ಇಂದೋರ್: ನಿರುದ್ಯೋಗಿಗಳಿಗೆ ಕನಿಷ್ಟ ಆದಾಯ ಯೋಜನೆಯಡಿ ತಿಂಗಳಿಗೆ 6,000 ರೂಪಾಯಿ ನೀಡುವ ರಾಹುಲ್ ಗಾಂಧಿಯ ಎನ್ ವೈಎ ವೈ ಯೋಜನೆ ಬಗ್ಗೆ ಚರ್ಚೆ ನಡೆಯುತ್ತಿರುವಾಗಲೇ ಈ ಯೋಜನೆಯನ್ನು ನೆಚ್ಚಿಕೊಂಡು ನಿರುದ್ಯೋಗಿ ವ್ಯಕ್ತಿಯೊಬ್ಬರು ಕೋರ್ಟ್ ಗೆ ಹೇಳಿಕೆ ನೀಡಿದ್ದಾರೆ.
ಪತ್ನಿಗೆ ಪ್ರತಿ ತಿಂಗಳು 3,000 ರೂಪಾಯಿ ಜೀವನ ನಿರ್ವಹಣೆಗಾಗಿ ನೀಡಬೇಕು ಹಾಗೂ ಮಗಳಿಗೆ 1,500 ರೂಪಾಯಿ ನೀಡಬೇಕೆಂದು ಆನಂದ್ ಶರ್ಮಾ ಎಂಬುವವರಿಗೆ ಇಂದೋರ್ ನ ಕೌಟುಂಬಿಕ ನ್ಯಾಯಾಲಯ ಆದೇಶ ನೀಡಿತ್ತು.
ಕೋರ್ಟ್ ಆದೇಶದ ಬೆನ್ನಲ್ಲೇ ಅರ್ಜಿ ಸಲ್ಲಿಸಿರುವ ಆನಂದ್ ಶರ್ಮಾ, ತಾನು ನಿರುದ್ಯೋಗಿಯಾಗಿರುವ ಕಾರಣ ಕೋರ್ಟ್ ಆದೇಶವನ್ನು ಸಧ್ಯಕ್ಕೆ ಪಾಲನೆ ಮಾಡಲು ಆಗುವುದಿಲ್ಲ. ಆದರೆ ಕೋರ್ಟ್ ಆದೇಶವನ್ನು ಪಾಲನೆ ಮಾಡುವ ಇಚ್ಛೆ ಇದ್ದು, ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಜಾರಿಯಾಗುವ ರಾಹುಲ್ ಗಾಂಧಿ ಭರವಸೆಯ ಯೋಜನೆಯಿಂದ ಬಂದ ಹಣದಿಂದ ಪತ್ನಿ ಹಾಗೂ ಪುತ್ರಿಗೆ ಜೀವನಾಂಶ ನೀಡುವುದಾಗಿ ಕೋರ್ಟ್ ಗೆ ತಿಳಿಸಿದ್ದಾರೆ.
ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ, ನಿರುದ್ಯೋಗಿಗಳಿಗೆ ಕನಿಷ್ಟ ಆದಾಯ ನೀಡುವ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರ ಮಹತ್ವಾಕಾಂಕ್ಷೆಯ ಎನ್ ವೈಎ ವೈ ಯೋಜನೆ ಜಾರಿಗೆ ಬರಲಿದೆ. ಇದರಿಂದ ಮಾಸಿಕ 6,000 ರೂಪಾಯಿ ಹಣ ಸಿಗಲಿದ್ದು, ಈ ಹಣದಿಂದ ಪತ್ನಿ ಹಾಗೂ ಪುತ್ರಿಗೆ ಕೋರ್ಟ್ ಸೂಚಿಸಿದಷ್ಟು ಜೀವನ ನಿರ್ವಹಣೆಗಾಗಿ ಹಣ ನೀಡುವುದಾಗಿ ಆನಂದ್ ಶರ್ಮಾ ಹೇಳಿದ್ದಾರೆ. ತನ್ನ ಖಾತೆಯಿಂದ ಈ ಹಣವನ್ನು ಪತ್ನಿಯ ಖಾತೆಗೆ ನೇರ ವರ್ಗಾವಣೆ ಮಾಡುವುದಕ್ಕೂ ತಾನು ಬಯಸುತ್ತೇನೆ ಎಂದು ಶರ್ಮಾ ತಿಳಿಸಿದ್ದಾರೆ. ಶರ್ಮಾ ಸಲ್ಲಿಸಿರುವ ಅರ್ಜಿಯನ್ನು ಕೋರ್ಟ್ ಮಾನ್ಯ ಮಾಡಿದೆ. ಆನಂದ್-ದೀಪ್ ಮಾಲಾ 2006 ರಲ್ಲಿ ವಿವಾಹವಾಗಿದ್ದರು. ದೀಪ್ ಮಾಲಾ ವಿಚ್ಛೇದನ ಕೋರಿ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ವಿಚ್ಛೇದನ ಪಡೆಯುತ್ತಿರುವ ಹಿನ್ನೆಲೆಯಲ್ಲಿ ಜೀವನಾಂಶ ನೀಡುವಂತೆ ಕೋರ್ಟ್ ಆನಂದ್ ಶರ್ಮಾಗೆ ಸೂಚಿಸಿತ್ತು.
Comments are closed.