ರಾಜ್‌ಕೋಟ್: ಗುಜರಾತ್‌ನ ಕಛ್ ಜಿಲ್ಲೆಯ ಧೋಲವಿರಾದಿಂದ ಸುಮಾರು 360 ಕಿ.ಮೀ ದೂರದ ಸ್ಥಳವೊಂದರಲ್ಲಿ ಸತತ ಎರಡು ತಿಂಗಳ ಕಾಲದ ಉತ್ಖನನ ನಡೆಸಿದ ಪ್ರಾಚ್ಯವಸ್ತು ಇಲಾಖೆ ಹರಪ್ಪಾ ನಾಗರಿಕತೆ ಕಾಲದ ಬೃಹತ್ ಮಾನವ ಅಸ್ಥಿಪಂಜರವೊಂದನ್ನು ಪತ್ತೆ ಮಾಡಿದೆ.
ಪ್ರಾಚೀನ ಕಾಲದ 300 ಮೀ x 300 ಮೀ ಅಳತೆಯ ಸಮಾಧಿ ಭೂಮಿಯಲ್ಲಿ ಈ ಉತ್ಖನನ ಕಾರ್ಯ ನಡೆಸಲಾಗಿದ್ದು, ಈ ಸ್ಥಳದಲ್ಲಿ 250ಕ್ಕೂ ಹೆಚ್ಚು ಸಮಾಧಿಗಳಿವೆ. ಅವುಗಳ ಪೈಕಿ 26 ಸಮಾಧಿಗಳನ್ನು ಉತ್ಖನನ ಮಾಡಲಾಗಿದೆ. ಅಂತಹ ಒಂದು ಸಮಾಧಿಯೊಳಗೆ 5,000 ವರ್ಷಗಳಷ್ಟು ಹಳೆಯ ಆರು ಅಡಿ ಉದ್ದದ ಪೂರ್ಣ ಮಾನವ ದೇಹದ ಅಸ್ಥಿಪಂಜರ ದೊರೆತಿದೆ ಎಂದು ಪ್ರಾಚ್ಯವಸ್ತು ತಜ್ಞರು ತಿಳಿಸಿದ್ದಾರೆ.
ಈ ಪ್ರದೇಶದಲ್ಲಿ ಸಾವಿರಾರು ವರ್ಷಗಳ ಹಿಂದೆಯೇ ಬೃಹತ್ ಜನವಸತಿ ಪ್ರದೇಶವಿತ್ತು ಎಂಬುದಕ್ಕೆ ಇದು ಸಾಕ್ಷಿಯಾಗಿದೆ.
ಅಲ್ಲದೆ, ಗುಜರಾತ್‌ನಲ್ಲಿ ಆಯತಾಕಾರದ ಸಮಾಧಿ ಪತ್ತೆಯಾಗಿರುವುದು ಇದೇ ಮೊದಲು. ಈ ಸಮಾಧಿ ಸುಮಾರು 4,600ರಿಂದ 5,200 ವರ್ಷಗಳಷ್ಟು ಹಳೆಯದು ಎಂದು ಅಂದಾಜಿಸಲಾಗಿದೆ. ‘ರಾಜ್ಯದಲ್ಲಿ ಇದುವರೆಗೆ ಪತ್ತೆಯಾದ ಸಮಾಧಿ ಸ್ಥಳಗಳೆಲ್ಲವೂ ವೃತ್ತಾಕಾರ ಅಥವಾ ಅರ್ಧ ವೃತ್ತಾಕಾರದಲ್ಲಿದ್ದವು. ಆಯತಾಕಾರದ ಸಮಾಧಿಯ ಮಹತ್ವವೇನು ಎಂಬುದನ್ನು ತಿಳಿಯಲು ನಾವು ಪ್ರಯತ್ನಿಸುತ್ತಿದ್ದೇವೆ’ ಎಂದು ಕಛ್ ವಿಶ್ವವಿದ್ಯಾಲಯದ ಪ್ರಾಚ್ಯವಸ್ತು ಇಲಾಖೆ ಮುಖ್ಯಸ್ಥ ಸುರೇಶ್ ಭಂಡಾರಿ ತಿಳಿಸಿದರು.
‘ಅಸ್ಥಿಪಂಜರದ ವಯಸ್ಸು, ಸಾವಿನ ಕಾರಣ ಹಾಗೂ ಲಿಂಗ ನಿರ್ಧರಿಸಲು ಅದನ್ನು ಕೇರಳ ವಿಶ್ವವಿದ್ಯಾಲಯಕ್ಕೆ ಒಯ್ಯಲಾಗಿದೆ’ ಎಂದು ಭಂಡಾರಿ ತಿಳಿಸಿದರು.
ಕಛ್ ವಿಶ್ವವಿದ್ಯಾಲಯ ಮತ್ತು ಕೇರಳ ಯುನಿವರ್ಸಿಟಿ ಜಂಟಿಯಾಗಿ ಲಖಪತ್ ತಾಲೂಕಿನ ಖತಿಯಾ ಗ್ರಾಮದಲ್ಲಿ ಈ ಉತ್ಖನನ ನಡೆಸಿದ್ದವು. ಗುಜರಾತ್‌ನಲ್ಲಿ ಆಯತಾಕಾರದ ಸಮಾಧಿ ಪತ್ತೆಯಾಗಿದ್ದು ಇದೇ ಮೊದಲು.
ಬಹುತೇಕ ಎಲ್ಲ ಸಮಾಧಿಗಳೂ ಪೂರ್ವ-ಪಶ್ಚಿಮ ಅಭಿಮುಖವಾಗಿದ್ದು, ಕಲ್ಲಿನ ಗೋಡೆಗಳನ್ನು ಹೊಂದಿವೆ. ತಲೆಯನ್ನು ಪೂರ್ವಕ್ಕೆ ಇರಿಸಲಾಗಿದ್ದು, ಕಾಲುಗಳು ಪಶ್ಚಿಮ ದಿಕ್ಕಿಗೆ ಇವೆ. ಈ ವರೆಗೆ ಅಗೆಯಲಾದ ಸಮಾಧಿಗಳ ಪೈಕಿ ಅತಿ ದೊಡ್ಡದು 6.9 ಮೀಟರ್ ಹಾಗೂ ಅತಿ ಚಿಕ್ಕದು 1.2 ಮೀಟರ್ ಗಾತ್ರದ್ದಾಗಿದೆ.
ಮಾನವ ಅಸ್ಥಿಪಂಜರದ ಜತೆಗೆ ಪ್ರಾಣಿಗಳ ಅವಶೇಷಗಳೂ ಕಂಡು ಬಂದಿದ್ದು, ಅವೆಲ್ಲವನ್ನು ದಾಖಲೀಕರಣ ಮಾಡಲಾಗಿದೆ. ಚಿಪ್ಪಿನ ಬಳೆಗಳು, ಅರೆಯುವ ಕಲ್ಲುಗಳು, ಹರಿತವಾದ ಅಂಚುಗಳ ಕಲ್ಲಿನ ಬ್ಲೇಡ್‌ಗಳು, ಕಲ್ಲು ಗುಂಡುಗಳನ್ನು ಸ್ಥಳದಿಂದ ಹೊರತೆಗೆಯಲಾಗಿದೆ. ಈ ಎಲ್ಲ ಪ್ರಾಚ್ಯ ವಸ್ತುಗಳನ್ನೂ ಆ ಕಾಲದ ಸಮುದಾಯದ ಆಚರಣೆಗಳು ಮತ್ತು ಸಾಮಾಜಿಕ ಕಾರ್ಯಗಳ ನೆಲೆಯಲ್ಲಿ ಅಧ್ಯಯನ ಮಾಡಲಾಗುವುದು ಎಂದು ತಜ್ಞರು ತಿಳಿಸಿದರು.
ಮಣ್ಣಿನ ಮಡಿಕೆಗಳು ಹಾಗೂ ಕಲ್ಲಿನ ಇಟ್ಟಿಗೆಗಳ ಕುರಿತು ಅಧ್ಯಯನದಿಂದ ಆ ಕಾಲದಲ್ಲಿ ಅವುಗಳ ನಿರ್ಮಾಣಕ್ಕೆ ಬಳಸಿದ್ದ ತಂತ್ರಜ್ಞಾನ ಮತ್ತು ಕಚ್ಚಾ ವಸ್ತುಗಳ ಬಗ್ಗೆ ಹೆಚ್ಚಿನ ಜ್ಞಾನ ದೊರೆಯಲಿದೆ. ಇಲ್ಲಿ ದೊರೆತ ವಸ್ತುಗಳ ಬಗ್ಗೆ ದೇಶದ ನಾನಾ ಪ್ರಯೋಗಾಲಯಗಳಲ್ಲಿ ಅಧ್ಯಯನ ನಡೆಸಿ ಹರಪ್ಪಾ ನಾಗರಿಕತೆಯ ಆರಂಭ ಕಾಲದಲ್ಲಿ ಖತಿಯಾ ಗ್ರಾಮದಲ್ಲಿ ಜನಜೀವನದ ಇತಿಹಾಸ ತಿಳಿಯಲಿದೆ’ ಎಂದು ಭಂಡಾರಿ ತಿಳಿಸಿದರು.
ಸಮಾಧಿಗಳಲ್ಲಿ ಮಣ್ಣಿನ ಪಾತ್ರೆಗಳೂ ದೊರೆತಿವೆ. ಅಸ್ಥಿಪಂಜರಗಳ ಪಾದದ ಬಳಿ ಈ ಪಾತ್ರೆಗಳನ್ನು ಇರಿಸಲಾಗಿತ್ತು. ಈ ಬಗೆಯ ಪಾತ್ರೆಗಳು ಪಾಕಿಸ್ತಾನದ ಆಮ್ರಿ, ನಾಲ್ ಮತ್ತು ಕೋಟ್ ಹಾಗೂ ಉತ್ತರ ಗುಜರಾತ್‌ನ ನಾಗ್‌ವಾಡ, ಛತ್ರಾದ್ ಸಹೇಲಿ, ಮೋತಿ ಪಿಪಾಲಿ ಮತ್ತು ಕಛ್‌ನ ಸುರ್ಕೋತ್‌ದಾ ಮತ್ತು ಧನೇತಿ ಎಂಬಲ್ಲಿ ಪ್ರಾಚ್ಯವಸ್ತು ಉತ್ಖನನದ ವೇಳೆ ದೊರೆತಿವೆ.
ಈ ನಿವೇಶನದಲ್ಲಿ ಮಕ್ಕಳ ಸಮಾಧಿಗಳೂ ಪತ್ತೆಯಾಗಿವೆ.
ಸಮಾಧಿಯಿಂದ ಹೊರತೆಗೆದ ವಸ್ತುಗಳ ಭೂ-ರಾಸಾಯನಿಕ ವಿಶ್ಲೇಷಣೆ ನಡೆಲಾಗುವುದು. ಈ ಭಾಗದಲ್ಲಿ ಮಾನವ ವಸತಿ ಇತ್ತೆಂಬುದನ್ನು ನಾವು ಧಾರಾಳವಾಗಿ ಖಚಿತಪಡಿಸಬಹುದು ಎಂದು ಭಂಡಾರಿ ತಿಳಿಸಿದರು.
Comments are closed.