ರಾಷ್ಟ್ರೀಯ

ಇಂಜೆಕ್ಷನ್​ ಹಿಡಿದು ಪ್ರಾಣ ಉಳಿಸಬೇಕಾಗಿದ್ದ ಈತ ಕೈಯಲ್ಲಿ ಗನ್​ ಹಿಡಿದು ಉಗ್ರನಾದ !

Pinterest LinkedIn Tumblr

ಫೆ.14 ಮಧ್ಯಾಹ್ನ 3.35ರ ಸಮಯ. 2500 ಸಿಆರ್​ಪಿಎಫ್​ ಯೋಧರು ಶ್ರೀನಗರಕ್ಕೆ ಹೊರಟಿದ್ದರು. ಈ ವೇಳೆ ಸ್ಫೋಟಕಗಳನ್ನು ತುಂಬಿಕೊಂಡು ಬಂದ ಸ್ಕಾರ್ಪಿಯೋ ಕಾರು ಯೋಧರಿದ್ದ ಬಸ್​ಗೆ ಡಿಕ್ಕಿ ಹೊಡೆಯಿತು. ಇದರ ಪರಿಣಾಮ ಒಂದು ಭಾರೀ ಸ್ಫೋಟ ಸಂಭವಿಸಿತ್ತು. ಈ ಶಬ್ದ ಅದೆಷ್ಟು ತೀವ್ರವಾಗಿತ್ತೆಂದರೆ ಕಿಲೋಮೀಟರ್​ ದೂರದವರೆಗೂ ಕೇಳಿತ್ತು. ಕ್ಷಣ ಮಾತ್ರದಲ್ಲಿ ಅಲ್ಲಿಯ ಸ್ಥಿತಿಯೇ ಬದಲಾಗಿತ್ತು. ಸೈನಿಕರು ರಕ್ತದ ಮಡುವಿನಲ್ಲಿ ಬಿದ್ದಿದ್ದರು. 40 ಸೈನಿಕರು ಹುತಾತ್ಮರಾದರು.

ಈ ರಕ್ಕಸಿ ಕೃತ್ಯದ ಹಿಂದೆ ಇದ್ದವನು ಆದಿಲ್​ ರಶಿದ್​. ಕೇವಲ 18 ವರ್ಷದ ಈ ಉಗ್ರ ಜೈಶ್-ಇ-ಮೊಹಮ್ಮದ್​ ಸಂಘಟನೆ ಸೇರುವ ಮೊದಲು ಹೇಗಿದ್ದ ಎಂಬುದನ್ನು ನೆನಪಿಸಿಕೊಳ್ಳುತ್ತಾರೆ ಸಹೋದರ ಫರೂಕ್​ ದಾರ.

ಕಣಿವೆ ರಾಜ್ಯದಲ್ಲಿ ಧರ್ಮದ ಹೆಸರಿನಲ್ಲಿ ಆದಿಲ್ ಹತ್ಯೆ ನಡೆಸುತ್ತಿದ್ದ. ಎಲ್ಲರೂ ಈತನ ಹೆಸರನ್ನು ಕೇಳುತ್ತಿದ್ದರೇ ಹೊರತು ಯಾರೊಬ್ಬರಿಗೂ ಆತ ಕಾಣಿಸಿಕೊಳ್ಳುತ್ತಿರಲಿಲ್ಲ. ಆದಿಲ್​ ಓರ್ವ ವೈದ್ಯನಾಗಬೇಕು ಎಂದು ಕನಸು ಕಂಡವನಂತೆ. ಶಾಲೆಗೆ ತೆರಳುವ ದಿನಗಳಲ್ಲಿ ಆದಿಲ್​ ಚೆನ್ನಾಗಿ ಓದುತ್ತಿದ್ದ ಎಂಬುದು ಫರೂಕ್​ ಮಾತು. ಇಂಜೆಕ್ಷನ್​ ಹಿಡಿದು ಪ್ರಾಣ ಉಳಿಸಬೇಕಾಗಿದ್ದ ಈತ, ಕೈಯಲ್ಲಿ ಗನ್​ ಹಿಡಿದು ಜನರನ್ನು ಕೊಲ್ಲಲು ಆರಂಭಿಸಿದ್ದ.

ಆದಿಲ್​ ಹುಟ್ಟಿದ್ದು ದಕ್ಷಿಣ ಕಾಶ್ಮೀರದ ಗುಂಡಿಭಾಗ್​ ಗ್ರಾಮದಲ್ಲಿ. ಇಲ್ಲಿ ಸದಾ ಗುಂಡಿನ ಮೊರೆತ ಕೇಳುತ್ತಲೇ ಇರುತ್ತಿತ್ತು. ಇಲ್ಲಿನ ಮಕ್ಕಳು ಪಟಾಕಿ ಹೊಡೆದು ಸಂಭ್ರಮಿಸುವುದನ್ನು ಕಣ್ತುಂಬಿಕೊಳ್ಳುವ ಬದಲು ಭಯೋತ್ಪಾದಕರು ಹಾಗೂ ಸೇನೆ ನಡುವಿನ ಎನ್​ಕೌಂಟರ್​ ದೃಶ್ಯಗಳನ್ನು ನೋಡುತ್ತಿದ್ದರು. ಹೊರ ಲೋಕದಿಂದ ಅಂತರ ಕಾಯ್ದುಕೊಂಡಿದ್ದ ಆದಿಲ್​ಗೆ ಒಳಗಿದ್ದಿದ್ದು ಒಂದೇ ಆಸೆ, ನಾನು ವೈದ್ಯನಾಗಬೇಕು. ಆದರೆ, ದಿನ ಕಳೆದಂತೆ ಹೊರಗಿನ ಪ್ರಪಂಚ ಆತನ ಮೇಲೆ ಪ್ರಭಾವ ಬೀರಲು ಆರಂಭಿಸಿತ್ತು.

ಕಾಶ್ಮೀರದಲ್ಲಿ ಏನಾದರೂ ಆದರೆ ಯುವ ಕಾಶ್ಮೀರಿಗಳನ್ನು ಪ್ರಶ್ನೆ ಮಾಡಲಾಗುತ್ತಿತ್ತು ಎಂದು ಹಳೆಯ ದಿನಗಳನ್ನು ನೆನಪು ಮಾಡಿಕೊಂಡರು ಫರೂಕ್​. “ಆದಿಲ್​ನನ್ನೂ ಒಮ್ಮೆ ಹೀಗೆಯೇ ಪ್ರಶ್ನೆ ಮಾಡಲಾಯಿತು. ಇದು ಅನೇಕ ಬಾರಿ ಮರುಕಳಿಸಿತು. ಒಂದು ದಿನ ಆತ ಶಾಲೆಯಿಂದ ಬಂದವನೇ ಕೊಠಡಿ ಸೇರಿಕೊಂಡ. ಎಷ್ಟೇ ಹೊತ್ತಾದರೂ ಆದಿಲ್ ಹೊರ ಬರಲಿಲ್ಲ. ಊಟ ಕೂಡ ಮಾಡಲಿಲ್ಲ. ಕೊಠಡಿಯಿಂದ ಹೊರ ಬಂದಾಗ ಆದಿಲ್ ಕಣ್ಣು ಕೆಂಪಾಗಿತ್ತು. ಆತ ಅತ್ತಿದ್ದ. ಅಂದು ಏನಾಗಿತ್ತು ಎಂಬುದನ್ನು ಆತನ ಗೆಳೆಯರು ಹೇಳಿಕೊಂಡರು” ಎಂದರು.

ವೈದ್ಯನಾಗಬೇಕು ಎಂದು ಕನಸು ಕಾಣುತ್ತಿದ್ದ ಆದಿಲ್​ನನ್ನು ನಾವು ಕಳೆದುಕೊಂಡೆವು ಎನ್ನುವ ಫರೂಕ್​, “ಆದಿಲ್​ ಅಂದು ರೋಷಗೊಂಡಿದ್ದ. ನಿತ್ಯ ಕಾಶ್ಮೀರಿಗಳು ಎದುರಿಸುತ್ತಿದ್ದ ಸಮಸ್ಯೆಗಳ ಬಗ್ಗೆ ಹೇಳಿಕೊಳ್ಳುತ್ತಿದ್ದ. ಆತ ಶಾಲೆಗೆ ಸರಿಯಾಗಿ ಹೋಗುತ್ತಿರಲಿಲ್ಲ. ದರ್ಗಾಕ್ಕೆ ಹೋಗಿ ನಮಾಜ್​ ಮಾಡುತ್ತಿದ್ದ. ‘ಪ್ರೀತಿಯಲ್ಲಿ ಬೀಳಬೇಡಿ’ ಎಂದು ಹೇಳಿಕೊಂಡು ಓಡಾಡುತ್ತಿದ್ದ,” ಎಂದು ಹಳೆಯ ದಿನಗಳನ್ನು ನೆನಪಿಸಿಕೊಂಡರು.

ಮಾರ್ಚ್​​ 2018. ಆದಿಲ್, 12ನೇ ತರಗತಿ ಪರೀಕ್ಷೆ ಮುಗಿಸಿ ಮನೆಗೆ ಬಂದಿದ್ದ. ಆತ ಮನೆಯಿಂದ ಹೊರ ಹೋಗುವಾಗ ತಾಯಿಗೆ ಬಾಯ್​ ಹೇಳಿದ. ತಂಗಿಯ ಬಗ್ಗೆ ಮಾತನಾಡಿದ್ದ. ತಂದೆಯನ್ನೊಮ್ಮೆ ಭಾವುಕನಾಗಿ ನೋಡಿದ. ನಾವು ನಮ್ಮ ಮೊದಲ ಆದಿಲ್​ನನ್ನು ಮರಳಿ ಪಡೆದೆವು ಎಂದುಕೊಂಡೆವು. ಅಂದು ಮನೆಯಿಂದ ಹೊರ ಹೋದವನು ಆತ ಮರಳಿ ಬರಲೇ ಇಲ್ಲ. ದೂರವಾಣಿ ಕರೆಗೂ ಆತ ಸಿಗಲಿಲ್ಲ. ಈ ಬಗ್ಗೆ ಪೊಲೀಸ್​ ಠಾಣೆಯಲ್ಲಿ ದೂರು ನೀಡಿದೆವು. ಪೊಲೀಸರಿಗೆ ಆತನ ಭಾವಚಿತ್ರವನ್ನೂ ನೀಡಿದೆವು. ಪೊಲೀಸರೊಮ್ಮೆ ನಮ್ಮ ಮನೆಗೆ ಭೇಟಿ ನೀಡಿ ಹೋದರು,” ಎಂದರು ಆದಿಲ್​ ಸಹೋದರ.

ಇದಾದ ಕೆಲವು ತಿಂಗಳ ನಂತರದಲ್ಲಿ ವಿಡಿಯೋ ಒಂದು ವೈರಲ್​ ಆಗಿತ್ತು. ಇದರಲ್ಲಿ ಆದಿಲ್​, ಜೈಶ್​​-ಇ-ಮೊಹ್ಮದ್​ ಸಂಘಟನೆಗೆ ಸೇರಿರುವ ವಿಚಾರ ಬೆಳಕಿಗೆ ಬಂದಿತ್ತು. ಆದಿಲ್​ ಕೈಯಲ್ಲಿ ಎಕೆ-47 ಗನ್​ ಇತ್ತು. ಆತ ಉಗ್ರ ಸಂಘಟನೆಗೆ ಸೇರಿದ ಎನ್ನುವ ವಿಚಾರ ತಿಳಿದ ನಂತರ ಸಾಕಷ್ಟು ಬಾರಿ ಪೊಲೀಸರು ಹಾಗೂ ಸೇನೆಯವರು ನಮ್ಮ ಮನೆಗೆ ಭೇಟಿ ನೀಡಿದ್ದರು. ನಮಗೆ ಗೊತ್ತಿರುವ ಅಷ್ಟೂ ವಿಚಾರವನ್ನು ನಾವು ಹೇಳಿಕೊಂಡೆವು. ಆತ, ಮರಳಿ ಬರುವುದಿಲ್ಲ ಎಂಬುದು ನಮಗೆ ಗೊತ್ತಾಗಿ ಹೋಗಿತ್ತು,” ಎಂದು ಹೇಳಿಕೊಳ್ಳುತ್ತಾರೆ ಫರೂಕ್​.

ಫೆ.14ರಂದು ಯಾರೂ ಊಹಿಸದ ಘಟನೆ ನಡೆಯಿತು. ಆದಿಲ್​, ಆತ್ಮಾಹುತಿ ಬಾಂಬ್​ ದಾಳಿ ಮಾಡಿ 40 ಸೈನಿಕರನ್ನು ಬಲಿ ತೆಗೆದುಕೊಂಡಿದ್ದ. ನಾವು ಇದನ್ನು ಎಂದಿಗೂ ಊಹಿಸಿರಲಿಲ್ಲ. ಕಾಶ್ಮೀರದಲ್ಲಿ ಅನೇಕರು ತಮ್ಮ ಮಕ್ಕಳನ್ನು ಇದೇ ರೀತಿ ಕಳೆದುಕೊಂಡಿದ್ದಾರೆ. ಈ ರೀತಿ ಘಟನೆಗಳು ಎಂದೂ ನಡೆಯಬಾರದು. ನನ್ನ ಸಹೋದರ ಡಾಕ್ಟರ್​ ಆಗಬೇಕು ಎಂದು ನಾನು ಕೂಡ ಕನಸು ಕಂಡಿದ್ದೆ. ಆದರೆ ಈಗ ನನ್ನ ಬಳಿ ಯಾವುದೇ ಕನಸುಗಳಿಲ್ಲ,” ಎಂದು ಭಾವುಕರಾದರು ಫರೂಕ್​.

Comments are closed.