ಮುಂಬೈ: ಚುನಾವಣೆಗಳು ಬಂತೆಂದರೆ ರಾಜಕಾರಣಿಗಳು ಜ್ಯೋತಿಷಿಗಳ ಎಡತಾಕುವುದು ಸರ್ವೇಸಾಮಾನ್ಯ. ಜ್ಯೋತಿಷಿಗಳೂ ಕೂಡ ಸ್ವಯಿಚ್ಛೆಯಿಂದಲೇ ಭವಿಷ್ಯ ಹೇಳಿ ತಮ್ಮ ಪಾಂಡಿತ್ಯ ತೋರ್ಪಡಿಸುವುದೂ ಈ ಸಂದರ್ಭದಲ್ಲಿ ಸಾಮಾನ್ಯವೇ. ಈ ಬಾರಿ ಅತ್ಯಂತ ಮಹತ್ವ ಎಂದು ಪರಿಗಣಿಸಲಾಗಿರುವ ಲೋಕಸಭಾ ಚುನಾವಣೆ ಹಿಂದೆಂದಿಗಿಂತಲೂ ಜಿದ್ದಾಜಿದ್ದಿಯಿಂದ ಕೂಡಿದೆ. ಎಲ್ಲರ ಗಮನ ನರೇಂದ್ರ ಮೋದಿ ಮತ್ತು ರಾಹುಲ್ ಗಾಂಧಿ ಮೇಲೆಯೇ ನೆಟ್ಟಿದೆ. ಬಿಜೆಪಿ ಗೆದ್ದರೆ ಮೋದಿಯೇ ಮತ್ತೆ ಪ್ರಧಾನಿ; ಕಾಂಗ್ರೆಸ್ ಗೆದ್ದರೆ ರಾಹುಲ್ ಪ್ರಧಾನಿಯಾಗುತ್ತಾರೆ ಇಲ್ಲಾ ಇನ್ನೊಬ್ಬರನ್ನು ಪ್ರಧಾನಿ ಸ್ಥಾನದಲ್ಲಿ ಕೂರಿಸುತ್ತಾರೆ. ಆದರೆ, ಇವರಿಬ್ಬರಲ್ಲಿ ಗೆಲ್ಲೋದ್ಯಾರು..? ಭಾರತದ ಜ್ಯೋತಿಷಿಗಳಲ್ಲೂ ಈ ವಿಚಾರದಲ್ಲಿ ತುಸು ಭಿನ್ನಾಭಿಪ್ರಾಯಗಳಿವೆ. ಕೆಲವರು ಮೋದಿ ಮತ್ತೊಮ್ಮೆ ಪ್ರಧಾನಿ ಆಗುತ್ತಾರೆ ಎಂದರೆ, ಮತ್ತೆ ಕೆಲವರು ರಾಹುಲ್ ಗಾಂಧಿಗೆ ಹೆಚ್ಚು ಅವಕಾಶವುಂಟು ಎಂದು ಅಭಿಪ್ರಾಯಪಟ್ಟಿದ್ಧಾರೆ.
ಟರೋಟ್ ಕಾರ್ಡ್ ತಜ್ಞೆ ತೃತೀಯ ಲಿಂಗಿ ಜೋಯಾ ಲೋಬೋ ಅವರ ಪ್ರಕಾರ ನರೇಂದ್ರ ಮೋದಿ ಅವರೇ ಚುನಾವಣೆಯಲ್ಲಿ ಗೆಲ್ಲುತ್ತಾರಂತೆ. ಆಧ್ಯಾತ್ಮಿಕ ಸಾಧಕ ಹಾಗೂ ಟರೋಟ್ ಕಾರ್ಡ್ ತಜ್ಞೆ ಲಾರಾ ಶಾ ಅವರೂ ಕೂಡ ಮೋದಿಯೇ ಗೆಲ್ಲುವುದು ಎಂದು ಹೇಳುತ್ತಾರೆ.
ಟರೋಟ್ ಕಾರ್ಡ್ಗಳ ವಿಚಾರಕ್ಕೆ ಬಂದರೆ ಮೋದಿ ಅವರು ಚಕ್ರವರ್ತಿ ಇದ್ದಂತೆ. ಆತ್ಮಜ್ಞಾನ, ಆಧ್ಯಾತ್ಮ ಸಾಧನೆ, ಕರ್ಮ ಎಲ್ಲವೂ ಪರಿಪೂರ್ಣವಾಗಿ ಹೊಂದಿಕೊಳ್ಳುತ್ತವೆ. ಆದರೆ, ರಾಹುಲ್ ಗಾಂಧಿ ಅವರದ್ದು ರಾಕ್ಷಸತ್ವವಾಗಿದ್ದು ಅವರಲ್ಲಿ ಸದಾ ಗೊಂದಲವಿರುತ್ತದೆ. ಅವರದ್ದು ಮಿಥುನ ರಾಶಿಯಾದ್ದರಿಂದ ದ್ವಂದ್ವ ವ್ಯಕ್ತಿತ್ವ ಇರುತ್ತದೆ ಎಂದು ಲಾರಾ ಶಾ ತಿಳಿಸುತ್ತಾರೆ.
ಶಾ ಪ್ರಕಾರ ಬಿಜೆಪಿಯು ಈ ಬಾರಿಯೂ ಅಧಿಕಾರಕ್ಕೆ ಬರುತ್ತದಾದರೂ ಕಳೆದ ಬಾರಿಗಿಂತ ಕಡಿಮೆ ಸ್ಥಾನ ಗೆಲ್ಲುತ್ತದೆ ಎಂದು ಶಾ ಭವಿಷ್ಯ ನುಡಿದಿದ್ದಾರೆ. ಮೋದಿ ಅಧಿಕಾರಕ್ಕೆ ಬಂದರೆ 20 ಲಕ್ಷದಷ್ಟಿರುವ ತೃತೀಯ ಲಿಂಗಿ ಸಮುದಾಯಕ್ಕೆ ಏನಾದರೂ ಸಹಾಯ ಮಾಡುವ ಸಾಧ್ಯತೆ ಶೇ. 35ರಷ್ಟು ಇದೆ ಎಂದು ಸ್ವತಃ ಮಂಗಳಮುಖಿಯಾಗಿರುವ ಲಾರಾ ಶಾ ಹೇಳುತ್ತಾರೆ.
ಇನ್ನು ಸಾಂಪ್ರದಾಯಿಕ ಜ್ಯೋತಿಷಿ ರಾಜ್ ಕುಮಾರ್ ಶರ್ಮಾ ಅವರು ರಾಹುಲ್ ಗಾಂಧಿ ಗೆಲ್ಲುತ್ತಾರೆಂದು ಭವಿಷ್ಯ ನುಡಿದಿದ್ದಾರೆ. ಗ್ರಹ ಗತಿಗಳು ಕಾಂಗ್ರೆಸ್ಗೆ ಅನುಕೂಲವಾಗುವಂತಿವೆ. ರಾಹುಲ್ ಗಾಂಧಿ ಅವರಿಗೆ ಶುಭದಿನಗಳು ಈಗ ಪ್ರಾರಂಭವಾಗಿದ್ದು, ಅವರ ಚಂದ್ರನು ಮೋದಿ ಅವರದ್ದಕಿಂತ ಬಲಿಷ್ಠನಾಗಿದ್ದಾನೆ. ಇದು ರಾಹುಲ್ ಗಾಂಧಿ ಅವರು ಪ್ರಧಾನಿಯಾಗುವುದನ್ನು ಸೂಚಿಸುತ್ತದೆ. ಪ್ರಧಾನಿ ಆಗದೇ ಇದ್ದರೂ ಅವರು ಸೂಚಿಸಿದ ವ್ಯಕ್ತಿ ಪ್ರಧಾನಿ ಆಗುತ್ತಾರೆ ಎಂದು ಶರ್ಮಾ ಅಭಿಪ್ರಾಯಪಡುತ್ತಾರೆ.
(ಕೃಪೆ: ಫಸ್ಟ್ ಪೋಸ್ಟ್)
Comments are closed.