ಪಣಜಿ: ಎನ್‍ಡಿಎ ಸರ್ಕಾರ ಮತ್ತೆ ಅಧಿಕಾರಕ್ಕೆ ಬಂದರೆ ಪ್ರಧಾನಿ ನರೇಂದ್ರ ಮೋದಿ ಅವರ ಕೈ ಕೆಳಗೆ ಗೃಹ ಸಚಿವರಾಗಿ ಅಮಿತ್ ಶಾ ನೇಮಕವಾಗುತ್ತಾರೆ ಎಂದು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಭವಿಷ್ಯ ನುಡಿದಿದ್ದಾರೆ.
ದಕ್ಷಿಣ ಗೋವಾದ ಮರ್ಮಗೋವಾದಲ್ಲಿ ನಡೆದ ಆಮ್ ಆದ್ಮಿ ಪಕ್ಷದ (ಎಎಪಿ) ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ದೇಶದಲ್ಲಿ ಭಯಾನಕ ಆಟ ನಡೆಯುತ್ತಿದೆ. ನೀವು ಮತದಾನ ಮಾಡುವಾಗ ಈ ವಿಚಾರ ನಿಮಗೆ ತಿಳಿದಿರಲಿ. ಪ್ರಧಾನಿ ಮೋದಿ ಅಧಿಕಾರಕ್ಕೆ ಬಂದರೆ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಗೃಹ ಸಚಿವರಾಗುತ್ತಾರೆ ಅಂತ ಎಲ್ಲರೂ ಹೇಳುತ್ತಿದ್ದಾರೆ. ಒಂದು ವೇಳೆ ಅಮಿತ್ ಶಾ ಅವರು ಗೃಹ ಸಚಿವರಾದರೆ ದೇಶದಲ್ಲಿ ಏನೆಲ್ಲ ಆಗಬಹುದು ಎಂದು ನೀವೇ ಯೋಚನೆ ಮಾಡಿ ಎಂದು ಕಾರ್ಯಕರ್ತರಿಗೆ ಹೇಳಿದರು.
ಪಶ್ಚಿಮ ಬಂಗಾಳದ ರಾಯ್‍ಗಂಜ್‍ನಲ್ಲಿ ನಡೆದಿದ್ದ ಬಿಜೆಪಿ ಪ್ರಚಾರದ ವೇಳೆ ಮಾತನಾಡಿದ್ದ ಅಮಿತ್ ಶಾ ಅವರು, ಕೇಂದ್ರದಲ್ಲಿ ಮತ್ತೆ ಅಧಿಕಾರಕ್ಕೆ ಬಂದರೆ ದೇಶಾದ್ಯಂತ ರಾಷ್ಟ್ರೀಯ ಪೌರತ್ವ ನೋಂದಣಿ (ಎನ್ಆರ್ ಸಿ) ನಡೆಸಲಾಗುವುದು. ದೇಶದ ಒಳಗಡೆ ನುಸುಳಿರುವ ಪ್ರತಿಯೊಬ್ಬರನ್ನೂ ಹೊರಕ್ಕೆ ದಬ್ಬಲಾಗುವುದು. ಆದರೆ ಪಶ್ಚಿಮ ಬಂಗಾಳದಲ್ಲಿರುವ ವಲಸಿಗರು ಚಿಂತಿಸಬೇಕಿಲ್ಲ. ಬೌದ್ಧರು, ಹಿಂದೂಗಳು ಮತ್ತು ಸಿಖ್ಖರನ್ನು ಬಿಟ್ಟು ಉಳಿದೆಲ್ಲ ವಲಸಿಗರನ್ನು ದೇಶದಿಂದ ಹೊರಗೆ ಹಾಕಲಾಗುವುದು ಎಂದು ಹೇಳಿದ್ದಾರೆ. ದೇಶದಲ್ಲಿ ವಾಸಿಸುವ ಕ್ರಿಶ್ಚಿಯನ್, ಮುಸ್ಲಿಂ, ಪಾರ್ಸಿ, ಜೈನ್ ಧರ್ಮದವರು ಭಾರತದ ಒಳಗೆ ನುಸುಳಿ ಬಂದವರು ಎಂದು ಅಮಿತ್ ಶಾ ಭಾವಿಸಿದ್ದಾರೆ. ಇದು ಭಾರೀ ಅಪಾಯಕಾರಿ ಹೇಳಿಕೆಯಾಗಿದೆ ಎಂದು ತಿಳಿಸಿದರು.
ಗೋವಾದಲ್ಲಿ 15 ಲಕ್ಷ ಜನರು ಮತ್ತು ಸುಮಾರು ಶೇ.40 ರಷ್ಟು ಮಂದಿ ಅಲ್ಪಸಂಖ್ಯಾತರಾಗಿದ್ದಾರೆ. ಅಮಿತ್ ಶಾ ಅವರು ಗೋವಾದಲ್ಲಿ ಹೇಗೆ ರಾಷ್ಟ್ರೀಯ ಪೌರತ್ವ ನೋಂದಣಿ ಅಳವಡಿಸಿಕೊಳ್ಳುತ್ತಾರೆ? ಆರು ಲಕ್ಷ ಜನರು ಏನು ಮಾಡಬೇಕು? ನೋಂದಣಿ ಪ್ರಕ್ರಿಯೆಯಿಂದ ಅಮಿತ್ ಶಾ ಅವರು ಗಲಭೆ ಸೃಷ್ಟಿಸುತ್ತಾರಾ ಎಂದು ಅರವಿಂದ್ ಕೇಜ್ರಿವಾಲ್ ಪ್ರಶ್ನಿಸಿದರು.
ಅಮಿತ್ ಶಾ ಅವರು ಗುಜರಾತ್‍ನ ಗಾಂಧಿನಗರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ. ಬಿಜೆಪಿ ಭೀಷ್ಮ, ಹಿರಿಯ ಮುಖಂಡ ಎಲ್.ಕೆ.ಅಡ್ವಾಣಿ ಅವರಿಗೆ ಟಿಕೆಟ್ ನಿರಾಕರಿಸಲಾಗಿತ್ತು. ಹೀಗಾಗಿ ಎಲ್.ಕೆ.ಅಡ್ವಾಣಿ ಅವರ ಕ್ಷೇತ್ರದಿಂದ ಅಮಿತ್ ಶಾ ಕಣಕ್ಕೆ ಇಳಿದಿದ್ದಾರೆ. ಗಾಂಧಿನಗರ ಲೋಕಸಭಾ ಕ್ಷೇತ್ರವು ಬಿಜೆಪಿಯ ಭದ್ರಕೋಟೆಯಾಗಿದ್ದು, ಅಮಿತ್ ಶಾ ಜಯಗಳಿಸುವ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ.
Comments are closed.