ರಾಜ್ಕೋಟ್: ‘ನಿನಗಾಗಿ ಏನು ಬೇಕಾದರೂ ಮಾಡುತ್ತೇನೆ’- ಇದು ಸಾಮಾನ್ಯವಾಗಿ ಎಲ್ಲ ಪ್ರೇಮಿಗಳು ಹೇಳುವ ಮಾತು. ಆದರೆ ಇಲ್ಲೊಬ್ಬ ಯುವತಿ ತನ್ನ ಪ್ರಿಯಕರನಿಗಾಗಿ ತನ್ನ ಮನೆಯಲ್ಲೇ ಕಳ್ಳತನ ಮಾಡಿದ್ದಾಳೆ.
ಪೈಲಟ್ ಆಗಬೇಕೆಂಬ ಪ್ರಿಯಕರ ಹೆತ್ ಷಾ (20) ಆಸೆ ಈಡೇರಿಸಲು, ಪ್ರಿಯಾಂಕಾ (20) ತನ್ನ ಮನೆಯಲ್ಲಿದ್ದ ಒಂದು ಕೋಟಿ ರೂ. ಮೌಲ್ಯದ ನಗದು, ಆಭರಣಗಳನ್ನು ಕದ್ದಿದ್ದಾಳೆ. ಕದ್ದ ದುಡ್ಡನ್ನು ಪ್ರಿಯಾಂಕಾ ಪ್ರಿಯಕರನಿಗೆ ನೀಡಿ, ಬೆಂಗಳೂರಿನ ಪೈಲಟ್ ತರಬೇತಿ ಕೇಂದ್ರದ ಶುಲ್ಕ ಕಟ್ಟುವಂತೆ ಸೂಚಿಸಿದ್ದಾಳೆ. ಆದರೆ ಸದ್ಯ ಪೊಲೀಸರು ಇಬ್ಬರ ಬಳಿಯಿದ್ದ ನಗದು, ಆಭರಣಗಳನ್ನು ವಶ ಪಡಿಸಿಕೊಂಡಿದ್ದಾರೆ.
ಮನೆಯಲ್ಲಿ ಕಳ್ಳತನವಾಗಿದೆ ಎಂದು ತಿಳಿದ ತಕ್ಷಣ ಪ್ರಿಯಾಂಕಾಳ ತಂದೆ ಉದ್ಯಮಿ ಕಿಶೋರ್, ರಾಜ್ಕೋಟ್ನ ಭಕ್ತಿನಗರ ಪೊಲೀಸರಿಗೆ ದೂರು ನೀಡಿದ್ದರು. ದೂರು ದಾಖಲಿಸಿಕೊಂಡು ತನಿಖೆ ಆರಂಭಿಸಿದ ಪೊಲೀಸರಿಗೆ ಅನುಮಾನ ಬಂದು ಪ್ರಿಯಾಂಕಳನ್ನು ವಿಚಾರಣೆ ನಡೆಸಿದಾಗ ಸತ್ಯ ಹೊರಬಿದ್ದಿದೆ.
‘ಕಳ್ಳತನವಾದಾಗ ಕಪ್ಬೋರ್ಡ್ ಸೇರಿ ಯಾವುದೇ ವಸ್ತುಗಳು ಬಲವಂತದಿಂದ ತೆಗೆಯಲ್ಪಟ್ಟಿರಲಿಲ್ಲ. ಯಾರೋ ನಕಲಿ ಕೀ ಬಳಸಿ ಕಳ್ಳತನ ಮಾಡಿದ್ದಾರೆಂದು ತಿಳಿಯಿತು. ತನಿಖೆ ಮುಂದುವರಿದಂತೆ ಕುಟುಂಬದವರೇ ಯಾರೋ ಈ ಕೃತ್ಯ ಎಸಗಿದ್ದಾರೆ ಎಂಬ ಅನುಮಾನ ಹೆಚ್ಚಾಯಿತು’ ಎಂದು ಪೊಲೀಸ್ ಅಧಿಕಾರಿ ಜಯ್ದೀಪ್ಸಿಂಹ ತಿಳಿಸಿದ್ದಾರೆ.
‘ತಾಯಿ ಮತ್ತು ಅಕ್ಕ ಮದುವೆಗೆ ಹೋಗಿದ್ದಾಗ ನ.29ರಂದು ಪ್ರಿಯಾಂಕ 90 ಲಕ್ಷ ಮೌಲ್ಯದ 3 ಕೆ.ಜಿ. ಚಿನ್ನದ ಆಭರಣ, ಎರಡು ಕೆ.ಜಿ. ಬೆಳ್ಳಿ, ಮತ್ತು 64 ಸಾವಿರ ರೂ. ನಗದನ್ನು ಕಳ್ಳತನ ಮಾಡಿದ್ದಳು. ಮನೆಯಲ್ಲಿ ಕಳ್ಳತನವಾಗಿದೆ ಎಂದು ಬಿಂಬಿಸಲು ಕೋಣೆಯಲ್ಲಿದ್ದ ವಸ್ತುವನ್ನು ತಾನೇ ಹರಡಿದ್ದಳು’ ಎಂದರು.
Comments are closed.