ದಿಬ್ರುಗರ್: ದೇಶದ ಅತ್ಯಂತ ಉದ್ದವಾದ ರಸ್ತೆ ಹಾಗೂ ರೈಲು ಮಾರ್ಗ ಹೊಂದಿರುವ ಬೊಗಿಬೀಲ್ ಸೇತುವೆ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ.
ಬ್ರಹ್ಮಪುತ್ರ ನದಿಗೆ ಅಡ್ಡಲಾಗಿ ಬೊಗಿಬೀಲ್ ಸೇತುವೆ ನಿರ್ಮಿಸಲಾಗಿದ್ದು, ಬರೋಬ್ಬರಿ 4.98 ಕಿ.ಮೀ ಉದ್ದವಿದೆ. ದೇಶದಲ್ಲಿನ ರಸ್ತೆ ಹಾಗೂ ರೈಲು ಮಾರ್ಗ ಹೊಂದಿರುವ ಅತ್ಯಂತ ಉದ್ದವಾದ ಸೇತುವೆ ಅಸ್ಸಾಂ ಹಾಗೂ ಅರುಣಾಚಲ ಪ್ರದೇಶದ ನಡುವೆ ಸನಿಹದ ರಸ್ತೆ ಹಾಗೂ ರೈಲು ಸಂಪರ್ಕ ಕಲ್ಪಿಸಲಿದೆ. ನೂತನ ಬೊಗಿಬೀಲ್ ಸೇತುವೆಯನ್ನು ಡಿ.25ರಂದು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಲಿದ್ದಾರೆ. ಅಂದ ಹಾಗೆ ಈ ಕಾಮಗಾರಿಗೆ ಶಂಕುಸ್ಥಾಪನೆ ಮಾಡಿದ್ದು, ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡ ಅವರು!
ಯಾವಾಗ ಶುರುವಾಗಿದ್ದು ಗೊತ್ತೇ?
ಬೊಗಿಬೀಲ್ ಸೇತುವೆಗೆ 1977ರಲ್ಲಿ ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡ ಶಂಕುಸ್ಥಾಪನೆ ಮಾಡಿದ್ದರು. ಆದರೆ ಸೇತುವೆ ಕೆಲಸ ಆರಂಭವಾಗಿದ್ದು ಮಾತ್ರ 2002ರಲ್ಲಿ. ಇತ್ತೀಚೆಗೆ ನಿಧನರಾದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಸರಕಾರ ಈ ಸೇತುವೆ ಕಾಮಗಾರಿಗೆ ಮತ್ತೆ ವೇಗ ನೀಡಿದ್ದರು. ಇದೀಗ ಸೇತುವೆಯ ಕಾಮಗಾರಿಗಳು ಶೇ.90ರಷ್ಟು ಪೂರ್ಣಗೊಂಡಿದ್ದು, ಡಿ.20ರೊಳಗಾಗಿ ಎಲ್ಲ ಕೆಲಸಗಳನ್ನು ಪೂರ್ಣಗೊಳಿಸಲು ಗುರಿ ಇರಿಸಿಕೊಳ್ಳಲಾಗಿದೆ.
ಸನಿಹವಾಗಲಿದೆ 2 ನಗರಗಳ ಅಂತರ!
ಅರುಣಾಚಲ ಪ್ರದೇಶ ಹಾಗೂ ಅಸ್ಸಾಂ ನಡುವಿನ ಅಂತರ ಕಡಿಮೆಯಾಗಲಿದೆ. ಅಂತೆಯೇ ಅರುಣಾಚಲ ಪ್ರದೇಶದ ಭಾಗದಲ್ಲಿರುವ ಚೀನಾ ಗಡಿ ಭಾಗಕ್ಕೆ ಸರಕುಗಳ ಸಾಗಾಣೆ ಇನ್ನಷ್ಟು ವೇಗಪಡೆಯಲಿದೆ. ಅಸ್ಸಾಂನ ದಿಬ್ರುಗರ್ ಹಾಗೂ ಅರುಣಾಚಲ ಪ್ರದೇಶದ ಧೆಮಾಜಿ ನಗರಗಳ ನಡುವೆ ಈ ಸೇತುವೆ ಅತ್ಯಂತ ಸನಿಹದ ರಸ್ತೆ ಹಾಗೂ ರೈಲು ಸಂಪರ್ಕ ಕಲ್ಪಿಸುತ್ತದೆ.
ಬೋಗಿಬೀಲ್ ಸೇತುವೆ
ಉಭಯ ನಗರಗಳ ಗಡಿ ಭಾಗದಿಂದ ಕೇವಲ 20 ಕಿ.ಮೀ ದೂರದಲ್ಲಿದ್ದು, ತೇಜ್‌ಪುರದಲ್ಲಿರುವ ಕೊಲಿಯಾ ಭೊಮೊರೊ ಸೇತುವೆಯ ಬದಲಿ ಮಾರ್ಗವಾಗಿದೆ. ಬ್ರಹ್ಮಪುತ್ರ ನದಿಯ ಉತ್ತರ ಭಾಗದಿಂದ ಅರುಣಾಚಲ ಪ್ರದೇಶ ತಲುಪಬಹುದಾಗಿದೆ. ಈ ವರೆಗೆ ನದಿಯ ದಕ್ಷಿಣ ಭಾಗದಿಂದ ಗುವಾಹಟಿ ಮಾರ್ಗವಾಗಿಯೇ ಅರುಣಾಚಲ ಪ್ರದೇಶ ತಲುಪಬೇಕಿತ್ತು. ಈ ರಸ್ತೆ ಮಾರ್ಗ ಬಲು ದೂರವಾಗಿ ಪರಿಣಮಿಸುತ್ತಿದೆ ಮಾತ್ರವಲ್ಲದೆ, ರಕ್ಷಣಾ ಸಾಮಾಗ್ರಿಗಳನ್ನು ಚೀನಾ ಗಡಿ ಭಾಗಕ್ಕೆ ತಲುಪಿಸುವುದೂ ಕಷ್ಟಕರವಾಗಿತ್ತು. ಸೇತುವೆ ಸಂಚಾರಕ್ಕೆ ಮುಕ್ತಗೊಂಡ ಬಳಿಕ, ಸೇನಾ ವಾಹನ, ಸಾಮಾಗ್ರಿಗಳನ್ನು ಸುಲಭವಾಗಿ ರೈಲು ಹಾಗೂ ರಸ್ತೆ ಮಾರ್ಗವಾಗಿ ಚೀನಾ ಗಡಿಗೆ ತಲುಪಿಸಲು ಸಾಧ್ಯವಾಗಲಿದೆ.
ಕಂಪನ ಪ್ರತಿರೋಧಕ!
1700 ಮೆಟ್ರಿಕ್ ಟನ್ ತೂಕವನ್ನೂ ತಡೆಯಬಲ್ಲ ಸೇತುವೆ, ರಿಕ್ಟರ್ ಮಾಪನದಲ್ಲಿ 7ಕ್ಕಿಂತ ಅಧಿಕ ತೀವ್ರತೆಯ ಭೂಕಂಪಕ್ಕೂ ಜಗ್ಗುವುದಿಲ್ಲ ಎಂದು ಸೇತುವೆ ವಿನ್ಯಾಸದ ಎಂಜಿನಿಯರ್ ಕಿಶೋರ್ ಮಾಹಿತಿ ನೀಡಿದ್ದಾರೆ.
Comments are closed.