ಶ್ರೀನಗರ: ದಕ್ಷಿಣ ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ಸೇನೆ ಮತ್ತು ಉಗ್ರರ ನಡುವಿನ ಎನ್ ಕೌಂಟರ್ ಬೆನ್ನಲ್ಲೇ ಸ್ಥಳೀಯರಿಂದ ಹಿಂಸಾಚಾರ ಭುಗಿಲೆದ್ದಿದ್ದು, ಈ ವೇಳೆ ಸೇನೆ ನಡೆಸಿದ ದಾಳಿಯಲ್ಲಿ 7 ಮಂದಿ ನಾಗರಿಕರು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
ದಕ್ಷಿಣ ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಸಿರ್ನೂ ಗ್ರಾಮದಲ್ಲಿ ಉಗ್ರರು ಅಡಗಿರುವ ಕುರಿತು ಖಚಿತ ಮಾಹಿತಿ ಪಡೆದ ಸೇನಾಧಿಕಾರಿಗಳು ಇಂದು ಬೆಳಗ್ಗೆ ತುರ್ತು ಕಾರ್ಯಾಚರಣೆ ನಡೆಸಿದ್ದರು. ಈ ವೇಳೆ ನಡೆದ ಗುಂಡಿನ ದಾಳಿಯಲ್ಲಿ ಮೂವರು ಉಗ್ರರನ್ನು ಸೈನಿಕರು ಹತ್ಯೆಗೈದಿದ್ದಾರೆ. ಸೇನೆ ತಮ್ಮನ್ನು ಸುತ್ತುವರೆಯುತ್ತಿದ್ದಂತೆಯೇ ಭಯಭೀತ ಗೊಂಡ ಉಗ್ರರು ಏಕಾಏಕಿ ಸೈನಿಕರತ್ತ ಗುಂಡಿನ ದಾಳಿ ನಡೆಸಿದ್ದು, ಈ ವೇಳೆ ಸೈನಿಕರು ನಡೆಸಿದ ಪ್ರತಿದಾಳಿಯಲ್ಲಿ ಉಗ್ರರು ಹತರಾಗಿದ್ದಾರೆ. ಘಟನಾ ಪ್ರದೇಶದಲ್ಲಿ ಮತ್ತಷ್ಟು ಉಗ್ರರು ಅಡಗಿರುವ ಶಂಕೆ ವ್ಯಕ್ತವಾಗಿದ್ದು, ಕಾರ್ಯಾಚರಣೆ ಮುಂದುವರಿದಿತ್ತು.
ಕಾರ್ಯಾಚರಣೆ ವೇಳೆ ಸೇನೆಯ ಗುಂಡಿಗೆ ಓರ್ವ ನಾಗರಿಕ ಕೂಡ ಸಾವನ್ನಪ್ಪಿದ್ದ. ಆದರೆ ದಿಢೀರ್ ಸೇನಾ ಕಾರ್ಯಾಚರಣೆಗೆ ವಿರೋಧ ವ್ಯಕ್ತಪಡಿಸಿದ ಸ್ಥಳೀಯರು ಸೇನೆ ವಿರುದ್ಧ ಪ್ರತಿಭಟನೆ ನಡೆಸಿದರು. ಅಲ್ಲದೆ ಸೈನಿಕರ ವಿರುದ್ಧ ಕಲ್ಲುತೂರಾಟ ನಡೆಸಿದ್ದು, ಈ ವೇಳೆ ಪ್ರತಿಭಟನಾಕಾರರನ್ನು ತಡೆಯಲು ಸೈನಿಕರು ನಡೆಸಿದ ಪೆಲೆಟ್ ಗನ್ ದಾಳಿ ಮತ್ತು ಗುಂಡಿನ ದಾಳಿಯಲ್ಲಿ ಈ ವರೆಗೂ 7 ಮಂದಿ ನಾಗರಿಕರು ಸಾವನ್ನಪ್ಪಿದ್ದು, 50ಅಧಿಕ ಮಂದಿ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ. ಈ ಪೈಕಿ 9 ಮಂದಿ ಗಂಭೀರವಾಗಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಓರ್ವ ಯೋಧ ಹುತಾತ್ಮ
ಇದೇ ಎನ್ ಕೌಂಟರ್ ನಲ್ಲಿ ಓರ್ವ ಯೋಧ ಹುತಾತ್ಮನಾಗಿದ್ದು, ಹುತಾತ್ಮ ಯೋಧನ ಗುರುತು ಇನ್ನಷ್ಟೇ ಪತ್ತೆಯಾಗಬೇಕಿದೆ.
ಉಗ್ರನಾಗಿ ಬದಲಾಗಿದ್ದ ಮಾಜಿ ಯೋಧ ಕೂಡ ಸೇನೆಯ ಗುಂಡಿಗೆ ಬಲಿ
ಇನ್ನು ಇಂದು ನಡೆದ ಎನ್ ಕೌಂಟರ್ ನಲ್ಲಿ ಈ ಹಿಂದೆ ಸೇನೆಯಲ್ಲಿ ಸೈನಿಕನಾಗಿ ಸೇವೆ ಸಲ್ಲಿಸಿದ್ದ ಮಾಜಿ ಯೋಧ ಝಹೂರ್ ಠಾಕೂರ್ ಕೂಡ ಸಾವನ್ನಪ್ಪಿದ್ದು, ಈತ ಸೇನೆ ತೊರೆದು ಉಗ್ರ ಸಂಘಟನೆಗಳೊಂದಿಗೆ ಸೇರಿ ಪರಾರಿಯಾಗಿದ್ದ ಎಂದು ತಿಳಿದುಬಂದಿದೆ. ಉಳಿದಂತೆ ಮೃತ ಉಗ್ರರನ್ನು ಅದ್ನಾನ್ ವಾನಿ, ಜಹೂರ್ ಅಹ್ಮದ್ ಕಾರ್ ಅಲಿಯಾಸ್ ತಾಹಿರ್ ಹಿಜ್ಬಿ ಎಂದು ಗುರುತಿಸಲಾಗಿದೆ.
Comments are closed.