ರಾಷ್ಟ್ರೀಯ

ಗುಜರಾತ್​ ಗಲಭೆ ಪ್ರಕರಣ: ಮೋದಿಯ ಕ್ಲೀನ್​ ಚಿಟ್​ ಮರುಪರಿಶೀಲನೆಗೆ ಸುಪ್ರೀಂ

Pinterest LinkedIn Tumblr


ನವದೆಹಲಿ: ಗುಜರಾತ್​​ ಗಲಭೆ ಪ್ರಕರಣದಲ್ಲಿ ಕ್ಲೀನ್​​ ಚಿಟ್ ಸಿಕ್ಕಿದೆ ಎಂದು ಕೊಂಚ ನಿರಾಳವಾಗಿದ್ದ ಪ್ರಧಾನಿ ಮೋದಿ ಅವರಿಗೆ ಮತ್ತೆ ಸಂಕಷ್ಟ ಎದುರಾಗುವ ಸಾಧ್ಯತೆಯಿದೆ. ​​2002 ರಲ್ಲಿ ನಡೆದ ಗುಜರಾತ್‌ ಹಿಂಸಾಚಾರ ಪ್ರಕರಣದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಯಾವುದೇ ಪಾತ್ರವಿಲ್ಲ ಎಂದು ವಿಶೇಷ ತನಿಖಾ ತಂಡ (ಎಸ್‌ಐಟಿ) ಕ್ಲೀನ್‌ ಚಿಟ್‌ ನೀಡಿರುವುದನ್ನು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಯನ್ನು ಸುಪ್ರೀಂಕೋರ್ಟ್​​ ಕೈಗೆತ್ತಿಕೊಂಡಿದೆ. ಅಲ್ಲದೇ ಇದೇ ನವೆಂಬರ್​​.19 ರಂದು ವಿಚಾರಣೆ ನಡೆಸಲಿದ್ದೇವೆ ಎಂದು ಸುಪ್ರೀಂ ಹೇಳಿದೆ.

ಪ್ರಧಾನಿ ಮೋದಿ ಸೇರಿದಂತೆ ಹಲವರಿಗೆ 2002ರ ಗುಜರಾತ್​​ ನರಮೇಧ ಹತ್ಯಾಕಾಂಡ ಪ್ರಕರಣದಲ್ಲಿ ಎಸ್​​ಐಟಿ ಕ್ಲೀನ್​​ ಚಿಟ್​​ ನೀಡಿತ್ತು. ಇದನ್ನು ಪ್ರಶ್ನಿಸಿ ಝಾಕಿಯಾ ಜಾಫ್ರಿ ಗುಜರಾತ್‌ ಹೈಕೋರ್ಟ್‌ಗೆ ಸಲ್ಲಿಸಿದ್ದರು. ಈ ವೇಳೆ ಜಾಫ್ರಿ ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿದ್ದ ಹೈಕೋರ್ಟ್​ ಮೋದಿಗೆ ಎಸ್‌ಐಟಿ ನೀಡಿದ್ದ ಕ್ಲೀನ್‌ ಚಿಟ್‌ನನ್ನು ಎತ್ತಿ ಹಿಡಿದಿತ್ತು. ಇದೀಗ ಕ್ಲೀನ್‌ ಚಿಟ್‌ ಪ್ರಶ್ನಿಸಿ ಮಾಜಿ ಕಾಂಗ್ರೆಸ್‌ ಸಂಸದ ಎಹಸಾನ್‌ ಜಾಫ್ರಿ ಅವರ ಪತ್ನಿ ಝಾಕಿಯಾ ಜಾಫ್ರಿ ಮತ್ತೊಮ್ಮೆ ಸಲ್ಲಿಸಿರುವ ಅರ್ಜಿಯನ್ನು ವಿಚಾರಣೆಗೆ ಎತ್ತಿಕೊಳ್ಳಲು ಸುಪ್ರೀಂ ಕೋರ್ಟ್‌ ಅನುಮತಿಸಿದೆ. ಜೊತೆಗೆ ಇದೇ ತಿಂಗಳಲ್ಲಿ ವಿಚಾರಣೆ ನಡೆಸುವುದಾಗಿ ಆಶ್ವಾಸನೆ ನೀಡಿದೆ.

ಗುಜರಾತ್​​ ನರಮೇಧ: 2002ರ ಫೆಬ್ರವರಿ 8ರಂದು ಅಹ್ಮದಾಬಾದ್‌ನ ಗುಲ್‌ಬರ್ಗ್‌ ಸೊಸೈಟಿ ನರಮೇಧ ಹತ್ಯಾಕಾಂಡ ನಡೆಯಿತು. ನರಮೇಧದಲ್ಲಿ ಕಾಂಗ್ರೆಸ್‌ ಸಂಸದ ಎಹಸಾನ್‌ ಜಾಫ್ರಿ ಸೇರಿದಂತೆ ಕನಿಷ್ಠ 68 ಮಂದಿ ಹತರಾಗಿದ್ದರು. ಬಳಿಕ 2008ರಲ್ಲಿ ಸುಪ್ರೀಂ ಕೋರ್ಟ್‌ನಿಂದ ನೇಮಕಗೊಂಡಿದ್ದ ಎಸ್‌ಐಟಿ ಕೂಡ ಜಾಫ್ರಿ ಆರೋಪಗಳ ತನಿಖೆಯನ್ನು ನಡೆಸಿತ್ತು. ಈ ವೇಳೆ ಪ್ರಕರಣದಲ್ಲಿ ಪ್ರಧಾನಿ ಮೋದಿ ಅವರ ಹೆಸರು ಕೇಳಿ ಬಂದಿತ್ತು.

ಗುಲ್ಬರ್ಗ್ ಹೌಸಿಂಗ್ ಸೊಸೈಟಿ ಗಲಭೆ ಹಾಗೂ ಎಹ್ಸಾನ್ ಕೊಲೆ ಪ್ರಕರಣ ಕುರಿತಂತೆ ಸಿಬಿಐನ ಮಾಜಿ ನಿರ್ದೇಶಕ ಆರ್.ಕೆ.ರಾಘವನ್ ನೇತೃತ್ವದ ಎಸ್​​ಐಟಿ ತಂಡ ತನಿಖೆ ನಡೆಸಿತ್ತು. 2011ರ ಸೆಪ್ಟೆಂಬರ್ 12ರಂದು ಸುಪ್ರಿಂ ಕೋರ್ಟ್‌ನ ಮೂವರು ಸದಸ್ಯರ ವಿಸ್ತೃತ ನ್ಯಾಯಪೀಠ, ವಿಶೇಷ ತನಿಖಾ ತಂಡದ ಅಂತಿಮ ವರದಿಯನ್ನು ಸ್ಥಳೀಯ ನ್ಯಾಯಾಲಯಕ್ಕೆ ಹಸ್ತಾಂತರಿಸುವಂತೆ ಆದೇಶ ನೀಡಿತ್ತು. ಪ್ರಕರಣದ ವಿಚಾರಣೆ ನಡೆಸಿದ್ದ ಅಹಮದಾಬಾದ್ ವಿಚಾರಣಾ ನ್ಯಾಯಾಲಯ 2012ರ ಮಾರ್ಚ್ 13ರಂದು ತನಿಖಾ ತಂಡ ಸಲ್ಲಿಸಿದ್ದ ಪರಿಸಮಾಪ್ತಿ ವರದಿಯನ್ನು ಪರಿಶೀಲಿಸಿತ್ತು.

ಪ್ರಧಾನಿ ಮೋದಿಗೆ ಕ್ಲೀನ್​​ ಚಿಟ್​: ನರೇಂದ್ರ ಮೋದಿ ವಿರುದ್ಧದ ಬಹುನಿರೀಕ್ಷಿತ ಗುಜರಾತ್​​ ಗಲಭೆ ಪ್ರಕರಣದಲ್ಲಿ ಅಂತಿಮ ತೀರ್ಪು ಪ್ರಕಟಿಸಿದ ಅಹಮದಾಬಾದ್ ಕೋರ್ಟ್ ಪ್ರಧಾನಿಗೆ ಕ್ಲೀನ್ ಚಿಟ್ ನೀಡಿತ್ತು. ಗುಜರಾತ್ ಗಲಭೆ ಕುರಿತು ತನಿಖೆ ನಡೆಸಲು ಸುಪ್ರೀಂ ಕೋರ್ಟ್ ನೇಮಿಸಿದ್ದ ವಿಶೇಷ ತನಿಖಾ ತಂಡ (ಎಸ್ಐಟಿ) ನೀಡಿದ್ದ ವರದಿ ಆಧಾರದ ಮೇಲೆ ಮೋದಿ ಸೇರಿದಂತೆ ಪ್ರಕರಣದ 57 ಆರೋಪಿಗಳಿಗೆ ಕ್ಲೀನ್ ಚಿಟ್ ನೀಡಿತ್ತು. ಈ ಮೂಲಕ ಹೈಕೋರ್ಟ್​ ವಿಶೇಷ ತನಿಖಾ ತಂಡದ ವರದಿಯನ್ನು ಎತ್ತಿ ಹಿಡಿದಿತ್ತು.

ಮೋದಿ ವಿರುದ್ಧ ಕಟ್ಟುಕಥೆ: ಇನ್ನು ನ್ಯಾಯಾಲಯಕ್ಕೆ ಉತ್ತರ ನೀಡಿದ ಸಿಐಟಿ ಪರ ವಕೀಲರು, ಗೋದ್ರೋತ್ತರ ಹಿಂಸಾಚಾರ ವೇಳೆ ಯಾರನ್ನೇ ಕೊಲ್ಲುವ ಬಗ್ಗೆಯಾಗಲೀ ಅಥವಾ ಗಲಭೆ ನಿರತರ ವಿರುದ್ಧ ಕ್ರಮ ಕೈಗೊಳ್ಳಬೇಡಿ ಎಂದು ಪೊಲೀಸರಿಗೆ ಮೋದಿ ಸೂಚಿಸಿದ್ದರು ಎಂಬುದು ಕೇವಲ ಸಾಮಾಜಿಕ ಕಾರ್ಯಕರ್ತೆ ತೀಸ್ತಾ ಸೆಟಲ್ವಾದ್‌ ಸೃಷ್ಟಿಸಿದ ಕಥೆ. ಇದರಲ್ಲಿ ಯಾವುದೇ ಸತ್ಯಾಂಶವಿಲ್ಲ. ಮೋದಿಯನ್ನು ಗುರಿಯಾಗಿಸಿ ಇಂತಹದ್ದೊಂದು ಆರೋಪವನ್ನು ಸೃಷ್ಟಿಸಿಲಾಗಿತ್ತು ಎಂದು ಹೇಳಿದ್ದರು.

ಬಳಿಕ ಎಸ್ಐಟಿಯ ನಿರ್ಧಾರವನ್ನು ವಿರೋಧಿಸಿ ಝಾಕಿಯಾ ಝಪ್ರಿ ಅವರು ಕೋರ್ಟ್ ಮೆಟ್ಟಿಲೇರಿದ್ದರು. ಪ್ರಕರಣದ ವಿಚಾರಣೆ ನಡೆಸಿದ್ದ ನ್ಯಾಯಾಧೀಶರು ಶೀಘ್ರದಲ್ಲಿಯೇ ತೀರ್ಪು ಪ್ರಕಟಿಸುವುದಾಗಿ ಮತ್ತೊಮ್ಮೆ ತಿಳಿಸಿದ್ದರು. ನಂತರ ಪ್ರಕರಣ ಮುಂದೂಡಲಾಯಿತು. ಕೊನೆಗೂ ಪ್ರಕರಣ ಸಂಬಂಧಿತ ಅಂತಿಮ ತೀರ್ಪು ಪ್ರಕಟಿಸಿದ ಹೈಕೋರ್ಟ್​ ಮೋದಿ ಅವರಿಗೆ ಕ್ಲೀನ್ ಚಿಟ್ ಸಿಕ್ಕಿದೆ ಎಂದು ಹೇಳಿತು.

Comments are closed.