ರಾಷ್ಟ್ರೀಯ

ಮಿಗ್ ಹೆಲಿಕಾಪ್ಟರ್ ಪತನ – ಸರ್ಕಾರಿ ಗೌರವದೊಂದಿಗೆ ಪೈಲಟ್ ಸಿದ್ಧಾರ್ಥ ಅಂತ್ಯಕ್ರಿಯೆ

Pinterest LinkedIn Tumblr


ಚಂಡೀಗಢ: ಭಾರತೀಯ ವಾಯು ಪಡೆಯ ಮಿಗ್ 17 ಹೆಲಿಕಾಪ್ಟರ್ ಪತನಗೊಂಡು ಹುತಾತ್ಮರಾಗಿದ್ದ ಪೈಲಟ್ ಸಿದ್ಧಾರ್ಥ ವಶಿಷ್ಠಾ ಅವರ ಅಂತ್ಯಕ್ರಿಯೆ ಇಂದು ಚಂಡೀಗಢದಲ್ಲಿ ನೆರವೇರಿತು.

ಮಿ-17 ಯುದ್ಧ ಹೆಲಿಕಾಪ್ಟರ್ ಹಾರಾಟದ ವೇಳೆ ಬುಧವಾರ ಪತನಗೊಂಡು, ಜಮ್ಮು-ಕಾಶ್ಮೀರದ ಬುದ್ಗಾಮ್ ಪ್ರದೇಶದಲ್ಲಿ ಬಿದ್ದಿತ್ತು. ಈ ದುರಂತದಲ್ಲಿ ಪೈಲಟ್ ಸಿದ್ಧಾರ್ಥ ವಶಿಷ್ಠಾ ಅವರನ್ನು ಸೇರಿದಂತೆ ಒಟ್ಟು ಆರು ಜನರು ಹುತಾತ್ಮರಾಗಿದ್ದರು.

ವಾಯು ಪಡೆಯ ಸೈನಿಕರು ಗಾಳಿಯಲ್ಲಿ ಗುಂಡು ಹಾರಿಸಿ ಪೈಲಟ್ ಸಿದ್ಧಾರ್ಥ ವಶಿಷ್ಠಾ ಅವರಿಗೆ ಸಕಲ ಸರ್ಕಾರಿ ಗೌರವ ಸಲ್ಲಿಸಿದರು. ಚಂಡೀಗಢನಲ್ಲಿ ನಡೆದ ಅಂತ್ಯಕ್ರಿಯೆಯಲ್ಲಿ ಕುಟುಂಬಸ್ಥರು ಸೇರಿದಂತೆ ನೂರಾರು ಜನರು ಸೇರಿದ್ದರು.

ಸಿದ್ಧಾರ್ಥ ಅವರ ಪತ್ನಿ ಆರತಿ ಸಿಂಗ್ ಅಂತ್ಯಕ್ರಿಯ ವೇಳೆ ಕಣ್ಣೀರಾದರು. ಆರತಿ ಸಿಂಗ್ ಅವರು ಕೂಡ ಐಎಎಫ್‍ನ ಶ್ರೀನಗರ ಪಡೆಯ ಸಿಬ್ಬಂದಿಯಾಗಿದ್ದಾರೆ. ಹುತಾತ್ಮ ಸಿದ್ಧಾರ್ಥ ಹಾಗೂ ಆರತಿ ಸಿಂಗ್ ದಂಪತಿಗೆ ಎರಡು ವರ್ಷದ ಪುತ್ರನಿದ್ದಾನೆ.

ಹುತಾತ್ಮ ಸಿದ್ಧಾರ್ಥ ಅವರ ಕುಟುಂಬವು ನಾಲ್ಕು ತಲೆಮಾರುಗಳಿಂದ ಭಾರತೀಯ ವಾಯು ಪಡೆಯಲ್ಲಿ ಸೇವೆ ಸಲ್ಲಿಸುತ್ತಾ ಬಂದಿದೆ. ಕೇರಳದಲ್ಲಿ ಕಳೆದ ವರ್ಷ ಸಂಭವಿಸಿದ್ದ ಪ್ರವಾಹದ ವೇಳೆ ಸಿದ್ಧಾರ್ಥ ಅವರು ಅಸಾಧಾರಣವಾಗಿ ಕಾರ್ಯನಿರ್ವಹಿಸಿದ್ದರು. ಈ ಹಿನ್ನಲೆಯಲ್ಲಿ ಸಿದ್ಧಾರ್ಥ ಅವರಿಗೆ ಜನವರಿ 26ರಂದು ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು.

Comments are closed.