ರಾಷ್ಟ್ರೀಯ

ಕುಟುಂಬ ರಾಜಕಾರಣದ ಕಳಂಕ ಬೇಡವೆಂದು ಚುನಾವಣೆ ಕಣದಿಂದ ಹಿಂದೆ ಸರಿದ ಬಿಜೆಪಿ ನಾಯಕನ ಮಗ

Pinterest LinkedIn Tumblr


ಭೋಪಾಲ್: ಕುಟುಂಬ ರಾಜಕಾರಣದ ಕಳಂಕ ಮೆತ್ತಿಕೊಳ್ಳುವುದು ಬೇಡವೆಂದು ಬಿಜೆಪಿ ನಾಯಕರೊಬ್ಬರ ಮಗ ಲೋಕಸಭೆ ಚುನಾವಣೆ ಕಣದಿಂದಲೇ ಹಿಂದೆ ಸರಿದ ಘಟನೆ ಬೆಳಕಿಗೆ ಬಂದಿದೆ. ಮಧ್ಯಪ್ರದೇಶದ ವಿಪಕ್ಷ ಬಿಜೆಪಿ ನಾಯಕ ಗೋಪಾಲ್ ಭಾರ್ಗವ್ ಅವರ ಮಗ ಅಭಿಷೇಕ್ ಭಾರ್ಗವ್ ಅವರ ಈ ನಿರ್ಧಾರಕ್ಕೆ ಪ್ರಧಾನಿ ನರೇಂದ್ರ ಮೋದಿ ಮತ್ತು ಲಾಲಕೃಷ್ಣ ಆಡ್ವಾಣಿ ಕಾರಣರಂತೆ. ರಾಜಕಾರಣಿಗಳ ಕುಟುಂಬದ ಪ್ರತಿಯೊಬ್ಬ ಸದಸ್ಯರೂ ಒಂದಿಲ್ಲೊಂದು ರೀತಿಯಲ್ಲಿ ರಾಜಕಾರಣದಲ್ಲಿ ಬೇರೂರುತ್ತಿರುವುದು ಹೆಚ್ಚಾಗುತ್ತಿರುವ ಈ ಸಂದರ್ಭದಲ್ಲಿ ಅಭಿಷೇಕ್ ಭಾರ್ಗವ್ ವಿಶೇಷ ಎನಿಸುತ್ತಾರೆ.

“ರಾಜಕಾರಣದಲ್ಲಿ ಸ್ವಜನ ಪಕ್ಷಪಾತದ ವಿರುದ್ಧ ಆಡ್ವಾಣಿ ಅವರು ಹೇಳಿಕೆ ನೀಡಿದ್ದನ್ನು ಕೇಳಿದೆ. ಪ್ರಧಾನಿ ಮೋದಿ ಕೂಡ ಈ ವಿಚಾರದ ಬಗ್ಗೆ ಬ್ಲಾಗ್ ಬರೆದಿದ್ದರು. ತಮ್ಮ ಪಕ್ಷವು ರಾಷ್ಟ್ರೀಯತೆಯ ಯುದ್ಧ ಮಾಡುತ್ತಿರುವಾಗ ನನ್ನಂಥ ವ್ಯಕ್ತಿಯು ಇದಕ್ಕೆ ಅಡ್ಡಿಯಾಗುತ್ತಿದ್ದೇನೆಂದು ನನಗೆ ಪಾಪಪ್ರಜ್ಞೆ ಕಾಡಿತು” ಎಂದು ಅಭಿಷೇಕ್ ಭಾರ್ಗವ್ ಅವರು ಫೇಸ್​ಬುಕ್​ನಲ್ಲಿ ನೀಡಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಮಧ್ಯಪ್ರದೇಶದ ಖಜುರಾಹೋ, ಸಾಗರ್ ಮತ್ತು ದಾಮೋಹ್ ಈ ಮೂರು ಲೋಕಸಭಾ ಕ್ಷೇತ್ರಗಳಿಗೆ ಶಾರ್ಟ್ ಲಿಸ್ಟ್ ಆಗಿದ್ದ ಸಂಭಾವ್ಯ ಅಭ್ಯರ್ಥಿಗಳಲ್ಲಿ ಅಭಿಷೇಕ್ ಭಾರ್ಗವ್ ಅವರ ಹೆಸರೂ ಇತ್ತು. ತಮ್ಮ ಹೆಸರನ್ನ ಪರಿಗಣಿಸಿದ್ದಕ್ಕೆ ಧನ್ಯವಾದ ಅಭಿಷೇಕ್ ಧನ್ಯವಾದ ಹೇಳಿದ್ದರಾದರೂ, ನಂತರ ತಾನು ಸ್ಪರ್ಧೆಯಿಂದ ಹಿಂದೆ ಸರಿದಿರುವುದಾಗಿ ಘೋಷಿಸಿದರು.

“ಸ್ವಜನ ಪಕ್ಷಪಾತದ ಕಳಂಕದೊಂದಿಗೆ ರಾಜಕಾರಣ ಪ್ರವೇಶಿಸಲು ಇಷ್ಟವಿಲ್ಲ ಎಂದು ನಾನು ಸ್ಪಷ್ಟಪಡಿಸಿದೆ. ಸೂಕ್ತವಾದ ಕಾರ್ಯಕರ್ತನನ್ನು ಅಭ್ಯರ್ಥಿಯನ್ನಾಗಿ ಮಾಡಿ ಎಂದು ಪಕ್ಷವನ್ನು ಒತ್ತಾಯಿಸುವೆ” ಎಂದು ಅಭಿಷೇಕ್ ತಮ್ಮ ಫೇಸ್​ಬುಕ್ ಪೋಸ್ಟ್​ನಲ್ಲಿ ಬರೆದುಕೊಂಡಿದ್ದಾರೆ.

ಅಭಿಷೇಕ್ ಭಾರ್ಗವ್ ಅವರ ತಂದೆ ಗೋಪಾಲ್ ಭಾರ್ಗವ್ ಮಧ್ಯಪ್ರದೇಶದ ಘಟಾನುಘಟಿ ರಾಜಕಾರಣಿ. ಸಾಗರ್ ಜಿಲ್ಲೆಯ ರೆಹ್ಲಿ ವಿಧಾನಸಭಾ ಕ್ಷೇತ್ರದಲ್ಲಿ 1985ರಿಂದಲೂ ಸತತವಾಗಿ ಗೆಲ್ಲುತ್ತಾ ಬಂದಿರುವ ಇವರು ಹಿಂದಿನ ಬಿಜೆಪಿ ಸರಕಾರದ ಅವಧಿಯಲ್ಲಿ ಹಿರಿಯ ಸಚಿವರಾಗಿ ಕಾರ್ಯನಿರ್ವಹಿಸಿದ್ದರು. ಆದರೆ. ರೈತನ ಮಗ ರೈತನಾಗುವುದಾದರೆ ರಾಜಕಾರಣಿ ಮಗ ರಾಜಕಾರಣಿ ಯಾಕಾಗಬಾರದು ಎಂದು ಹೇಳುವ ಮೂಲಕ ಇವರು ಕುಟುಂಬ ರಾಜಕಾರಣದ ಪರ ಮಾತನಾಡಿ ವಿವಾದ ಸೃಷ್ಟಿಸಿದ್ದರು. ಈಗ ಇವರ ಮಗ ಅಭಿಷೇಕ್ ಅವರು ಕುಟುಂಬ ರಾಜಕಾರಣದ ವಿರುದ್ಧ ಧ್ವನಿ ಎತ್ತಿರುವುದು ಒಂದು ರಾಜಕೀಯ ತಂತ್ರ ಎಂದು ವಿರೋಧಿಗಳು ಅವಲೋಕಿಸಿದ್ದಾರೆ.

ಬಿಜೆಪಿಯ ಇತರ ಪ್ರಮುಖ ಮುಖಂಡರಾದ ಗೌರಿಶಂಕರ್ ಬಿಸೇನ್ ಮತ್ತು ರಾಘವ್​ಜೀ ಭಾಯ್ ಅವರು ತಮ್ಮ ಹೆಣ್ಮಕ್ಕಳಿಗೆ ಟಿಕೆಟ್ ಕೊಡಿಸಲು ಲಾಬಿ ನಡೆಸುತ್ತಿದ್ದಾರೆ. ಮಾಜಿ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಅವರು ತಮ್ಮ ಪತ್ನಿ ಸಾಧನಾ ಸಿಂಗ್ ಅವರನ್ನ ವಿದಿಶಾದಿಂದ ಕಣಕ್ಕಿಳಿಸುವ ಇರಾದೆಯಲ್ಲಿದ್ಧಾರೆ. ಈ ಹಿನ್ನೆಲೆಯಲ್ಲಿ ಗೋಪಾಲ್ ಭಾರ್ಗವ್ ಅವರು ತಮ್ಮ ಮಗನ ಮೂಲಕ ಕುಟುಂಬ ರಾಜಕಾರಣದ ವಿರುದ್ಧ ಹೇಳಿಕೆ ನೀಡಿಸಿರಬಹುದು. ಅಥವಾ ತಮ್ಮ ಮಗನಿಗೆ ಟಿಕೆಟ್ ಸಿಗುವ ಸಾಧ್ಯತೆ ಇಲ್ಲದಿದ್ದರಿಂದ ಗೋಪಾಲ್ ಭಾರ್ಗವ್ ಈ ತಂತ್ರ ಅನುಸರಿಸುತ್ತಿರಬಹುದು ಎಂಬ ಅಭಿಪ್ರಾಯಗಳು ಕೇಳಿಬರುತ್ತಿವೆ.

ಆಡಳಿತಾರೂಢ ಕಾಂಗ್ರೆಸ್ ಪಕ್ಷದ ನಾಯಕರು ಈ ಬೆಳವಣಿಗೆಯನ್ನು ಒಂದು ರಾಜಕೀಯ ನಾಟಕ ಎಂದು ಲೇವಡಿ ಮಾಡಿದ್ದಾರೆ.

Comments are closed.