ರಾಷ್ಟ್ರೀಯ

ಕೇರಳದ ವಯನಾಡು ಲೋಕಸಭೆ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದ ರಾಹುಲ್‌!

Pinterest LinkedIn Tumblr


ಕಲ್ಪೆಟ್ಟಾ: ನಿರೀಕ್ಷೆಯಂತೆ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಕೇರಳದ ವಯನಾಡು ಲೋಕಸಭೆ ಕ್ಷೇತ್ರದಿಂದ ಆಯ್ಕೆ ಬಯಸಿ ಗುರುವಾರ ನಾಮಪತ್ರ ಸಲ್ಲಿಸಿದ್ದಾರೆ.

ಸಹೋದರಿ ಪ್ರಿಯಾಂಕ ಗಾಂಧಿ ಮತ್ತು ಕಾಂಗ್ರೆಸ್‌ನ ಹಿರಿಯ ಮುಖಂಡರ ಜತೆಗೆ ಜಿಲ್ಲಾ ಕಚೇರಿಯಲ್ಲಿ ಜಿಲ್ಲಾಧಿಕಾರಿ ಎಆರ್‌ ಅಜಯ್‌ ಕುಮಾರ್‌ ಅವರಿಗೆ ರಾಹುಲ್‌ ಗಾಂಧಿ ಉಮೇದುವಾರಿಕೆ ಸಲ್ಲಿಸಿದರು. ಕೆಸಿ ವೇಣುಗೋಪಾಲ್‌ ಮತ್ತು ಮುಖುಲ್‌ ವಾಸ್ನಿಕ್‌ ಜತೆಗಿದ್ದರು.

ಕಾಂಗ್ರೆಸ್‌ ಅಧ್ಯಕ್ಷ ಸೇರಿದಂತೆ ಪ್ರಮುಖ ನಾಯಕರು ಆಗಮನದ ಹಿನ್ನೆಲೆ ಜಿಲ್ಲಾ ಕಚೇರಿ ಸುತ್ತ ಭಾರಿ ಭದ್ರತೆ ನೀಡಲಾಗಿತ್ತು. ರಾಹುಲ್‌ ಗಾಂಧಿ, ಪ್ರಿಯಾಂಕ ಗಾಂಧಿ ಮತ್ತಿತರ ನಾಯಕರು ಹೆಲಿಕಾಪ್ಟರ್‌ ಮೂಲಕ ಆಗಮಿಸಿ, ಸ್ಥಳೀಯ ಶಾಲಾ ಮೈದಾನದಲ್ಲಿ ಇಳಿದರು.

ಸಾವಿರಾರು ಸಂಖ್ಯೆಯಲ್ಲಿ ನೆರೆದಿದ್ದ ಕಾಂಗ್ರೆಸ್‌ ಕಾರ್ಯಕರ್ತರು ಮತ್ತು ಬೆಂಬಲಿಗರು ರಾಹುಲ್‌ ಗಾಂಧಿ ಪರ ಘೋಷಣೆಗಳನ್ನು ಕೂಗಿದರು. ಬಿಸಿಲಿನ ಝಳವನ್ನು ಲೆಕ್ಕಿಸದೆ ಭಾರಿ ಸಂಖ್ಯೆಯಲ್ಲಿ ಮಹಿಳೆಯರು ಮತ್ತು ಯುವ ಜನತೆ ಆಗಮಿಸಿತ್ತು.

ಉಮೇದುವಾರಿಕೆ ಸಲ್ಲಿಕೆ ಪ್ರಕ್ರಿಯೆಗಳು ಅಂತ್ಯಗೊಂಡ ನಂತರ ರಾಹುಲ್‌ ಗಾಂಧಿ ಕ್ಷೇತ್ರದಲ್ಲಿ ರೋಡ್‌ ಶೋ ನಡೆಸಲಿದ್ದಾರೆ.

Comments are closed.