತಿದ್ದ ಹಾಗೂ ಕೆಲವೊಂದು ರಹಸ್ಯ ದಾಖಲೆ ಹೊಂದಿದ್ದ ಆರೋಪದ ಮೇಲೆ ಪಾಕಿಸ್ತಾನದ ಸಿಂಧ್‌ ಪ್ಯಾಂತ್ಯಕ್ಕೆ ಸೇರಿರುವ ಜಲಾಲುದ್ದೀನ್ ಎಂಬಾತನನ್ನು ವಾರಣಸಿಯ ಕಂಟೋನ್ಮೆಂಟ್ ಪ್ರದೇಶದಲ್ಲಿ ಬಂಧಿಸಲಾಗಿತ್ತು ಎಂದು ವಾರಾಣಸಿಯ ಕೇಂದ್ರ ಕಾರಾಗೃದ ಹಿರಿಯ ಅಧೀಕ್ಷಕ ಅಂಬರೀಷ್‌ ಗೌಡ್ ಅವರು ಮಾಧ್ಯಮಕ್ಕೆ ಮಾಹಿತಿ ನೀಡಿದ್ದರು.

ಜೈಲು ಶಿಕ್ಷೆ ಮುಗಿಸಿ ತವರಿಗೆ ವಾಪಸಾಗುತ್ತಿರುವ ಜಲಾಲುದ್ದೀನ್, ತನ್ನೊಂದಿಗೆ ಹಿಂದುಗಳ ಪವಿತ್ರ ಗ್ರಂಥ ಭಗವದ್ಗೀತೆಯನ್ನು ಕೊಂಡೊಯ್ದಿರುವುದನ್ನು ಅಂಬರೀಷ್‌ ಗೌಡ್ ಖಚಿತಪಡಿಸಿದ್ದಾರೆ.

ಬಂಧನಕ್ಕೊಳಗಾದ ಸಂದರ್ಭದಲ್ಲಿ ಕೇವಲ ಪ್ರೌಢ ಶಿಕ್ಷಣ ಪಡೆದಿದ್ದ ಜಲಾಲುದ್ದೀನ್, ಸೆರೆವಾಸದಲ್ಲೇ 10ನೇ ತರಗತಿ ತೇರ್ಗಡೆಯಾಗಿದ್ದಾನೆ. ಬಳಿಕ ಇಂದಿರಾ ಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾಲಯದಲ್ಲಿ ಎಂಎ ಪದವಿ ಪೂರ್ಣಗೊಳಿಸಿದ್ದಾನೆ. ಅಷ್ಟೇ ಅಲ್ಲದೆ, ಜೈಲಿನಲ್ಲಿ ಎಲೆಕ್ಟ್ರಿಶಿಯನ್ ತರಬೇತಿಯನ್ನು ಮುಗಿಸಿದ್ದು, ಕಳೆದ ಮೂರು ವರ್ಷದಿಂದ ಜೈಲಿನ ಕ್ರಿಕೆಟ್ ಪಂದ್ಯಾವಳಿಯಲ್ಲಿ ಅಂಪೈರ್ ಆಗಿ ಕಾರ್ಯನಿರ್ವಹಿಸಿದ್ದಾನೆ.

ಜಲಾಲುದ್ದೀನ್‌ನನ್ನು ವಿಶೇಷ ತಂಡದ ಅಧಿಕಾರಿಗಳು ಅಮೃತಸರಗೆ ಕರೆದುಕೊಂಡು ಹೋಗಿದ್ದು, ವಾಘಾ ಗಡಿಯಲ್ಲಿ ಸಂಬಂಧಿತ ಅಧಿಕಾರಿಗಳಿಗೆ ಆತನನ್ನು ಒಪ್ಪಿಸಲಿದ್ದಾರೆ. ಬಳಿಕ ಆತ ಪಾಕಿಸ್ತಾನ ತಲುಪಲಿದ್ದಾನೆ.

Comments are closed.