ಕೋಲ್ಕತ್ತ: ದಿನದ ಹಿಂದೆ ಕೊಲ್ಕತ್ತ ಪೊಲೀಸ್ ಆಯುಕ್ತರನ್ನು ಸಿಬಿಐ ವಿಚಾರಣೆಗೆ ಒಳಪಡಿಸಿದ ಬೆನ್ನಲ್ಲೇ ಸಿಬಿಐ ಮಾಜಿ ಹಂಗಾಮಿ ನಿರ್ದೇಶಕ ನಾಗೇಶ್ವರ್ ರಾವ್ ಅವರ ಕುಟುಂಬಕ್ಕೆ ಸೇರಿದ ಕಂಪನಿಯ ಮೇಲೆ ಕೋಲ್ಕತ್ತ ಪೊಲೀಸರು ಶುಕ್ರವಾರ ಸಂಜೆ ದಾಳಿ ನಡೆಸಿದ್ದಾರೆ.
ಪೊಲೀಸರು ಇದನ್ನು ವಿಚಾರಣೆ ಅಷ್ಟೇ ಎಂದು ಹೇಳಿದ್ದಾರೆ. ಆದರೆ, ಕಳೆದ ಭಾನುವಾರ ಕೋಲ್ಕತ್ತ ನಗರ ಪೊಲೀಸ್ ಆಯುಕ್ತ ರಾಜೀವ್ ಕುಮಾರ್ ಅವರ ಮನೆ ಮೇಲೆ ಸಿಬಿಐ ದಾಳಿ ನಡೆಸಿದ್ದಕ್ಕೆ ತೆಗೆದುಕೊಂಡ ಪ್ರತೀಕಾರ ಎನ್ನಲಾಗುತ್ತಿದೆ. ಅಂದು ನಾಗೇಶ್ವರ್ ರಾವ್ ಅವರೇ ತನಿಖಾ ಸಂಸ್ಥೆಯ ಮುಖ್ಯಸ್ಥರಾಗಿದ್ದರು.
ಬೊಬಜಾರ್ ಪೊಲೀಸ್ ಠಾಣೆಯಲ್ಲಿ ಆಂಜೆಲಾ ಮಾರ್ಕಂಟಿಲ್ ಪ್ರೈ.ಲಿ. ವಿರುದ್ಧ ದೂರು ದಾಖಲಾದ ತಕ್ಷಣ ದಾಳಿ ನಡೆಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಕಂಪನಿಯ ಎರಡು ಕಚೇರಿ ಮೇಲೆ ದಾಳಿ ನಡೆಸಲಾಗಿದ್ದು ಒಂದು ಕೋಲ್ಕತ್ತದಲ್ಲಿದ್ದರೆ ಮತ್ತೊಂದು ನಗರದ ಸಾಲ್ಟ್ ಲೇಕ್ ಬಳಿ ಇದೆ.
ಎಎಂಪಿಎಲ್ ಕಂಪನಿಯು ನಾಗೇಶ್ವರ್ ರಾವ್ ಅವರ ಹೆಂಡತಿ ಮನ್ನೇಮ್ ಸಂಧ್ಯಾ ಅವರ ಮಾಲೀಕತ್ವದ್ದು ಎಂದು ವರದಿಯಾಗಿದೆ. ಈ ಬಗ್ಗೆ ಹೇಳಿಕೆ ನೀಡಲು ಸಿಬಿಐ ನಿರಾಕರಿಸಿದೆ.
ಪೊಲೀಸ್ ಮೂಲಗಳ ಪ್ರಕಾರ, ಕಂಪನಿ ಮತ್ತು ನಾಗೇಶ್ವರ್ ರಾವ್ ಹೆಂಡತಿ ನಡುವೆ ಸರಣಿ ಹಣ ವರ್ಗಾವಣೆ ಪ್ರಕ್ರಿಯೆ ನಡೆದಿದೆ ಎಂದು ಆರೋಪಿಸಲಾಗಿದೆ.
ಪ್ರಾಥಮಿಕವಾಗಿ ಮೂರು ವರ್ಗಾವಣೆಗಳು ಇಲ್ಲಿ ನಡೆದಿವೆ. 2011-12ರಲ್ಲಿ ನಾಗೇಶ್ವರ್ ರಾವ್ ಪತ್ನಿ ಕಂಪನಿಯಿಂದ 25 ಲಕ್ಷ ಸಾಲ ಪಡೆದುಕೊಂಡಿದ್ದಾರೆ. 2012-13ರಲ್ಲಿ ಕಂಪನಿಗೆ 1.5 ಕೋಟಿ ಪಾವತಿಸಲಾಗಿದೆ. ಮತ್ತು ರಾವ್ ಮಗಳು 14 ಲಕ್ಷ ವೇತನ ಪಡೆಯುತ್ತಿದ್ದಾರೆ ಎಂದು ತಿಳಿದುಬಂದಿದೆ. ಎಎಂಪಿಎಲ್ ಒಂದು ಬ್ಯಾಂಕೇತರ ಹಣಕಾಸು ಸಂಸ್ಥೆಯಾಗಿದ್ದು, ಕಂಪನಿಯ ದಾಖಲೆಗಳ ಪ್ರಕಾರ 1994ರಲ್ಲಿ ಕಂಪನಿ ನೋಂದಾಯಿಸಲ್ಪಟ್ಟಿದೆ.
ಹಣಕಾಸು ವ್ಯವಹಾರದಲ್ಲಿ ಸಾಕಷ್ಟು ಅಕ್ರಮಗಳು ನಡೆದಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ತನಿಖೆಯಿಂದ ಹೆಚ್ಚಿನ ಮಾಹಿತಿ ತಿಳಿದು ಬರಲಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ರಾವ್ ಅವರ ಪತ್ನಿಗೆ ಏಕೆ ಹಣ ಬೇಕಿತ್ತು. ಯಾವ ಪ್ರಕಾರದಲ್ಲಿ ಹಣ ವರ್ಗಾವಣೆಯಾಗಿದೆ. ಮತ್ತು ಅವರ ಮಗಳು ಯಾವ ಸ್ಥಾನದ ಮೇಲೆ ಹಣ ವರ್ಗಾವಣೆ ಮಾಡಿಸಿಕೊಳ್ಳುತ್ತಿದ್ದಾರೆ ಎಂದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಕಂಪನಿಯ ಮಾಲೀಕರನ್ನು ಶನಿವಾರ ಕೋಲ್ಕತ್ತ ಪೊಲೀಸರು ಲಾಲ್ ಬಜಾರ್ ಮುಖ್ಯಕಚೇರಿಯಲ್ಲಿ ವಿಚಾರಣೆ ನಡೆಸುವ ಸಾಧ್ಯತೆ ಇದೆ.
Comments are closed.