ನವದೆಹಲಿ: ಕಳೆದ ಬಾರಿಯ ಲೋಕಸಭೆ ಚುನಾವಣೆಯಲ್ಲಿ ವಾರಾಣಸಿಯಲ್ಲಿ ನರೇಂದ್ರ ಮೋದಿ ವಿರುದ್ಧ ಅರವಿಂದ್ ಕೇಜ್ರಿವಾಲ್ ನಿಂತು ಇಡೀ ದೇಶದ ಗಮನ ಸೆಳೆದಿದ್ದರ. ಈ ಬಾರಿ ಅದೇ ಕ್ಷೇತ್ರ ಮತ್ತೊಂದು ಬಿಗ್ ಫೈಟ್ ಕಾಣುವ ನಿರೀಕ್ಷೆಇದೆ. ಮೋದಿ ವರ್ಸಸ್ ಪ್ರಿಯಾಂಕಾ ಪೈಪೋಟಿ ನಡೆಯುವ ಸಾಧ್ಯತೆ ಇದೆ. ಕಾಂಗ್ರೆಸ್ ಪಕ್ಷದ ಹೊಸ ಸ್ಟಾರ್ ಪ್ರಿಯಾಂಕಾ ಗಾಂಧಿ ಅವರು ವಾರಾಣಸಿಯಲ್ಲಿ ಮೋದಿ ವಿರುದ್ಧ ಸ್ಪರ್ಧಿಸುವ ಇಚ್ಛೆ ವ್ಯಕ್ತಪಡಿಸಿದ್ದಾರೆ.
ಉತ್ತರ ಪ್ರದೇಶದ ರಾಯ್ ಬರೇಲಿ ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರೊಂದಿಗೆ ಮಾತನಾಡುವ ವೇಳೆ ಪ್ರಿಯಾಂಕಾ ಗಾಂಧಿ ಇಂಥದ್ದೊಂದು ಆಸೆ ವ್ಯಕ್ತಪಡಿಸಿದರು. ಸೋನಿಯಾ ಗಾಂಧಿ ಪ್ರತಿನಿಧಿಸುವ ರಾಯ್ ಬರೇಲಿ ಕ್ಷೇತ್ರದ ಮತದಾರರು ಇದೇ ಕ್ಷೇತ್ರದಿಂದ ಸ್ಪರ್ಧಿಸುವಂತೆ ಪ್ರಿಯಾಂಕಾ ಗಾಂಧಿ ಅವರನ್ನು ಒತ್ತಾಯಿಸಿದಾಗ ಅವರ ಬಾಯಿಂದ ವಾರಾಣಸಿಯಲ್ಲಿ ನಿಲ್ಲುವ ಬಯಕೆ ವ್ಯಕ್ತವಾಯಿತು. “ವಾರಾಣಸಿಯಲ್ಲಿ ಯಾಕಾಗಬಾರದು?” ಎಂದು ರಾಯ್ ಬರೇಲಿಯ ಕಾಂಗ್ರೆಸ್ ಕಾರ್ಯಕರ್ತರನ್ನು ಪ್ರಿಯಾಂಕಾ ಕೇಳಿದರು.
ಪ್ರಿಯಾಂಕಾ ಗಾಂಧಿ ಈ ವರ್ಷವಷ್ಟೇ ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗುವ ಮೂಲಕ ಸಕ್ರಿಯ ರಾಜಕಾರಣಕ್ಕೆ ಧುಮುಕಿದ್ದಾರೆ. ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ಗೆ ಅವರೇ ಸ್ಟಾರ್ ಕೆಂಪೇನರ್ ಆಗಿದ್ದಾರೆ. ತಮ್ಮ ತಾಯಿಯ ರಾಯ್ ಬರೇಲಿ ಕ್ಷೇತ್ರವನ್ನಂತೂ ಅವರು ಇಂಚಿಂಚೂ ಸುತ್ತಿ ಕಾರ್ಯಕರ್ತರಿಗೆ ಪುಷ್ಟಿ ನೀಡುವ ಕೆಲಸ ಮಾಡುತ್ತಿದ್ದಾರೆ. ಆದರೆ, ಅವರು ಚುನಾವಣೆಯಲ್ಲಿ ಸ್ಪರ್ಧಿಸುವ ಬಗ್ಗೆ ಯಾವ ಸುದ್ದಿಯೂ ಇರಲಿಲ್ಲ. ನಿನ್ನೆಯಷ್ಟೇ ಪ್ರಿಯಾಂಕಾ ಅವರು ಪಕ್ಷ ಬಯಸಿದರೆ ಚುನಾವಣೆಯ ಅಖಾಡಕ್ಕೆ ಇಳಿಯುವುದಾಗಿ ತಿಳಿಸಿದ್ದರು. ರಾಯ್ ಬರೇಲಿಯಲ್ಲೇ ಅವರು ಚುನಾವಣೆಗೆ ನಿಲ್ಲಬಹುದೆಂಬ ವದಂತಿಗಳಿದ್ದವು. ಈಗ ಅವರು ವಾರಾಣಸಿಯಲ್ಲಿ ಸ್ಪರ್ಧಿಸುವ ಇಚ್ಛೆ ತೋರ್ಪಡಿಸಿದ್ದಾರೆ.
ವಾರಾಣಸಿಯಲ್ಲಿ ನರೇಂದ್ರ ಮೋದಿ ವಿರುದ್ಧ ಎಸ್ಪಿ-ಬಿಎಸ್ಪಿ ಮೈತ್ರಿ ಅಭ್ಯರ್ಥಿಯನ್ನು ಇನ್ನೂ ಕಣಕ್ಕಿಳಿಸಬೇಕಿದೆ. ಮೋದಿ ವಿರುದ್ಧ ಸೆಟೆದು ನಿಲ್ಲಲು ದಲಿತ ಮುಖಂಡ ಚಂದ್ರಶೇಖರ್ ರಾವಣ ಕೂಡ ತಯಾರಾಗಿದ್ಧಾರೆ. ಎಸ್ಪಿ-ಬಿಎಸ್ಪಿಯಿಂದ ಮೋದಿ ವಿರುದ್ಧ ಸಮರ್ಥ ಅಭ್ಯರ್ಥಿ ಕಣಕ್ಕಿಳಿಯದಿದ್ದಾರೆ ತಾನೇ ಖುದ್ದಾಗಿ ವಾರಾಣಸಿಯಲ್ಲಿ ಸ್ಪರ್ಧಿಸುವುದಾಗಿ ರಾವಣ ಘೋಷಿಸಿದ್ದಾರೆ. ಒಂದು ವೇಳೆ, ಪ್ರಿಯಾಂಕಾ ಗಾಂಧಿ ಅವರೇ ವಾರಾಣಸಿಯಲ್ಲಿ ಸ್ಪರ್ಧಿಸಿದರೆ ಎಸ್ಪಿ-ಬಿಎಸ್ಪಿಯಿಂದ ಅಭ್ಯರ್ಥಿ ಹಾಕುವುದು ಅನುಮಾನ. ಹಾಗೆಯೇ ರಾವಣನ ಬೆಂಬಲವೂ ಕಾಂಗ್ರೆಸ್ಗೆ ಸಿಗುವ ನಿರೀಕ್ಷೆ ಇದೆ. ಈ ಬೆಳವಣಿಗೆಯಾದರೆ ವಾರಾಣಸಿಯಲ್ಲಿ ಮೋದಿ ಗೆಲುವಿಗೆ ದೊಡ್ಡ ಕಂಟಕ ನಿರ್ಮಾಣವಾಗುವುದಂತೂ ಹೌದು.
Comments are closed.