ಹೊಸದಿಲ್ಲಿ: ಅಫ್ಘಾನಿಸ್ತಾನದ ವಿಚಾರವಾಗಿ ನಡೆಯಲಿರುವ ಸಭೆಯಲ್ಲಿ ಭಾರತ ಭಾಗವಹಿಸಲಿದ್ದು, ರಷ್ಯಾ ಸಭೆಯ ಆತಿಥ್ಯ ವಹಿಸಿದೆ. ಅನಧಿಕೃತ ಮಟ್ಟದಲ್ಲಿ ಮಾತ್ರ ನಾವು ಭಾಗಿಯಾಗಲಿದ್ದೇವೆ ಎಂದು ಕೇಂದ್ರ ಸರಕಾರ ಹೇಳಿದ್ದರೂ ಸಹ ಇದು ಹಲವರ ಹುಬ್ಬೇರಿಸಿದೆ. ಯಾಕೆಂದರೆ, ಇದೇ ಮೊದಲ ಬಾರಿಗೆ ತಾಲಿಬಾನ್ ಜತೆಗೆ ಭಾರತ ವೇದಿಕೆ ಹಂಚಿಕೊಳ್ಳುತ್ತಿದೆ.
ಇನ್ನು, ಭಾರತ ಈ ಸಭೆಯಲ್ಲಿ ಭಾಗಿಯಾಗುತ್ತಿದ್ದರೂ ಅಫ್ಗಾನಿಸ್ತಾನವೇ ಎಲ್ಲ ಶಾಂತಿ ಪ್ರಯತ್ನಗಳ ವಿಚಾರದಲ್ಲಿ ನೇತೃತ್ವ ವಹಿಸಬೇಕು, ಹಾಗೆ ನಿಯಂತ್ರಿಸಬೇಕು ಎಂದು ಕೇಂದ್ರ ಸರಕಾರ ಹೇಳಿದೆ. ನಿವೃತ್ತ ರಾಜತಾಂತ್ರಿಕ ಅಧಿಕಾರಿಗಳಾದ ಟಿಸಿಎ ರಾಘವನ್ ಹಾಗೂ ಅಮರ್ ಸಿನ್ಹಾ ಭಾರತವನ್ನು ಪ್ರತಿನಿಧಿಸುತ್ತಿದ್ದು, ಆದರೂ ಇದು ಅನಧಿಕೃತ ಮಟ್ಟದಲ್ಲಿ ಎಂದು ಕೇಂದ್ರ ಸರಕಾರ ಈಗಾಗಲೇ ಸ್ಪಷ್ಟನೆ ನೀಡಿದೆ.
ಅಫ್ಘಾನಿಸ್ತಾನದೊಂದಿಗೆ ಭಾರತದ ಸಂಬಂಧ ಚೆನ್ನಾಗಿದ್ದು, ಈ ಹಿನ್ನೆಲೆಯಲ್ಲಿ ಕೇಂದ್ರ ಸರಕಾರದ ನಿರ್ಧಾರ ಸರಿಯಾಗಿದೆ ಎಂದು ಅಧಿಕೃತ ಮೂಲಗಳು ಮಾಹಿತಿ ನೀಡಿದೆ. ”ಅಫ್ಘಾನಿಸ್ತಾನದಲ್ಲಿ ಶಾಂತಿ ಕಾಪಾಡುವ ಸಂಬಂಧವಾಗಿ ಇಂದು ಮಾಸ್ಕೋದಲ್ಲಿ ಸಭೆ ನಡೆಯುತ್ತಿದ್ದು, ರಷ್ಯಾದ ಒಕ್ಕೂಟ ಈ ಸಭೆಯ ಆತಿಥ್ಯ ವಹಿಸಿದೆ ಎಂದು ನಮಗೆ ತಿಳಿದಿದೆ” ಎಂದು ವಿದೇಶಾಂಗ ಇಲಾಖೆಯ ವಕ್ತಾರ ರವೀಶ್ ಕುಮಾರ್ ತಿಳಿಸಿದ್ದಾರೆ.
”ಅಫ್ಘಾನಿಸ್ತಾನಕ್ಕೆ ಭದ್ರತೆ, ಸ್ಥಿರತೆ ಮತ್ತು ಸಮೃದ್ಧಿಯನ್ನು ತರುವ ಸಲುವಾಗಿ ಭಾರತ ಎಲ್ಲ ರೀತಿಯ ಪ್ರಯತ್ನಗಳಿಗೆ ಬೆಂಬಲ ನೀಡಲಿದೆ. ಆದರೆ, ಅಫ್ಘಾನಿಸ್ತಾನ ಸರಕಾರ ಇದರ ನೇತೃತ್ವ ವಹಿಸಬೇಕು, ನಿಯಂತ್ರಿಸಬೇಕು ಹಾಗೂ ಭಾಗಿಯಾಗಬೇಕು ಎಂಬುದು ಭಾರತದ ಸ್ಥಿರ ನೀತಿ. ನಾವು ಅನಧಿಕೃತ ಮಟ್ಟದಲ್ಲಿ ಮಾತ್ರ ಭಾಗಿಯಾಗಲಿದ್ದೇವೆ” ಎಂದು ಅವರು ಹೇಳಿದರು.
ಇನ್ನು, ಸ್ಪುಟ್ನಿಕ್ ಸುದ್ದಿ ಸಂಸ್ಥೆಯ ಪ್ರಕಾರ ರಷ್ಯಾ ಅಫ್ಘಾನಿಸ್ತಾನ, ಭಾರತ, ಇರಾನ್, ಕಜಕಿಸ್ತಾನ, ಕಿರ್ಗಿಸ್ತಾನ, ಚೀನಾ, ಪಾಕಿಸ್ತಾನ, ತಜಿಕಿಸ್ತಾನ, ಉಜ್ಬೇಕಿಸ್ತಾನ, ಅಮೆರಿಕ ಹಾಗೂ ಅಫ್ಘಾನಿಸ್ತಾನದ ತಾಲಿಬಾನ್‌ಗೆ ಆಹ್ವಾನ ನೀಡಿದೆ ಎಂದು ತಿಳಿದು ಬಂದಿದೆ.
ಮೊದಲ ಬಾರಿಗೆ ನಡೆದ ಮಾಸ್ಕೋ ಆತಿಥ್ಯ ವಹಿಸಿದ್ದ ಸಭೆಯಲ್ಲಿ ಭಾರತ ಜಂಟಿ ಕಾರ್ಯದರ್ಶಿ ಮಟ್ಟದಲ್ಲಿ ಭಾಗಿಯಾಗಿತ್ತು. ಆದರೆ, ತಾಲಿಬಾನ್ ಆ ಸಭೆಯಲ್ಲಿ ಭಾಗಿಯಾಗಿರಲಿಲ್ಲ. ಆದರೆ, ‘ಇದೇ ಮೊದಲ ಬಾರಿಗೆ ದೋಹಾದಲ್ಲಿರುವ ತಾಲಿಬಾನ್ ಚಳವಳಿಯ ನಿಯೋಗ ಅಂತಾರಾಷ್ಟ್ರೀಯ ಮಟ್ಟದ ಸಭೆಯಲ್ಲಿ ಭಾಗಿಯಾಗಲಿದೆ’ ಎಂದು ರಷ್ಯಾ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದೆ.
ಇನ್ನೊಂದೆಡೆ, ಅಫ್ಘಾನಿಸ್ತಾನ ಸರಕಾರ ಸಹ ಈ ಸಭೆಯಲ್ಲಿ ಅಧಿಕೃತವಾಗಿ ಭಾಗವಹಿಸುತ್ತಿಲ್ಲ. ಆದರೆ, ಶಾಂತಿ ಮಟ್ಟದ ನಿಯೋಗವೊಂದು ಭಾಗಿಯಾಗುವ ಸಾಧ್ಯತೆಯಿದೆ. ಅಲ್ಲದೆ, ಭಾರತ ಹಾಗೂ ಇತರ ದೇಶಗಳು ಸಭೆಯಲ್ಲಿ ಭಾಗಿಯಾಗುವುದನ್ನು ನಾವು ಸ್ವಾಗತಿಸುತ್ತೇವೆ ಎಂದು ರಷ್ಯಾದ ರಾಯಭಾರಿ ಕಚೇರಿ ತಿಳಿಸಿದ್ದು, ಶಾಂತಿ ಮಾತುಕತೆಗೆ ಭಾರತದ ಬೆಂಬಲವನ್ನು ನಾವು ಅತ್ಯಮೂಲ್ಯ ಎಂದು ಪರಿಗಣಿಸುತ್ತೇವೆ ಎಂದು ಸಹ ಹೇಳಿದೆ.
Comments are closed.