ಪಾಟ್ನಾ: ಆರ್‌ಜೆಡಿ ಮುಖಂಡ ಲಾಲೂ ಪ್ರಸಾದ್ ಅವರ ಮಹಾಘಟಬಂಧನ್ ಕನಸಿಗೆ ದೊಡ್ಡ ಮಗನೇ ಮುಳ್ಳಾಗಿದ್ದಾನೆ. ಲಾಲೂ ಜೈಲಿನಲ್ಲಿರುವ ಹೊತ್ತಿನಲ್ಲಿ ಇಬ್ಬರು ಮಕ್ಕಳು ಕಿತ್ತಾಡಿಕೊಂಡಿದ್ದು ಪಕ್ಷ ಇಬ್ಭಾಗವಾಗಿದೆ.
ತಮ್ಮ ತೇಜಸ್ವಿಯಾದವ್ ವಿರುದ್ಧ ಮುನಿಸಿಕೊಂಡಿರುವ ಲಾಲು ಹಿರಿಯ ಪುತ್ರ ತೇಜ್ ಪ್ರತಾಪ್ ಯಾದವ್, ಆರ್‌ಜೆಡಿಯಿಂದ ಹೊರಬಂದು ‘ಲಾಲು ರಾಬ್ಡಿ ಮೋರ್ಚಾ’ ಎಂಬ ಹೊಸ ಪಕ್ಷವನ್ನು ಕಟ್ಟಿದ್ದಾರೆ.
ಕೆಲವು ದಿನಗಳ ಹಿಂದಷ್ಟೇ ತೇಜ್‍ಪ್ರತಾಪ್ ಯಾದವ್ ಪಕ್ಷದ ಯುವ ಘಟಕದ ಸಂಚಾಲಕ ಹುದ್ದೆ ತೊರೆದಿದ್ದರು. ತೇಜ್ ಪ್ರತಾಪ್ ತನಗೆ ಹೆಣ್ಣುಕೊಟ್ಟ ಮಾವನ ವಿರುದ್ಧವೇ ಸ್ಪರ್ಧಿಸುವ ಸಾಧ್ಯತೆಯಿದೆ. ತೇಜ್ ಅವರ ಮಾವ ಚಂದ್ರಿಕ ರಾಯ್ ಸರಣ್ ಕ್ಷೇತ್ರದಿಂದ ಆರ್‌ಜೆಡಿ ಅಭ್ಯರ್ಥಿಯಾಗಿದ್ದಾರೆ.
ಆರ್‌ಜೆಡಿಯಲ್ಲಿ ತೇಜಸ್ವಿಯಾದವ್‍ಗೆ ಹೆಚ್ಚು ಮನ್ನಣೆ ಸಿಗುತಿತ್ತು. ಲಾಲೂ ಪ್ರಸಾದ್ ಯಾದವ್ ಅವರು ಸಹ ತೇಜಸ್ವಿ ಪರ ಹೆಚ್ಚು ಒಲವು ತೋರಿಸುತ್ತಾ ಬಂದಿದ್ದರು. ಈ ವಿಚಾರಕ್ಕೆ ಸಂಬಂಧಿಸಿದಂತೆ ತೇಜ್ ಪ್ರತಾಪ್ ಯಾದವ್ ಅಸಮಾಧಾನಗೊಂಡಿದ್ದರು. ಎಲ್ಲರ ಯೋಗ್ಯತೆ ಏನು ಎನ್ನುವುದು ನನಗೆ ಗೊತ್ತಿದೆ. ನಾನು ನಿಷ್ಕಪಟ ವ್ಯಕ್ತಿ ಎಂದು ಟ್ವೀಟ್ ಮಾಡಿ ತನ್ನ ರಾಜೀನಾಮೆ ನಿರ್ಧಾರವನ್ನು ತಿಳಿಸಿದ್ದರು.
ಬಿಜೆಪಿ-ಜೆಡಿಯು ಮೈತ್ರಿಯನ್ನು ಸೋಲಿಸಲು 40 ಸ್ಥಾನಗಳು ಇರುವ ಬಿಹಾರದಲ್ಲಿ ಕಾಂಗ್ರೆಸ್, ಆರ್‌ಜೆಡಿ ಜೊತೆ ಮೈತ್ರಿ ಮಾಡಿಕೊಂಡಿದೆ. ಆರ್‌ಜೆಡಿ 20 ಸ್ಥಾನಗಳಲ್ಲಿ ಸ್ಪರ್ಧೆ ಮಾಡಿದರೆ, ಕಾಂಗ್ರೆಸ್ 9 ಸ್ಥಾನಗಳಲ್ಲಿ ಸ್ಪರ್ಧೆ ಮಾಡಲಿದೆ. ರಾಷ್ಟ್ರೀಯ ಲೋಕಾ ಸಮತಾ ಪಕ್ಷ 5 ಸ್ಥಾನ, ಜೀತನ್ ಮಾಂಜಿ ಅವರ ಹಿಂದೂಸ್ಥಾನ ಅವಾಮಿ ಮೋರ್ಚಾ, ವಿಕಾಸಿನಿ ಪಕ್ಷ ತಲಾ ಮೂರು ಕ್ಷೇತ್ರಗಳಲ್ಲಿ ಸ್ಪರ್ಧಿಸಲಿವೆ.
ಬಿಜೆಪಿ ಮತ್ತು ಜೆಡಿಯು ತಲಾ 17 ಕ್ಷೇತ್ರಗಳಲ್ಲಿ ಸ್ಪರ್ಧಿಸಿದರೆ, ಲೋಕ ಜನಶಕ್ತಿ ಪಕ್ಷ ಉಳಿದ 6 ಕ್ಷೇತ್ರಗಳಲ್ಲಿ ಸ್ಪರ್ಧಿಸಲಿದೆ.
Comments are closed.