ನವದೆಹಲಿ: ವಾರಾಣಸಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಸ್ಪರ್ಧಿಸಿದ್ದ ಮಾಜಿ ಬಿಎಸ್ಎಫ್ ಯೋದ ತೇಜ್ ಬಹದ್ದೂರ್ ಯಾದವ್ ಅವರ ನಾಮಪತ್ರ ತಿರಸ್ಕೃತಗೊಂಡಿದೆ. ತೇಜ್ ಬಹದ್ದೂರ್ ಅವರು ನಿನ್ನೆ ಸಮಾಜವಾದಿ ಪಕ್ಷದ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದರು. ಚುನಾವಣಾ ಆಯೋಗದ ಕ್ರಮವನ್ನು ಪ್ರಶ್ನಿಸಿ ತೇಜ್ ಬಹದ್ದೂರ್ ಅವರು ಸುಪ್ರೀಂ ಕೋರ್ಟ್ ಮೆಟ್ಟಿಲೇರಲು ನಿರ್ಧರಿಸಿದ್ದಾರೆ.
“ನನ್ನ ನಾಮಪತ್ರವನ್ನು ತಪ್ಪಾಗಿ ತಿರಸ್ಕರಿಸಿದ್ದಾರೆ. ನಿನ್ನೆ ಸಂಜೆ 6:15ಕ್ಕೆ ಸಾಕ್ಷ್ಯಕೊಡುವಂತೆ ಕೇಳಿದ್ದರು. ನಾವು ಅದನ್ನು ಒದಗಿಸಿದೆವು. ಆದರೂ ನಾಮಪತ್ರ ತಿರಸ್ಕಾರವಾಗಿದೆ. ನಾವು ಸುಪ್ರೀಂ ಕೋರ್ಟ್ನಲ್ಲಿ ಇದನ್ನು ಪ್ರಶ್ನಿಸುತ್ತೇವೆ” ಎಂದು ತೇಜ್ ಬಹದ್ದೂರ್ ಹೇಳಿದ್ಧಾರೆ. ಸಮಾಜವಾದಿ ಪಕ್ಷದ ವಕೀಲರೂ ಕೂಡ ಈ ನಿರ್ಧಾರವನ್ನು ಖಚಿತಪಡಿಸಿದ್ದಾರೆ.
“ಪ್ರಧಾನಿ ಮೋದಿ ಅವರಿಗೆ ನನ್ನ ಬಗ್ಗೆ ಭಯ ಇದೆ. ಹೀಗಾಗಿ ನನಗೆ ಅಡೆತಡೆಗಳನ್ನು ನಿರ್ಮಿಸುತ್ತಿದ್ಧಾರೆ. ನಾನು ನಾಮಪತ್ರ ಸಲ್ಲಿಸಿದ ದಿನದಿಂದಲೂ ಇದೇ ಪ್ರಯತ್ನಗಳು ನಡೆಯುತ್ತಿವೆ” ಎಂದು ತೇಜ್ ಬಹದ್ದೂರ್ ಹೇಳಿದ್ಧಾರೆ.
ಎರಡು ವರ್ಷದ ಹಿಂದೆ ಬಿಎಸ್ಎಫ್ನಲ್ಲಿ ಕಾನ್ಸ್ಟೆಬಲ್ ಆಗಿದ್ದ ತೇಜ್ ಬಹದ್ದೂರ್ ಯಾದವ್ ಅವರು ಗಡಿಕಾಯುವ ಯೋಧರ ದುಸ್ಥಿತಿಯ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಧ್ವನಿ ಎತ್ತಿ ಇಡೀ ದೇಶದ ಗಮನ ಸೆಳೆದಿದ್ದರು. ಅದಾದ ಬಳಿಕ ಅವರನ್ನು ಸೇವೆಯಿಂದಲೇ ವಜಾ ಮಾಡಲಾಯಿತು.
ಇದೀಗ ರಾಜಕೀಯವಾಗಿ ಹೋರಾಡಲು ನಿರ್ಧರಿಸಿದ ತೇಜ್ ಬಹದ್ದೂರ್ ಅವರು ವಾರಾಣಸಿಯಲ್ಲಿ ಮೋದಿ ವಿರುದ್ಧ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ಸಜ್ಜಾಗಿದ್ದರು. ಆದರೆ, ಸಮಾಜವಾದಿ ಪಕ್ಷವು ತಾನು ನಿಲ್ಲಿಸಿದ್ದ ಅಭ್ಯರ್ಥಿಯನ್ನು ವಾಪಸ್ ಪಡೆದು ತೇಜ್ ಬಹದ್ದೂರ್ಗೆ ಟಿಕೆಟ್ ಕೊಡುವ ಅಚ್ಚರಿಯ ನಿರ್ಧಾರ ಪ್ರಕಟಿಸಿತು. ನಾಮಪತ್ರ ಸಲ್ಲಿಕೆಯಾಗಿ ಪರಿಶೀಲನೆ ವೇಳೆ, ಗಡಿ ಭದ್ರತಾ ಪಡೆಯಿಂದ ನೋ ಅಬ್ಜೆಕ್ಷನ್ ಸರ್ಟಿಫಿಕೇಟ್ ತರುವಂತೆ ಚುನಾವಣಾ ಆಯೋಗವು ತೇಜ್ ಬಹದ್ದೂರ್ಗೆ ನೋಟೀಸ್ ನೀಡಿತ್ತು. ಎಸ್ಪಿ ಅಭ್ಯರ್ಥಿ ಆ ಪ್ರಮಾಣಪತ್ರವನ್ನು ಒದಗಿಸಿದರೆನ್ನಲಾಗಿದೆ. ಆದರೆ, ನಾಮಪತ್ರ ತಿರಸ್ಕಾರಕ್ಕೆ ಈ ಪ್ರಮಾಣಪತ್ರದ ದೋಷ ಕಾರಣವಾ ಎಂಬುದು ತಿಳಿದುಬಂದಿಲ್ಲ.
Comments are closed.