ನವದೆಹಲಿ: ನಟ, ರಾಜಕಾರಣಿ ಕಮಲ್ ಹಾಸನ್ ಅವರ ಮಕ್ಕಳ್ ನಿಧಿ ಮೈಮ್ ಪಕ್ಷಕ್ಕೆ ‘ಬ್ಯಾಟರಿ’ (ಟಾರ್ಚ್) ಚಿಹ್ನೆ ನಿಗದಿಯಾಗಿದೆ. ಇನ್ನು ಮುಂದಿನ ಚುನಾವಣೆಯಲ್ಲಿ ಈ ಪಕ್ಷದ ಅಭ್ಯರ್ಥಿಗಳು ಟಾರ್ಚ್ ಚಿಹ್ನೆಯಡಿ ಸ್ಪರ್ಧೆ ಮಾಡಲಿದ್ದಾರೆ. ಚುನಾವಣಾ ಆಯೋಗ ಅಧಿಕೃತವಾಗಿ ಈ ಚಿಹ್ನೆಯನ್ನು ಮಕ್ಕಳ್ ನಿಧಿ ಮೈಮ್ ಪಕ್ಷಕ್ಕೆ ನಿಗದಿ ಮಾಡಿದೆ.
ಟಾರ್ಚ್ ಚಿಹ್ನೆಯನ್ನು ಖುಷಿಯಿಂದ ಸ್ವಾಗತ ಮಾಡಿರುವ ಕಮಲ್ ಹಾಸನ್ ಇದು ಅಭಿವೃದ್ಧಿಯ ಸಂಕೇತ ಮತ್ತು ಪಕ್ಷವೂ ರಾಜಕೀಯವಾಗಿ ಬೆಳಕಿನ ರೀತಿ ಕೆಲಸ ಮಾಡಲಿದೆ ಎಂದು ಹೇಳಿದ್ದಾರೆ.
ಭಾನುವಾರ ಚುನಾವಣಾ ಆಯೋಗ ದೇಶದ 39 ರಾಜಕೀಯ ಪಕ್ಷಗಳ ಚಿಹ್ನೆಯನ್ನು ಅಧಿಕೃತವಾಗಿ ನಿಗದಿಗೊಳಿಸಿದೆ.
ಕಳೆದ ವರ್ಷ ಫೆಬ್ರವರಿ 21ರಂದು ಕಮಲ್ ಹಾಸನ್ ಅವರು ಮಕ್ಕಳ್ ನಿಧಿ ಮೈಮ್ (ಎಂಎನ್ಎಂ) ಪಕ್ಷವನ್ನು ಆರಂಭಿಸಿದ್ದರು.ತಮಿಳುನಾಡಿನ ಮಧುರೈನಲ್ಲಿ ಅಧಿಕೃತವಾಗಿ ಸಾರ್ವಜನಿಕವಾಗಿ ಪಕ್ಷ ಘೋಷಣೆ ಮಾಡಿದ್ದರು. ಆರು ಕೈಗಳು ಒಂದಕ್ಕೊಂದು ಬೆಸೆದುಕೊಂಡಿರುವ ಚಿತ್ರವುಳ್ಳ ಧ್ವಜವನ್ನು ಅನಾವರಣ ಮಾಡಿದ್ದರು. ಇದು ಐದು ದಕ್ಷಿಣ ಭಾರತದ ರಾಜ್ಯಗಳ (ಕರ್ನಾಟಕ, ಆಂಧ್ರಪ್ರದೇಶ, ತಮಿಳುನಾಡು, ತೆಲಂಗಾಣ ಮತ್ತು ಕೇಂದ್ರಾಡಳಿತ ಪ್ರದೇಶ ಪುದುಚೇರಿ) ಒಗ್ಗಟ್ಟಿನ ಸಂಕೇತ ಎಂದು ಕಮಲ್ ಹಾಸನ್ ಹೇಳಿದ್ದರು.
Comments are closed.