ದೆಹಲಿ: ಉತ್ತರ ಪ್ರದೇಶದ ಅಮೇಥಿ ಕ್ಷೇತ್ರದಲ್ಲಿ ರಾಹುಲ್ ಗಾಂಧಿ ಎದುರು ಸ್ಪರ್ಧಿಸಿ ಪರಾಭವಗೊಂಡಿದ್ದ ಕೇಂದ್ರ ಜವಳಿ ಸಚಿವೆ ಸ್ಮತಿ ಇರಾನಿ ಅಲ್ಲಿನ ಪಕ್ಷದ ಮಹಿಳಾ ಕಾರ್ಯಕರ್ತೆಯರಿಗೆ ದೀಪಾವಳಿ ಹಬ್ಬಕ್ಕೆೆ 10,000 ಸೀರೆಗಳನ್ನು ಉಡುಗೊರೆಯಾಗಿ ಕಳುಹಿಸಿದ್ದಾರೆ.
2014ರಲ್ಲಿ ಅಮೇಥಿಯಲ್ಲಿ ಕಾಂಗ್ರೆೆಸ್ ಅಧ್ಯಕ್ಷ ರಾಹುಲ್ ಗಾಂಧಿ ಎದುರು ಬಿಜೆಪಿಯಿಂದ ಕಣಕ್ಕಿಳಿದಿದ್ದ ಸ್ಮತಿ ಇರಾನಿ ಕಡಿಮೆ ಅಂತರದಲ್ಲಿ ಸೋಲು ಅನುಭವಿಸಿದ್ದರು. 2019ರಲ್ಲೂ ಅಲ್ಲಿಂದಲೇ ಸ್ಪರ್ಧೆ ಮಾಡಲು ಬಯಸಿರುವ ಇರಾನಿ ಅಮೇಥಿಯೊಂದಿಗೆ ನಿರಂತರ ಸಂಪರ್ಕವಿರಿಸಿಕೊಂಡಿದ್ದಾರೆ.
ಸೀರೆಗಳನ್ನು ಉಡುಗೊರೆಯಾಗಿ ಪಡೆದವರಿಗೆ ಅವು ಎಂತಹ ಸೀರೆಗಳು ಎಂದು ತಿಳಿದಿಲ್ಲ. ಆದರೆ ಅವರು ತೋರಿಸಿರುವ ವಿಶ್ವಾಸ ಮತ್ತು ಪ್ರೀತಿ ಮುಖ್ಯವಾದುದು ಎಂದು ಅವರು ಹೇಳುತ್ತಾರೆ. ಬಿಜೆಪಿ ಕಾರ್ಯಕರ್ತೆ ಆಶಾ ಬಾಜಪೈ 2019ರಲ್ಲಿ ಅವರು ಆಶ್ಚರ್ಯಕರ ರೀತಿಯಲ್ಲಿ ಗೆಲುವು ಸಾಧಿಸಲಿದ್ದಾರೆ ಎಂದು ಭವಿಷ್ಯ ನುಡಿಯುತ್ತಾರೆ.
2014ರಿಂದಲೂ ಅವರು ಕೇತ್ರದ ಮತದಾರರೊಂದಿಗೆ ಸಂಪರ್ಕವಿರಿಸಿಕೊಂಡಿದ್ದಾರೆ. ಅವರು ಕಳುಹಿಸಿರುವ ಉಡುಗೊರೆಯನ್ನು ರಾಜಕೀಯ ದೃಷ್ಟಿಯಿಂದ ನೋಡಬಾರದು. ಅವರು ತಮ್ಮ ಸಂತೋಷವನ್ನು ಜನರೊಂದಿಗೆ ಹಂಚಿಕೊಳ್ಳುವ ಭಾವನೆಯಷ್ಟೇ ಮುಖ್ಯ ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ಉಮಾ ಶಂಕರ ಪಾಂಡೆ ಹೇಳುತ್ತಾರೆ.
ಸೀರೆಗಳು ಗೆಲುವನ್ನು ತಂದುಕೊಡುವುದಿಲ್ಲ. ಮತ್ತೊಮ್ಮೆ ಸೋಲಿನ ರುಚಿ ಕಾಣಲು 2019ರಲ್ಲೂ ಸ್ಪರ್ಧೆ ಮಾಡುವಂತೆ ಅವರಿಗೆ ಆಹ್ವಾನ ನೀಡುತ್ತೇವೆ ಎಂದು ಕಾಂಗ್ರೆೆಸ್ ಮುಖಂಡ ದೇವೇಂದ್ರ ಪ್ರತಾಪ್ ಸಿಂಗ್ ಹೇಳುತ್ತಾರೆ.
Comments are closed.