ಉತ್ತರ್ ಖಂಡ್ : ಚೀನಾ -ಭಾರತ ಗಡಿಯಲ್ಲಿರುವ ಹರ್ಸಿಲ್ ಗೆ ಇಂದು ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿ, ಇಂಡೋ ಟಿಬೆಟಿಯನ್ ಗಡಿ ಪೊಲೀಸರು ಹಾಗೂ ಸೈನಿಕರೊಂದಿಗೆ ದೀಪಾವಳಿ ಹಬ್ಬ ಆಚರಿಸಿದರು.
ದೀಪಾವಳಿ ಹಬ್ಬದ ಪ್ರಯುಕ್ತ ಯೋಧರಿಗೆ ಶುಭಾಶಯ ಕೋರಿರುವ ಪ್ರಧಾನಿ, ದೂರದ ಹಿಮಾವೃತದ ಪ್ರದೇಶದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸೈನಿಕರು ರಾಷ್ಟ್ರದ ಬಲವನ್ನು ಶಕ್ತಗೊಳಿಸುತ್ತಿದ್ದಾರೆ ಮತ್ತು 125 ಕೋಟಿ ಭಾರತೀಯರ ಕನಸುಗಳು ಹಾಗೂ ಭವಿಷ್ಯವನ್ನು ಸಂರಕ್ಷಿಸುತ್ತಿದ್ದಾರೆ ಎಂದು ಹೇಳಿದ್ದಾರೆ.
ಬೆಳಕಿನ ಹಬ್ಬ ದೀಪಾವಳಿ ಭಯವನ್ನು ಹೋಗಲಾಡಿಸಿ ಒಳ್ಳೆಯ ಬೆಳಕು ನೀಡಲಿ. ಸೈನಿಕರ ಶಿಸ್ತು ಜನತೆಯಲ್ಲಿ ಭಯವನ್ನು ಹೋಗಲಾಡಿಸಿ ಭದ್ರತೆಯನ್ನು ಮೂಡಿಸುವಲ್ಲಿ ನೆರವಾಗಲಿ ಎಂದು ನರೇಂದ್ರ ಮೋದಿ ಹೇಳಿದ್ದಾರೆ.
ಸೈನಿಕರಿಗೆ ಸಿಹಿ ಹಂಚಿ ಸಂವಾದ ನಡೆಸಿದ ಪ್ರಧಾನಿ, ಮಾಜಿ ಯೋಧರ ಕಲ್ಯಾಣಕ್ಕಾಗಿ ಅನೇಕ ಕ್ರಮಗಳನ್ನು ಕೈಗೊಂಡಿರುವುದಾಗಿ ತಿಳಿಸಿದರು.
ಉತ್ತರ ಕಾಶಿ ಜಿಲ್ಲೆಯಲ್ಲಿ ಚೀನಾ- ಭಾರತ ಗಡಿಗೆ ಹತ್ತಿರದಲ್ಲಿರುವ ಹರ್ಸೆಲ್ 7. 860 ಅಡಿ ಎತ್ತರ ಪ್ರದೇಶದಲ್ಲಿದೆ.
Comments are closed.