ಲಕ್ನೋ: ತಮ್ಮ ವೈಫಲ್ಯಗಳನ್ನು ಮುಚ್ಚಿಹಾಕಲು ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ಬಿಜೆಪಿ ಜಮ್ಮು-ಕಾಶ್ಮೀರದಲ್ಲಿನ ಸದ್ಯದ ಪರಿಸ್ಥಿತಿಯನ್ನು ಬಳಸಿಕೊಳ್ಳುತ್ತಿದೆ ಎಂದು ಬಿಎಸ್ ಪಿ ನಾಯಕಿ ಮಾಯಾವತಿ ಆರೋಪಿಸಿದ್ದಾರೆ.
ಲಕ್ನೋದಲ್ಲಿ ಇಂದು ಪಕ್ಷದ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಅವರು, ಕಳೆದ ಕೆಲ ದಿನಗಳಿಂದ ಜಮ್ಮು-ಕಾಶ್ಮೀರದಲ್ಲಿ ನಡೆಯುತ್ತಿರುವ ಉಗ್ರರ ದಾಳಿಯಿಂದ ದೇಶದ ಜನತೆ ಆತಂಕಗೊಂಡಿದ್ದಾರೆ. ತಮ್ಮ ಸರ್ಕಾರದ ವೈಫಲ್ಯಗಳನ್ನು ಮುಚ್ಚಿಹಾಕಲು ಪ್ರಧಾನಿ ಮೋದಿ ಮತ್ತು ಬಿಜೆಪಿ ಜಮ್ಮು-ಕಾಶ್ಮೀರದ ಸ್ಥಿತಿಗತಿಯನ್ನು ಹೇಗೆ ಬಳಸಿಕೊಳ್ಳುತ್ತಿದೆ ಎಂದು ದೇಶದ ಜನತೆಗೆ ಗೊತ್ತಾಗುತ್ತಿದೆ ಎಂದು ಟೀಕಿಸಿದರು.
ಸಮಾಜವಾದಿ ಪಕ್ಷದ ಜೊತೆ ಮೈತ್ರಿ ಮಾಡಿಕೊಂಡ ನಂತರ ಪಕ್ಷದ ಕಾರ್ಯಕರ್ತರಿಗೆ ಮಾರ್ಗದರ್ಶನ ನೀಡಲು ಮಾಯಾವತಿಯವರು ಸಭೆ ಕರೆದಿದ್ದರು.
ಇದಕ್ಕೂ ಮುನ್ನ ಪ್ರಧಾನಿಯನ್ನು ಟೀಕಿಸಿದ್ದ ಮಾಯಾವತಿ, ರಾಜಕೀಯ ಹಿತಾಸಕ್ತಿಗೋಸ್ಕರ ದೇಶದ ಭದ್ರತೆ ವಿಚಾರವನ್ನು ಕಡೆಗಣಿಸಲಾಗುತ್ತಿದೆ. ಭಾರತ ಹಗೆತನ ಎದುರಿಸುತ್ತಿರುವ ಸಂದರ್ಭದಲ್ಲಿ ಗಟ್ಟಿ ನಿಲುವು ತೆಗೆದುಕೊಳ್ಳುವ ನಾಯಕರು ಬೇಕಾಗಿದೆ. ದೇಶದ ಭದ್ರತೆ ಕುರಿತು ಗಮನ ಹರಿಸುವ ಬದಲು ಪ್ರಧಾನಿಯವರು ಬಿಜೆಪಿ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡುತ್ತಿದ್ದಾರೆ, ಇದು ದೇಶದ ಭಾವನೆಗಳಿಗೆ ದ್ರೋಹ ಬಗೆಯುವುದು ಮಾತ್ರವಲ್ಲದೆ ಹಾಸ್ಯಾಸ್ಪದ ವರ್ತನೆ ಎಂದು ಮಾಯಾವತಿ ಟೀಕಿಸಿದರು.
Comments are closed.