ಮುಸ್ಲಿಂ ಸಮುದಾಯದಲ್ಲಿ ಮಹಿಳೆಯರಿಗೆ ಕೆಲವು ನಿರ್ಬಂಧಗಳಿವೆ. ಬುರ್ಖಾ ಧರಿಸಬೇಕು, ತಲೆಕೂದಲನ್ನು ಬೇರೆಯವರಿಗೆ ತೋರಿಸಬಾರದು, ಮೈಕೈ ಕಾಣುವಂತಹ ಬಟ್ಟೆ ಧರಿಸಬಾರದು ಮುಂತಾದವು ಆ ನಿಯಮದಲ್ಲಿ ಸೇರಿದೆ. ಆ ನಿಯಮಗಳಿಗೆ ದಾರೂಲ್ ಉಲೂಮ್ ಮತ್ತೊಂದಷ್ಟು ನಿರ್ಬಂಧಗಳನ್ನು ಸೇರ್ಪಡೆ ಮಾಡಿದೆ.
ದಿಯೋಬಂದ್ ಮೂಲದ ಇಸ್ಲಾಮಿಕ್ ಸಂಸ್ಥೆಯಾದ ದಾರೂಲ್ ಉಲೂಮ್ ಮುಸ್ಲಿಂ ಮಹಿಳೆಯರಿಗೆ ಫತ್ವಾ ಹೊರಡಿಸಿದ್ದು, ಇಸ್ಲಾಂ ಸಮುದಾಯದ ಮಹಿಳೆಯರು ಉಗುರು ಕತ್ತರಿಸುವುದು ಮತ್ತು ಉಗುರಿಗೆ ನೇಲ್ ಪಾಲಿಶ್ ಹಚ್ಚುವುದು ಇಸ್ಲಾಂ ಸಂಸ್ಕೃತಿಗೆ ವಿರುದ್ಧವಾದುದು ಎಂದು ಹೇಳಿದೆ. ಹೀಗಾಗಿ, ಉಗುರಿಗೆ ಬಣ್ಣ ಹಚ್ಚುವ ಬದಲಾಗಿ ಮೆಹಂದಿ ಬಳಸುವಂತೆ ಸೂಚನೆ ನೀಡಿದೆ.
ನೇಲ್ ಪಾಲಿಶ್ನಂತಹ ಬಣ್ಣಗಳನ್ನು ಹಚ್ಚಿ ತಮ್ಮನ್ನು ಅಲಂಕರಿಸಿಕೊಳ್ಳುವುದಕ್ಕೆ ಇಸ್ಲಾಂ ಧರ್ಮದಲ್ಲಿ ಅವಕಾಶವಿಲ್ಲ. ಅದರ ಬದಲು ಮೆಹಂದಿಯನ್ನು ಹಾಕಿಕೊಳ್ಳಲು ಅವಕಾಶವಿದೆ ಎಂದು ದಾರೂಲ್ ಉಲೂಮ್ ಸಂಸ್ಥೆಯ ಸದಸ್ಯ ಮುಫ್ತಿ ಇಶ್ರಾರ್ ಗೌರ ಹೇಳಿದ್ದಾರೆ.
ಈ ಮೊದಲೂ ಇಂಥದ್ದೇ ಫತ್ವಾ ಹೊರಡಿಸಿ ಸುದ್ದಿಯಾಗಿತ್ತು:
ಈ ದಾರೂಲ್ ಉಲೂಮ್ ಸಂಸ್ಥೆ ಫತ್ವಾಗಳನ್ನು ಹೊರಡಿಸಲು ಪ್ರಸಿದ್ಧಿ ಪಡೆದಿದೆ. ಈ ಹಿಂದೆ ಈ ರೀತಿ ಅನೇಕ ಫತ್ವಾ ಹೊರಡಿಸಿರುವ ದಾರೂಲ್ ಉಲೂಮ್, ಮಹಿಳೆಯರು ಐಬ್ರೋ ಮಾಡಿಸಿಕೊಂಡು ಹುಬ್ಬುಗಳನ್ನು ತಿದ್ದುವಂತಿಲ್ಲ. ಮೈಮೇಲಿನ ಅನಗತ್ಯ ಕೂದಲುಗಳನ್ನು ತೆಗೆಯಲು ವ್ಯಾಕ್ಸಿಂಗ್ ಮಾಡಿಸಿಕೊಳ್ಳುವಂತಿಲ್ಲ. ಕೂದಲು ಕತ್ತರಿಸಿಕೊಳ್ಳುವಂತಿಲ್ಲ ಎಂದು ಫತ್ವಾ ಹೊರಡಿಸಿತ್ತು. ಹಾಗೇ, ಇಸ್ಲಾಂ ಧರ್ಮದವರು ಬ್ಯಾಂಕ್ಗಳಲ್ಲಿ ಕೆಲಸ ಮಾಡುವುದು ಇಸ್ಲಾಂ ವಿರೋಧಿ ಎಂದು ಕೂಡ ಹೇಳಿಕೆ ನೀಡಿತ್ತು. ಇಸ್ಲಾಂ ಧರ್ಮದವರು ಫೇಸ್ಬುಕ್, ವಾಟ್ಸಾಪ್, ಟ್ವಿಟ್ಟರ್ ಮುಂತಾದ ಸಾಮಾಜಿಕ ಜಾಲತಾಣಗಳಲ್ಲಿ ಫೋಟೋ ಅಪ್ಲೋಡ್ ಮಾಡುವುದಕ್ಕೆ ಕೂಡ ದಾರೂಲ್ ಉಲೂಮ್ ಸಂಸ್ಥೆಯ ಸದಸ್ಯರು ವಿರೋಧ ವ್ಯಕ್ತಪಡಿಸಿದ್ದರು.
Comments are closed.