ಮೊಬೈಲ್ ಎಂಬುದು ನಮ್ಮ ಜೀವನದ ಅವಿಭಾಜ್ಯ ಅಂಗವಾಗಿ ಬಿಟ್ಟಿದೆ. ಹೀಗಾಗಿಯೇ ಹೆಚ್ಚಿನವರು ಊಟವನ್ನಾದರೂ ಬಿಡುತ್ತೇನೆ, ಮೊಬೈಲ್ ಫೋನ್ ಇಲ್ಲದೆ ಬದಕುಲಾಗುವುದಿಲ್ಲ ಎಂಬ ತೀರ್ಮಾನಕ್ಕೆ ಬಂದಿರುತ್ತಾರೆ. ಒಂದು ನಿಮಿಷ ಮೊಬೈಲ್ಗಳು ಕೈಯಲ್ಲಿ ಇರದಿದ್ದರೆ ಇದೇ ಕಾರಣಕ್ಕೆ ಚಡಪಡಿಕೆ ಶುರುವಾಗುತ್ತದೆ. ಇಂತಹ ಚಡಪಡಿಕೆಗೆ ಕಂಪೆನಿಯೊಂದು ಚಾಲೆಂಜ್ ಮಾಡಿದೆ. ಈ ಚಾಲೆಂಜ್ ಗೆದ್ದರೆ ನೀವು ಲಕ್ಷಾಂತರ ರೂಪಾಯಿಗಳನ್ನು ಬಹುಮಾನವಾಗಿ ಪಡೆಯಬಹುದು. ಹೌದು, ‘ವಿಟಮಿನ್ ವಾಟರ್’ ಎಂಬ ಕಂಪೆನಿಯು ನೀವು ಒಂದು ವರ್ಷಗಳ ಕಾಲ ಮೊಬೈಲ್ ಬಳಸದಿದ್ದರೆ ಒಂದು ಮಿಲಿಯನ್ ಡಾಲರ್ ನೀಡಲಿದೆ. ಅಂದರೆ ಸುಮಾರು 71 ಲಕ್ಷ ರೂ.
ಪ್ರಸಿದ್ಧ ಪಾನೀಯ ಕಂಪೆನಿಯಾದ ‘ಕೊಕಾ ಕೋಲಾ’ ಒಡೆತನದಲ್ಲಿರುವ ಈ ಸಂಸ್ಥೆಯು ತನ್ನ ಹೊಸ ಪ್ರೊಡೆಕ್ಟ್ನ ಪ್ರಚಾರಕ್ಕಾಗಿ ವಿನೂತನ ಮಾರ್ಗವನ್ನು ಅನುಸರಿಸಿದೆ. ಇದಕ್ಕಾಗಿ ಸ್ಮಾರ್ಟ್ಫೋನ್ ಬಳಕೆದಾರರನ್ನು ಗುರಿಯಾಗಿಸಿ ಬಂಪರ್ ಬಹುಮಾನದ ಆಫರ್ ನೀಡಿದೆ. ಈ ಬಹುಮಾನವನ್ನು ಗೆಲ್ಲಬೇಕಿದ್ದರೆ ನೀವು ಮೊಬೈಲ್ನಿಂದ ಸಂಪೂರ್ಣ ದೂರ ಉಳಿಯಬೇಕಾಗುತ್ತದೆ. ನೀವು ಈ ಚಾಲೆಂಜ್ನಲ್ಲಿ ಭಾಗವಹಿಸಿದರೆ ಕಂಪೆನಿಯು ನಿಮ್ಮನ್ನು ಲೈವ್ಡಿಟೆಕ್ಟರ್ ಪರೀಕ್ಷೆಗೊಳಪಡಿಸಲಿದೆ. ಈ ವೇಳೆ ನೀವು ಮೊಬೈಲ್ ಬಳಸಿರುವುದು ಪತ್ತೆಯಾದರೆ ಸ್ಪರ್ಧೆಯಿಂದ ಹೊರ ಹೋಗಬೇಕಾಗುತ್ತದೆ ಎಂದು ಕಂಪೆನಿ ತಿಳಿಸಿದೆ.
ಸ್ಪರ್ಧೆಯಲ್ಲಿ ಭಾಗವಹಿಸುವುದು ಹೇಗೆ?
ಈ ಚಾಲೆಂಜ್ನಲ್ಲಿ ನೀವು ಕೂಡ ಪಾಲ್ಗೊಳ್ಳಬಹುದು. ಇದಕ್ಕಾಗಿ ನೀವು ಟ್ವಿಟರ್ ಅಥವಾ ಇನ್ಸ್ಟಾಗ್ರಾಂ ಮೂಲಕ #Nophoneforayear ಮತ್ತು #contest ಎಂದು ಟೈಪ್ ಮಾಡಿ ಪೋಸ್ಟ್ ಮಾಡಬೇಕಾಗುತ್ತದೆ. ಆ ಬಳಿಕ ನಿಮ್ಮ ಆಯ್ಕೆಯನ್ನು ‘ವಿಟಮಿನ್ ವಾಟರ್’ ಕಂಪೆನಿ ತಿಳಿಸಲಿದೆ. ಈ ಸಂದರ್ಭದಲ್ಲಿ ನೀವು ಯಾಕೆ ಮೊಬೈಲ್ನ್ನು ತ್ಯಜಿಸುತ್ತಿದ್ದೀರಿ ಹಾಗೂ ಮುಂದೆ ಹೇಗೆ ಸಮಯವನ್ನು ಕಳೆಯುತ್ತೀರಿ ಎಂಬುದನ್ನು ತಿಳಿಸಬೇಕಾಗುತ್ತದೆ.
ಈ ಚಾಲೆಂಜ್ನಲ್ಲಿ ಪಾಲ್ಗೊಳ್ಳಲು ಬಯಸಿದರೆ ಜನವರಿ 8, 2019 ರೊಳಗೆ ನಿಮ್ಮ ಕೋರಿಕೆ ಸಲ್ಲಿಸಬಹುದು. ಆಸಕ್ತ ಸ್ಪರ್ಧಾಳುಗಳ ಹೆಸರುಗಳನ್ನು ಜನವರಿ 22, 2019ರಂದು ಅಂತಿಮಗೊಳಿಸಿ, ಸಾಮಾಜಿಕ ಮಾಧ್ಯಮದ ಮೂಲಕ ತಿಳಿಸಲಾಗುತ್ತದೆ.
ಕಂಪ್ಯೂಟರ್ ಬಳಸಬಹುದು
ಈ ಚಾಲೆಂಜ್ನಲ್ಲಿ ಒಂದು ವರ್ಷದವರೆಗೆ ಮೊಬೈಲ್ ಬಳಸುವುದಿಲ್ಲ ಎಂಬ ಒಪ್ಪಂದಕ್ಕೆ ಸಹಿ ಹಾಕಬೇಕಾಗುತ್ತದೆ. ಆದರೆ ಇಲ್ಲಿ ಕಂಪ್ಯೂಟರ್ಗಳನ್ನು ಬಳಸಲು ಅವಕಾಶ ನೀಡಲಾಗಿದೆ. ಹಾಗೆಯೇ ಚಾಲೆಂಜ್ನಲ್ಲಿ 6 ತಿಂಗಳುಗಳನ್ನು ಪೂರೈಸಿದರೂ ಸಹ 71 ಲಕ್ಷ ರೂ. ನೀಡುವುದಾಗಿ ಕಂಪೆನಿ ಹೇಳಿಕೊಂಡಿದೆ.
Comments are closed.