ವಾಷಿಂಗ್ಟನ್: ಭಾರತದ ವಾಯುಪಡೆಯ ಪೈಲಟ್ ವಿಂಗ್ ಕಮಾಂಡರ್ ಅಭಿನಂದನ್ ವರ್ತಮಾನ್ ಅವರನ್ನು ಪಾಕಿಸ್ತಾನ ಬಂಧಿಸಿದ ನಂತರ ಭಾರತ ಮತ್ತು ಪಾಕಿಸ್ತಾನದ ಮಿಲಿಟರಿಗಳು ಪರಸ್ಪರ ಕ್ಷಿಪಣಿ ದಾಳಿ ನಡೆಸುವ ಹಂತಕ್ಕೆ ಹೋಗಿದ್ದವು. ಅಭಿನಂದನ್ ಅವರಿಗೆ ಏನಾದರೂ ತೊಂದರೆಯಾದರೆ ಪರಿಣಾಮ ನೆಟ್ಟಗಿರದು ಎಂದು ಸಂಶೋಧನೆ ಮತ್ತು ವಿಶ್ಲೇಷಣೆ (ರಾ) ವಿಭಾಗದ ಕಾರ್ಯದರ್ಶಿ ಅನಿಲ್ ಧಸ್ಮಾನಾ ಪಾಕಿಸ್ತಾನದ ಗುಪ್ತಚರ ದಳ ಐಎಸ್‌ಐನ ಮುಖ್ಯಸ್ಥರಿಗೆ ತಿಳಿಸಿದ್ದರು ಎಂದು ತಿಳಿದುಬಂದಿದೆ.
ಈ ವಿಷಯದಲ್ಲಿ ಅಧಿಕೃತ ಮಾಹಿತಿಯಿರುವ ನವದೆಹಲಿ ಮತ್ತು ಅಮೆರಿಕದ ಅಧಿಕಾರಿಗಳ ಪ್ರಕಾರ, ಧಸ್ಮಾನಾ ಅವರು ಪಾಕಿಸ್ತಾನದ ಅಧಿಕಾರಿ ಮುನೀರ್ ಜೊತೆ ಅಭಿನಂದನ್ ಬಿಡುಗಡೆಯ ಬಗ್ಗೆ ಮಾತನಾಡಿದ್ದರು. ಫೆ.27ರಂದು ಈ ಮಾತುಕತೆ ನಡೆದಿತ್ತು. ಭಾರತೀಯ ಸೇನಾಪಡೆಯು ರಾಜಸ್ಥಾನದಲ್ಲಿ 12 ಕ್ಷಿಪಣಿಗಳನ್ನು ನಿಯೋಜಿಸಿರುವ ಬಗ್ಗೆ ಅವರು ಮಾತನಾಡಿದ್ದರು.
ಭಾರತವು ಕ್ಷಿಪಣಿ ನಿಯೋಜಿಸಿದ್ದಕ್ಕೆ ಪ್ರತಿಯಾಗಿ ಪಾಕಿಸ್ತಾನ ಕೂಡ ತಿರುಗೇಟು ನೀಡಲು 13 ಕ್ಷಿಪಣಿಗಳನ್ನು ಭಾರತದತ್ತ ಮುಖ ಮಾಡಿ ಸಜ್ಜುಗೊಳಿಸಿತ್ತು. ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಹಾಗೂ ಧಸ್ಮಾನಾ ಅವರು ಯುಎಇ ಮತ್ತು ಸೌದಿ ಅರೇಬಿಯಾ ಸರ್ಕಾರದ ಜೊತೆಗೂ ಮಾತನಾಡಿ ಪಾಕಿಸ್ತಾನದ ಮೇಲೆ ಅಭಿನಂದನ್‌ರನ್ನು ಬಿಡುಗಡೆ ಮಾಡುವಂತೆ ಒತ್ತಡ ಹೇರಲು ಹೇಳಿದ್ದರು. ಭಾರತ ಕಠಿಣ ಕ್ರಮಕ್ಕೆ ಮುಂದಾಗಿದೆ ಎಂಬ ಬಗ್ಗೆ ಅಮೆರಿಕಕ್ಕೂ ಮಾಹಿತಿ ನೀಡಿತ್ತು ಎಂದು ಮೂಲಗಳು ಹೇಳಿವೆ.
ಭಾರತ ದಾಳಿ ನಡೆಸಬಹುದು ಎಂಬ ಭೀತಿಯಿಂದ ಪಾಕಿಸ್ತಾನದ ಸೇನಾಪಡೆ ಇಸ್ಲಾಮಾಬಾದ್, ಲಾಹೋರ್ ಹಾಗೂ ಕರಾಚಿಯ ಹಲವಾರು ರಕ್ಷಣಾ ಸ್ಥಾವರಗಳನ್ನು ಹಾಗೂ ಸೇನಾಪಡೆಯ ವಸತಿ ಕಾಲೊನಿಗಳನ್ನು ಮುಚ್ಚಿತ್ತು. ಪೈಲಟ್ ಅಭಿನಂದನ್‌ಗೆ ಪಾಕಿಸ್ತಾನ ಏನಾದರೂ ಹಾನಿ ಮಾಡಿದರೆ ಯಾವುದೇ ಕ್ರಮ ಕೈಗೊಳ್ಳಬಹುದು ಎಂದು ಪ್ರಧಾನಿ ನರೇಂದ್ರ ಮೋದಿ ಕೂಡ ಗ್ರೀನ್ ಸಿಗ್ನಲ್ ನೀಡಿದ್ದರು ಎಂದು ತಿಳಿದುಬಂದಿದೆ.
Comments are closed.