ರಾಷ್ಟ್ರೀಯ

ಏರ್‌ಸ್ಟ್ರೈಕ್ ಪರಿಣಾಮ ಮೋದಿ ಮತ್ತೆ ಅಧಿಕಾರಕ್ಕೆ!: ಟೈಮ್ಸ್ ನೌ ವಾಹಿನಿಯ ಸಮೀಕ್ಷೆ

Pinterest LinkedIn Tumblr


ನವದೆಹಲಿ: ಪಾಕಿಸ್ತಾನದ ಬಾಲಕೋಟ್ ಮೇಲೆ ನಡೆದ ಏರ್ ಸ್ಟ್ರೈಕ್ ಬಳಿಕ ಪ್ರಧಾನಿ ನರೇಂದ್ರ ಮೋದಿ ಜನಪ್ರಿಯತೆ ದೇಶದಲ್ಲಿ ಭಾರೀ ಏರಿಕೆಯಾಗಿದ್ದು ಲೋಕಸಭಾ ಚುನಾವಣೆಯಲ್ಲಿ ಎನ್‍ಡಿಎ ಸರ್ಕಾರಕ್ಕೆ ಸ್ಪಷ್ಟ ಬಹುಮತ ಸಿಗಲಿದೆ ಎಂದು ಸಮೀಕ್ಷೆ ತಿಳಿಸಿದೆ.

ಟೈಮ್ಸ್ ನೌ ವಾಹಿನಿಯ ಸಮೀಕ್ಷೆಯ ಪ್ರಕಾರ 2019 ಲೋಕಸಭಾ ಚುನಾವಣೆಯಲ್ಲಿ ಮೋದಿ ನೇತೃತ್ವದ ಎನ್‍ಡಿಎ ಮೈತ್ರಿ ಕೂಟ 283 ಸ್ಥಾನಗಳನ್ನು ಪಡೆದರೆ, ಯುಪಿಎ 135 ಹಾಗೂ ಇತರೇ 125 ಸ್ಥಾನಗಳು ಪಡೆಯಲಿದೆ. ಕಳೆದ ಬಾರಿಯ ಸಮೀಕ್ಷೆಗೆ ಹೋಲಿಕೆ ಮಾಡಿದ್ದಲ್ಲಿ ಎನ್‍ಡಿಎ ಒಕ್ಕೂಟಕ್ಕೆ 31 ಹೆಚ್ಚುವರಿ ಸ್ಥಾನ ಸಿಕ್ಕಿದೆ.

ಏರ್ ಸ್ಟ್ರೈಕ್ ಬಳಿಕ ನಡೆದ ಸಮೀಕ್ಷೆ ಇದಾಗಿದ್ದು, ಕಳೆದ ಜನವರಿಯಲ್ಲಿ ನಡೆಸಿದ್ದ ಸಮೀಕ್ಷೆಯಲ್ಲಿ ಎನ್‍ಡಿಎ ಒಕ್ಕೂಟಕ್ಕೆ 252 ಸ್ಥಾನಗಳನ್ನು ಸಮೀಕ್ಷೆಯಲ್ಲಿ ನೀಡಲಾಗಿತ್ತು. ಅಲ್ಲದೇ ಯುಪಿಎಗೆ 147 ಮತ್ತು ಇತರೇ 144 ಸ್ಥಾನಗಳು ಪಡೆದುಕೊಳ್ಳಲಿದೆ ಎಂದು ಸಮೀಕ್ಷೆ ತಿಳಿಸಿತ್ತು.

ಉಳಿದಂತೆ ಕರ್ನಾಟಕದಲ್ಲಿ ಕಾಂಗ್ರೆಸ್, ಜೆಡಿಎಸ್ ಮೈತ್ರಿ ಕೂಟ 13 ಸ್ಥಾನ ಪಡೆದರೆ ಹಾಗೂ ಬಿಜೆಪಿ 15 ಸ್ಥಾನಗಳು ಪಡೆಯಲಿದೆ ಎಂದು ಸಮೀಕ್ಷೆ ತಿಳಿಸಿದೆ. ಜನವರಿಯಲ್ಲಿ ಬಿಜೆಪಿ 14 ಮತ್ತು ಕಾಂಗ್ರೆಸ್, ಜೆಡಿಎಸ್ ಮೈತ್ರಿಕೂಟ 14 ಸ್ಥಾನಗಳನ್ನು ಗಳಿಸಲಿದೆ ಎಂದು ಸಮೀಕ್ಷೆ ಹೇಳಿತ್ತು. ಆದರೆ ಹೊಸ ಸಮೀಕ್ಷೆಯಲ್ಲಿ ಬಿಜೆಪಿ ಒಂದು ಸ್ಥಾನ ಏರಿಕೆ ಕಂಡಿದೆ.

ಕರ್ನಾಟಕದಲ್ಲಿ ಎನ್‍ಡಿಎ/ಬಿಜೆಪಿ 44.30% ವೋಟು ಶೇರ್ ಪಡೆಯಲಿದ್ದು, ಯುಪಿಎ ಮೈತ್ರಿಕೂಟ 43.50% ವೋಟ್ ಶೇರ್ ಪಡೆಯಲಿದೆ ಎಂದು ಹೇಳಿದೆ. ಮೈತ್ರಿ ಸರ್ಕಾರದ ರಚನೆ ಆದರೂ ಕೂಡ ರಾಜ್ಯದಲ್ಲಿ ಮೈತ್ರಿ ಆದ ಬಳಿಕ ಜೆಡಿಎಸ್ ನಿಂದ ಸಿಗುವ ಎಲ್ಲಾ ಮತಗಳು ಕೂಡ ಕಾಂಗ್ರೆಸ್‍ಗೆ ಲಭಿಸುವುದಿಲ್ಲ ಎಂಬ ಸೂಚನೆಯನ್ನು ಸಮೀಕ್ಷೆ ನೀಡಿದೆ.

Comments are closed.