ನವದೆಹಲಿ: ಜೈ ಭೀಮ್ ಆರ್ಮಿ ಮುಖ್ಯಸ್ಥ ಮತ್ತು ದಲಿತ ಯುವ ಹೋರಾಟಗಾರ ಚಂದ್ರಶೇಖರ್ ಆಜಾದ್ನನ್ನು ಇಂದು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿಯವರು ಭೇಟಿ ಮಾಡಿದ್ದಾರೆ. ಭೇಟಿ ಬಳಿಕ ಮಾಧ್ಯಮದ ಜತೆಗೆ ಮಾತನಾಡಿದ ಕಾಂಗ್ರೆಸ್ ಪ್ರಧಾನಿ ಕಾರ್ಯದರ್ಶಿ,”ಚುನಾವಣಾ ನೀತಿ ಉಲ್ಲಂಘನೆ ಆರೋಪದ ಮೇಲೆ ಆಡಳಿತರೂಢ ಬಿಜೆಪಿ ಸರ್ಕಾರ ಚಂದ್ರಶೇಖರ್ ಆಜಾದ್ ಅವರನ್ನು ಬಂಧಿಸಿದೆ. ಈ ಮೂಲಕ ದಲಿತ ಯುವ ಹೋರಾಟಗಾರನ ಧ್ವನಿ ಹತ್ತಿಕ್ಕುವ ಪ್ರಯತ್ನ ಮಾಡುತ್ತಿದೆ” ಎಂದು ಕೇಸರಿ ಪಕ್ಷದ ವಿರುದ್ಧ ಆರೋಪಿಸಿದ್ದಾರೆ.
“ಸಿಎಂ ಯೋಗಿ ಆದಿತ್ಯನಾಥ್ ನೇತೃತ್ವದ ಬಿಜೆಪಿ ಸರ್ಕಾರ ವೈಫ್ಯಲ್ಯಗಳನ್ನು ಪ್ರಶ್ನಿಸುತ್ತಿರುವ ಯುವ ಹೋರಾಟಗಾರರನ್ನು ಬಂಧಿಸಲಾಗುತ್ತಿದೆ. ಉದ್ಯೋಗ ನೀಡಲಾಗದ ಸರ್ಕಾರ ಯುವಕರ ಧ್ವನಿಯನ್ನು ಹತ್ತಿಕ್ಕುವ ಮೂಲಕ ಬಾಯಿಮುಚ್ಚಿಸಲು ಮುಂದಾಗಿದೆ. ಸರ್ಕಾರದ ಈ ನಡೆಯ ವಿರುದ್ಧ ಹೋರಾಟ ಮಾಡಬೇಕಿದೆ. ಸಮಾಜದಲ್ಲಿನ ಶೋಷಣೆ ವಿರುದ್ಧದ ಹೋರಾಟಕ್ಕೆ ಹೆಗಲು ನೀಡಿರುವ ಆಜಾದ್ರನ್ನು ಬಂಧಿಸುವ ಮೂಲಕ ತಮ್ಮ ದುರ್ಬುದ್ಧಿ ತೋರುತ್ತಿದೆ” ಎಂದು ಪ್ರಿಯಾಂಕ ಗಾಂಧಿ ಕಿಡಿಕಾರಿದ್ದಾರೆ.
ಈಗಾಗಲೇ ಸಕ್ರಿಯ ರಾಜಕಾರಣಕ್ಕೆ ಧುಮುಕಿರುವ ಪ್ರಿಯಾಂಕಾ ಗಾಂಧಿ ಇವತ್ತು ಗಂಭೀರ ಹೆಜ್ಜೆಯೊಂದನ್ನು ಇರಿಸಿದ್ದಾರೆ. ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ ಮಾಡಿದ ಆರೋಪದ ಮೇಲೆ ಬಂಧಿತರಾಗಿರುವ ಭೀಮ್ ಆರ್ಮಿ ಮುಖ್ಯಸ್ಥ ಚಂದ್ರಶೇಖರ್ ಆಜಾದ್ ಅವರನ್ನು ಪ್ರಿಯಾಂಕಾ ಗಾಂಧಿ ಮತ್ತು ಜ್ಯೋತಿರಾದಿತ್ಯ ಸಿಂಧ್ಯ ಭೇಟಿಯಾಗಿದ್ಧಾರೆ. ಉತ್ತರ ಪ್ರದೇಶದ ಮೀರತ್ನ ಆಸ್ಪತ್ರೆಯೊಂದರಲ್ಲಿ ದಾಖಲಾಗಿರುವ ಆಜಾದ್ ಅವರನ್ನು ಕಾಂಗ್ರೆಸ್ಸಿಗರು ಭೇಟಿ ಮಾಡಿರುವುದು ಕುತೂಹಲ ಮೂಡಿಸಿದೆ.
ಎಸ್ಪಿ-ಬಿಎಸ್ಪಿ ಮೈತ್ರಿಕೂಟದಲ್ಲಿ ಸ್ಥಾನ ಪಡೆಯಲು ವಿಫಲರಾದ ಕಾಂಗ್ರೆಸ್ ಪಕ್ಷ ಉತ್ತರ ಪ್ರದೇಶದಲ್ಲಿ ಏಕಾಂಗಿಯಾಗಿಯೇ ಸ್ಪರ್ಧಿಸುತ್ತಿದೆ. ಈ ನಿಟ್ಟಿನಲ್ಲಿ ಆಜಾದ್ ಅವರನ್ನು ಕಾಂಗ್ರೆಸ್ ನಾಯಕರು ಭೇಟಿಯಾಗಿರುವ ಬೆಳವಣಿಗೆ ಕುತೂಹಲ ಮೂಡಿಸಿದೆ. ಅಜಾದ್ ಅವರನ್ನು ಒಲಿಸಿಕೊಂಡು ದಲಿತರ ಬೆಂಬಲ ಪಡೆಯಲು ಕಾಂಗ್ರೆಸ್ ಯತ್ನಿಸುತ್ತಿರಬಹುದೆಂದು ವಿಶ್ಲೇಷಿಸಲಾಗುತ್ತಿದೆ.
ದಲಿತರ ನಾಯಕನಾಗಿ ಗುರುತಿಸಿಕೊಳ್ಳುತ್ತಿರುವ ಚಂದ್ರಶೇಖರ್ ಆಜಾದ್ ಅವರು ಮೀರತ್ನಲ್ಲಿ ಭಾನುವಾರ “ಹೂಂಕಾರ್” ರ್ಯಾಲಿಗೆ ಚಾಲನೆ ನೀಡಿದ್ದರು. ವಾಹನಗಳ ಮೂಲಕ ಬೃಹತ್ ಮೆರವಣಿಗೆ ನಡೆಸಿ ಮಾರ್ಚ್ 15ರಂದು ದೆಹಲಿಯ ಜಂತರ್ ಮಂತರ್ ತಲುಪುವುದು ಈ ಹೂಂಕಾರ್ ರ್ಯಾಲಿಗೆ ಉದ್ದೇಶವಾಗಿದೆ.
ಆದರೀಗ, ಅನುಮತಿ ಇಲ್ಲದೆ ಪಾದಯಾತ್ರೆ ನಡೆಸಿ ನೀತಿ ಸಂಹಿತೆ ಉಲ್ಲಂಘಿಸಿದ ಆರೋಪದ ಮೇಲೆ ಉತ್ತರ ಪ್ರದೇಶ ಪೊಲೀಸರು ಚಂದ್ರಶೇಖರ್ ಆಜಾದ್ ಅವರನ್ನು ಬಂಧಿಸಿದ್ದರು. ಆ ನಂತರ ಅಸ್ವಸ್ಥಗೊಂಡ ಅವರನ್ನು ಮೀರತ್ನ ಆನಂದ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ. ಉತ್ತರ ಪ್ರದೇಶದ ಕಾಂಗ್ರೆಸ್ ಚುನಾವಣಾ ಉಸ್ತುವಾರಿಯಾಗಿರುವ ಜ್ಯೋತಿರಾದಿತ್ಯ ಸಿಂಧ್ಯ ಹಾಗೂ ಪ್ರಿಯಾಂಕಾ ಗಾಂಧಿ ಅವರು ಆನಂದ್ ಆಸ್ಪತ್ರೆಗೆ ಹೋಗಿ ಆಜಾದ್ ಅವರನ್ನು ಭೇಟಿಯಾಗಿದ್ದಾರೆ.
Comments are closed.