ನವದೆಹಲಿ: ಗೂಗಲ್ ನ ವಿವಿಧ ಪ್ಲಾಟ್ ಫಾರ್ಮ್ ಗಳಲ್ಲಿ ಫೆಬ್ರವರಿ 19 ರಿಂದ ಪ್ರಕಟವಾದ 831 ಚುನಾವಣೆ ಸಂಬಂಧಿತ ಜಾಹಿರಾತುಗಳಿಗೆ ರಾಜಕೀಯ ಪಕ್ಷಗಳು ಬರೋಬ್ಬರಿ 37 ಕೋಟಿ ರೂ.ಗಳನ್ನು ಖರ್ಚು ಮಾಡಿದೆ ಎಂದು ಗುರುವಾರ ಬಿಡುಗಡೆಯಾದ ಇಂಡಿಯನ್ ಟ್ರಾನ್ಸ್’ಪರೆನ್ಸಿ ರಿಪೋರ್ಟ್ ತಿಳಿಸಿದೆ.
ಇದರಲ್ಲಿ ಭಾರತೀಯ ಜನತಾ ಪಕ್ಷವು ಗೂಗಲ್ ನಲ್ಲಿ ಅತಿ ಹೆಚ್ಚು ಜಾಹಿರಾತುಗಳನ್ನು ನೀಡಿದ ರಾಜಕೀಯ ಪಕ್ಷವಾಗಿ ಹೊರಹೊಮ್ಮಿದ್ದು, 554 ಜಾಹಿರಾತುಗಳಿಗೆ 1.21 ಕೋಟಿ ರೂ. ವೆಚ್ಚ ಮಾಡಿದೆ. ಈ ಮೂಲಕ ಗೂಗಲ್’ನಲ್ಲಿ ಪ್ರಕಟವಾದ ಎಲ್ಲಾ ಜಾಹೀರಾತುಗಳ ಶೇ.32ರಷ್ಟು ವೆಚ್ಚವನ್ನು ಬಿಜೆಪಿ ಮಾಡಿದೆ.
ವಿರೋಧ ಪಕ್ಷವಾದ ಕಾಂಗ್ರೆಸ್ 14 ಜಾಹೀರಾತುಗಳಿಗೆ 54,100 ರೂ.ಗಳನ್ನೂ ಖರ್ಚು ಮಾಡಿ 6ನೇ ಸ್ಥಾನದಲ್ಲಿದ್ದರೆ, ಜಗನ್ ರೆಡ್ಡಿ ನೇತೃತ್ವದ ವೈಎಸ್ಆರ್ ಕಾಂಗ್ರೆಸ್ ಪಕ್ಷ 107 ಜಾಹಿರಾತುಗಳಿಗೆ 1.04 ಕೋಟಿ ರೂ. ವೆಚ್ಚ ಮಾಡಿ ಎರಡನೇ ಸ್ಥಾನ ಪಡೆದಿದೆ. ಅಲ್ಲದೆ, ವೈಎಸ್ಆರ್ ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರಕ್ಕೆ ಜಾಹಿರಾತುದಾರ ಪಮ್ಮಿ ಸಾಯಿ ಚರಣ್ ರೆಡ್ಡಿ 43 ಜಾಹಿರಾತುಗಳಿಗೆ 26,400 ರೂ.ಗಳನ್ನೂ ಖರ್ಚು ಮಾಡಿ 7ನೇ ಸ್ಥಾನ ಪಡೆದಿದ್ದಾರೆ.
ತೆಲುಗು ದೇಶಂ ಪಕ್ಷ ಹಾಗೂ ಮುಖ್ಯ ಮಂತ್ರಿ ಚಂದ್ತಬಾಬು ನಾಯ್ಡು ಪರ ಜಾಹಿರಾತು ನೀಡಿದ ಪ್ರಮಾನ್ಯ ಸ್ಟ್ರಾಟಜಿ ಕನ್ಸಲ್ಟಿಂಗ್ ಪ್ರೈವೇಟ್ ಲಿಮಿಟೆಡ್ ಮತ್ತು ಡಿಜಿಟಲ್ ಕನ್ಸಲ್ಟಿಂಗ್ ಪ್ರೈವೇಟ್ ಲಿಮಿಟೆಡ್ ಕ್ರಮವಾಗಿ ಮೂರನೇ ಮತ್ತು ನಾಲ್ಕನೇ ಸ್ಥಾನ ಪಡೆದಿವೆ. ಪ್ರಮಾನ್ಯ ಸ್ಟ್ರಾಟಜಿ 53 ಜಾಹೀರಾತುಗಳಿಗೆ 85.25 ಲಕ್ಷ ರೂ., ಡಿಜಿಟಲ್ ಕನ್ಸಲ್ಟಿಂಗ್ 36 ಜಾಹೀರಾತುಗಳಿಗಾಗಿ 63.43 ಲಕ್ಷ ರೂ. ವೆಚ್ಚ ಮಾಡಿದೆ ಎಂದು ವರದಿ ತಿಳಿಸಿದೆ.
Comments are closed.