ಸುರತ್ ಘಡ: ಬಡತನ ವಿರುದ್ಧ ಸರ್ಜಿಕಲ್ ಸ್ಟ್ರೈಕ್ ನಡೆಸಲಾಗುವುದು ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ. ಬಡತನವನ್ನು ಹೇಗೆ ನಿರ್ಮೂಲನೆಗೊಳಿಸಬೇಕು ಎಂಬುದರ ಬಗ್ಗೆ ಕಳೆದ ಆರು ತಿಂಗಳಿನಿಂದ ಕಾಂಗ್ರೆಸ್ ಪಕ್ಷ ಕಾರ್ಯನಿರ್ವಹಿಸುತ್ತಿರುವುದಾಗಿ ಅವರು ಹೇಳಿದ್ದಾರೆ.
ಕಾಂಗ್ರೆಸ್ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ನರೇಂದ್ರ ಮೋದಿ ಅವಲ ಆಳ್ವಿಕೆಯಲ್ಲಿ ಕೇವಲ ಶ್ರೀಮಂತರ ಅಭಿವೃದ್ದಿಯಾಗುತ್ತಿದ್ದಾರೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಶೇ, 20 ರಷ್ಟು ಬಡವರಿಗೆ ಕನಿಷ್ಠ ಆದಾಯ ಖಾತ್ರಿ ಯೋಜನೆ ಜಾರಿಗೊಳಿಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.
ಬಡತನ ಮುಕ್ತ ರಾಷ್ಟ್ರವನ್ನಾಗಿಸಲಾಗುವುದು, ಬೇರೆ ಯಾವುದೇ ರಾಷ್ಟ್ರದಲ್ಲೂ ಆಗದ ರೀತಿಯಲ್ಲಿ ಬಡತನ ನಿರ್ಮೂಲನೆ ಮಾಡುವ ಮೂಲಕ ಇತಿಹಾಸ ಸೃಷ್ಟಿಸಲಾಗುವುದು, ದೇಶದಲ್ಲಿ ಒಬ್ಬ ಬಡ ವ್ಯಕ್ತಿಯೂ ಇಲ್ಲದಂತೆ ಮಾಡಲಾಗುವುದು. ಇದೊಂದು ಧಮಕಾ ಆಗಲಿದೆ ಎಂದರು.
ಮೋದಿ ಕಪ್ಪು ಹಣ ಹೊಂದಿರುವವರಿಗೆ ನೆರವು ನೀಡುತ್ತಿದ್ದಾರೆ ಎಂದು ಆರೋಪಿಸಿದ ರಾಹುಲ್, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ನಿರುದ್ಯೋಗ ಪ್ರಮಾಣವನ್ನು ಕಡಿಮೆ ಮಾಡಲಾಗುವುದು, ಮೋದಿ ಶ್ರೀಮಂತರಿಗೆ ಹಣ ನೀಡುತ್ತಿದ್ದರೆ, ಕಾಂಗ್ರೆಸ್ ಬಡವರಿಗೆ ಹಣ ನೀಡಲಿದೆ ಎಂದು ಹೇಳಿದರು.
ಯುಪಿಎ ಅವಧಿಯಲ್ಲಿ 14 ಕೋಟಿ ಜನರನ್ನು ಬಡತನದಿಂದ ಮೇಲಕ್ಕೆತ್ತಲಾಗಿತ್ತು. ಆದರೆ, ಇನ್ನೂ 25 ಕೋಟಿ ಜನರು ಬಡತನದಲ್ಲಿಯೇ ಬದುಕು ಸಾಗಿಸುತ್ತಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ ಎಂದು ರಾಹುಲ್ ಗಾಂಧಿ ಆಕ್ರೋಶ ವ್ಯಕ್ತಪಡಿಸಿದರು.
Comments are closed.