ಕೋಹಿಮಾ: ಮೇಘಾಲಯದಲ್ಲಿ 2 ತಿಂಗಳ ಹಿಂದೆ ಅಕ್ರಮ ಗಣಿಗಾರಿಕೆ ನಡೆಸುತ್ತಿದ್ದಾಗ 15 ಕಾರ್ಮಿಕರು ಭೂಮಿಯೊಳಗೆ ಸಿಲುಕಿಕೊಂಡಿದ್ದರು. 370 ಅಡಿ ಆಳದ ಸುರಂಗದಲ್ಲಿ ಸಿಲುಕಿದ್ದ ಕಾರ್ಮಿಕರನ್ನು ರಕ್ಷಿಸುವ ಕಾರ್ಯಾಚರಣೆ ಯಶಸ್ವಿಯಾಗಿರಲಿಲ್ಲ. ಇದೀಗ ನಾಗಾಲ್ಯಾಂಡ್ನ ಲಾಂಗ್ಲೆಂಗ್ ಜಿಲ್ಲೆಯ ಯಾಂಗ್ಲಾಕ್ ಗ್ರಾಮದಲ್ಲಿ ಗಣಿಗಾರಿಕೆ ಮಾಡುತ್ತಿದ್ದಾಗ ಸುರಂಗದೊಳಗೆ ಸಿಲುಕಿ ನಾಲ್ವರು ಕಾರ್ಮಿಕರು ಮೃತಪಟ್ಟಿರುವ ಸಂಗತಿ ಬೆಳಕಿಗೆ ಬಂದಿದೆ.
ಕಾರ್ಮಿಕರ ಸಾವಿಗೆ ನಿಖರವಾದ ಕಾರಣವೇನು ಎಂದು ಇನ್ನೂ ತಿಳಿದುಬಂದಿಲ್ಲ. ಪೊಲೀಸರು ಸ್ಥಳವನ್ನು ಪರಿಶೀಲನೆ ಮಾಡುತ್ತಿದ್ದು, ಗಣಿಗಾರಿಕೆ ನಡೆಯುತ್ತಿದ್ದ ಸ್ಥಳದಲ್ಲಿ ಇದ್ದಕ್ಕಿದ್ದಂತೆ ಮಣ್ಣು ಕುಸಿದಿದ್ದರಿಂದ ಅಥವಾ ಒಳಗಡೆ ವಿಷಕಾರಿ ಅನಿಲ ಹರಡಿದ್ದರಿಂದ ಸಾವನ್ನಪ್ಪಿರಬಹುದು ಎಂದು ಅಂದಾಜಿಸಲಾಗಿದೆ.
ಮೃತಪಟ್ಟಿರುವ ಕೃಷ್ಣ ಗೊಗಾಯ್ (32), ತೂತು ದೇಕ (28), ಜಿತನ್ ತಂತ್ರಿ (40), ಶುಶಾನ್ ಪುತಾನ್ (37) ಅಸ್ಸಾಂ ಮೂಲದವರಾಗಿದ್ದು, ಘಟನೆ ನಡೆದ ಸ್ಥಳದಲ್ಲಿ ಗಣಿಗಾರಿಯನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿತ್ತು. ಹೀಗಾಗಿ, ಆ ನಾಲ್ವರು ಸುರಂಗದೊಳಗೆ ಯಾಕೆ ಇಳಿದಿದ್ದರು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಮೃತದೇಹಗಳ ಪೋಸ್ಟ್ ಮಾರ್ಟಂ ಮಾಡಲು ಮೃತರ ಕುಟುಂಬಸ್ಥರು ವಿರೋಧಿಸಿದ್ದರಿಂದ ದೇಹಗಳನ್ನು ಅವರಿಗೆ ಹಸ್ತಾಂತರಿಸಲಾಗಿದೆ. ಇಲ್ಲಿ ಗಣಿಗಾರಿಕೆ ನಡೆಸಲು ಅನುಮತಿ ನೀಡಲಾಗಿತ್ತೇ ಅಥವಾ ಅಕ್ರಮವಾಗಿ ನಡೆಸಲಾಗುತ್ತಿತ್ತೆ ಎಂಬ ಮಾಹಿತಿ ಕೂಡ ಲಭ್ಯವಾಗಿಲ್ಲ. ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.
Comments are closed.