ರಾಷ್ಟ್ರೀಯ

ಫೋನಿ ಚಂಡಮಾರುತದ ಅಬ್ಬರಕ್ಕೆ ಒಡಿಶಾದಲ್ಲಿ ಸಾವನ್ನಪ್ಪಿದವರ ಸಂಖ್ಯೆ 12ಕ್ಕೆ ಏರಿಕೆ

Pinterest LinkedIn Tumblr

ಕೋಲ್ಕತಾ: ಫೋನಿ ಚಂಡಮಾರುತದ ಅಬ್ಬರಕ್ಕೆ ಒಡಿಶಾದಲ್ಲಿ ಸಾವನ್ನಪ್ಪಿದವರ ಸಂಖ್ಯೆ 12ಕ್ಕೆ ಏರಿಕೆಯಾಗಿದ್ದು, ಪ್ರಸ್ತುತ ಚಂಡಮಾರುತ ಪಶ್ಚಿಮ ಬಂಗಾಳವನ್ನು ದಾಟಿ ಬಾಂಗ್ಲಾದೇಶದತ್ತ ಮುಖಮಾಡಿದೆ.

ನಿನ್ನೆ ಬೆಳಗ್ಗೆ ಒಡಿಶಾದ ಪುರಿ ಕಡಲ ತೀರಕ್ಕೆ ಅಪ್ಪಳಿಸಿದ್ದ ಪೋನಿ ಚಂಡಮಾರುತ ಅಲ್ಲಿ ಭಾರಿ ಅವಾಂತರ ಸೃಷ್ಟಿ ಮಾಡಿದ್ದು, ಅಪಾರ ಪ್ರಮಾಣದ ಆಸ್ತಿಪಾಸ್ತಿ ನಷ್ಟ ಮಾಡಿದೆ. ಪುರಿಯಲ್ಲಿ ನೂರಾರು ಮರಗಳು ಹಾಗೂ ವಿದ್ಯುತ್ ಕಂಬಗಳು ಧರೆಗುರುಳಿದ್ದು, ಭಾರಿ ಮಳೆ ಮತ್ತು ಭೂಕುಸಿತದಿಂದಾಗಿ ಹಲವು ಮನೆಗಳು ಕುಸಿದಿವೆ. ಚಂಡಮಾರುತ ಮತ್ತು ಮಳೆ ಸಂಬಂಧಿತ ವಿವಿಧ ಅವಘಡಗಳಲ್ಲಿ ಸಾವನ್ನಪ್ಪಿದವರ ಸಂಖ್ಯೆ ಇದೀಗ 12ಕ್ಕೆ ಏರಿಕೆಯಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಇನ್ನು ಇಂದು ಬೆಳಗ್ಗೆ ಪಶ್ಚಿಮ ಬಂಗಾಳಕ್ಕೆ ಅಪ್ಪಳಿಸಿದ್ದ ಫೋನಿ ಚಂಡಮಾರುತ ತನ್ನ ವೇಗ ಕಳೆದುಕೊಂಡಿದ್ದು, ಪಶ್ಚಿಮ ಬಂಗಾಳ ಅಪಾಯದಿಂದ ಪಾರಾಗಿದೆ. ಆದರೂ ಪಶ್ಚಿಮ ಬಂಗಾಳದಲ್ಲಿ ಭಾರಿ ಮಳೆಯಾಗುತ್ತಿದೆ. ಪ್ರಸ್ತುತ ಪೋನಿ ಚಂಡ ಮಾರುತ ವೇಗ ಕಳೆದುಕೊಂಡಿದ್ದು ಪ್ರತೀ ಗಂಟೆಗೆ 90 ಕಿ,ಮೀ ವೇಗದೊಂದಿಗೆ ಬಾಂಗ್ಲಾದೇಶದತ್ತ ಸಾಗಿದೆ. ಆ ಮೂಲಕ ಬಾಂಗ್ಲಾದೇಶದಲ್ಲೂ ವ್ಯಾಪಕ ಮಳೆ ಆರಂಭವಾಗಿದೆ ಎಂದು ತಿಳಿದುಬಂದಿದೆ.

ಈ ಬಗ್ಗೆ ಮಾಹಿತಿ ನೀಡಿರುವ ಎನ್ ಡಿಆರ್ ಎಫ್ ಡಿಐಜಿ ಪ್ರದೀಪ್ ಕುಮಾರ್ ರಾಣಾ ಅವರು, ಪೋನಿ ಚಂಡಮಾರುತ ತನ್ನ ವೇಗ ಕಳೆದುಕೊಂಡಿದ್ದು, ಪಶ್ಚಿಮ ಬಂಗಾಳವನ್ನು ದಾಟಿ ಇದೀಗ ಬಾಂಗ್ಲಾದೇಶದತ್ತ ಸಾಗಿದೆ. ಪಶ್ಚಿಮ ಬಂಗಾಳದಲ್ಲಿ ಪರಿಸ್ಥಿತಿ ಹತೋಟಿಯಲ್ಲಿದೆ. ಇಲ್ಲಿ ಹೆಚ್ಚಿನ ಪ್ರಮಾಣದ ಹಾನಿಯಾಗಿಲ್ಲ. ಬಂಗಾಳದಲ್ಲಿ ಪ್ರಸ್ತುತ 9 ಎನ್ ಡಿಆರ್ ಎಫ್ ತಂಡ ಕಾರ್ಯಾಚರಣೆ ನಡೆಸುತ್ತಿದೆ ಎಂದು ಮಾಹಿತಿ ನೀಡಿದರು.

Comments are closed.