ಭೋಪಾಲ್: ಮಧ್ಯಪ್ರದೇಶದ ಭೋಪಾಲ್ನಲ್ಲಿ ನಡೆದ ಚುನಾವಣಾ ರ್ಯಾಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅಣಕಿಸುವ ಮೂಲಕ ನೆರೆದಿದ್ದ ಬೆಂಬಲಿಗರಿಂದ ಭರಪೂರ ಚಪ್ಪಾಳೆ ಗಿಟ್ಟಿಸಿಕೊಂಡರು.
ಲೋಕಸಭಾ ಚುನಾವಣಾ ಪ್ರಚಾರ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ ರಾಹುಲ್, ತಮ್ಮ ಭಾಷಣದಲ್ಲಿ ಮೋದಿ ಅವರನ್ನು ಅನುಕರಿಸುವ ಮೂಲಕವೇ ಪ್ರಧಾನಿ ವಿರುದ್ಧ ವಾಗ್ದಾಳಿ ನಡೆಸಿದರು. 2014ರ ಚುನಾವಣೆ ಸಮಯದಲ್ಲಿ ಮೋದಿ ಅವರು ತಲೆ ಎತ್ತಿ ನಾನು ಚೌಕಿದಾರ, ಭ್ರಷ್ಟಾಚಾರ ನಿರ್ಮೂಲನೆ ಮಾಡುತ್ತೇನೆ ಎಂದು ದರ್ಪದಿಂದ ಹೇಳುತ್ತಿದ್ದರು. ಆದರೆ, ಈಗ ಕುಗ್ಗಿದ ದನಿಯಲ್ಲಿ ಕಾಂಗ್ರೆಸ್ ನಿರ್ಮೂಲನೆ ಮಾಡುತ್ತೇನೆ ಎನ್ನುತ್ತಿದ್ದಾರೆ ಎಂದು ರಾಹುಲ್ ಹೇಳಿದರು. ರಾಹುಲ್ ಈ ಮಾತುಗಳನ್ನು ಮೋದಿಯವರನ್ನು ಅನುಕರಿಸುವಂತೆಯೇ ಹೇಳಿದಾಗ ನೆರೆದಿದ್ದ ಸಭಿಕರು ಕರತಾಡನ ಮೊಳಗಿಸಿದರು.
ಭಾರತವನ್ನು ಕಾಂಗ್ರೆಸ್ ಮುಕ್ತ ದೇಶವನ್ನಾಗಿ ಮಾಡುತ್ತೇನೆ ಎಂದು ಮೋದಿ ಹಾಗೂ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಶಪಥ ಮಾಡಿದ್ದರು. ಆದರೆ ಇದು ಯಶಸ್ವಿಯಾಗಿಲ್ಲ. ಈ ಬಗ್ಗೆಯೂ ಟೀಕಿಸಿದ ರಾಹುಲ್, “ಕಾಂಗ್ರೆಸ್ ನಿರ್ಮೂಲನೆ ಮಾಡುತ್ತೇವೆ ಎಂದು ಬಿಜೆಪಿ ಹೇಳುತ್ತಿದೆ. ಆದರೆ, ಇದು ಎಲ್ಲಿ ಸಾಧ್ಯವಾಗಿದೆ? ಮಧ್ಯಪ್ರದೇಶ, ರಾಜಸ್ಥಾನ ಹಾಗೂ ಚತ್ತೀಸ್ಗಢದಲ್ಲಿ ಸರ್ಕಾರ ರಚನೆ ಮಾಡಿದ್ದೇವೆ. ಕೇಂದ್ರದಲ್ಲೂ ಸರ್ಕಾರ ರಚಿಸುವ ಹಂತದಲ್ಲಿದ್ದೇವೆ,” ಎಂದು ಹೇಳುವ ಮೂಲಕ ಲೋಕಸಭೆ ಚುನಾವಣೆಯಲ್ಲಿ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದರು.
ರೈತರಿಗೆ ಪ್ರತಿ ವರ್ಷ 6 ಸಾವಿರ ರೂ. ಅನುದಾನ ನೀಡುವ ಘೋಷಣೆಯನ್ನು ಬಜೆಟ್ ಮಂಡನೆ ವೇಳೆ ಕೇಂದ್ರ ಸರ್ಕಾರ ಮಾಡಿತ್ತು. ಈ ಬಗ್ಗೆ ಕುಹಕವಾಡಿರುವ ರಾಹುಲ್, “ಬಜೆಟ್ ಮಂಡನೆ ವೇಳೆ ರೈತರಿಗೆ ಅನುದಾನ ನೀಡುವ ಘೋಷಣೆ ಮಾಡಿದ ಬಳಿಕ ಐದು ನಿಮಿಷಗಳ ಕಾಲ ಬಿಜೆಪಿ ಸಂಸದರು ಮೇಜು ತಟ್ಟಿದರು. ನನಗೆ ಒಮ್ಮೆ ಆಶ್ಚರ್ಯವಾಯಿತು. ಅವರು ಇಷ್ಟೆಲ್ಲ ಸಂತಸ ವ್ಯಕ್ತಪಡಿಸಿದ್ದು ಏಕೆ ಎಂದು ಪಕ್ಕದಲ್ಲಿ ಕುಳಿತ ನಮ್ಮ ನಾಯಕರನ್ನು ಕೇಳಿದೆ. ಈ ಅನುದಾನ ಲೆಕ್ಕ ಹಾಕಿದರೆ ಒಂದು ದಿನಕ್ಕೆ ಪ್ರತಿ ರೈತನಿಗೆ 17 ರೂ. ಮಾತ್ರ ಸಿಗುತ್ತದೆ,” ಎಂದು ರಾಹುಲ್ ಕೇಂದ್ರ ಬಜೆಟ್ ವಿರುದ್ಧ ಅಸಮಾಧಾನವನ್ನು ಮತ್ತೊಮ್ಮೆ ಹೊರಹಾಕಿದರು.
Comments are closed.