ನವದೆಹಲಿ: ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯ್ ಅವರು ಲೈಂಗಿಕ ಕಿರುಕುಳ ಆರೋಪದಿಂದ ಮುಕ್ತಗೊಂಡಿದ್ದಾರೆ. ಮಾಜಿ ಸುಪ್ರೀಂ ಕೋರ್ಟ್ ಸಿಬ್ಬಂದಿಯೊಬ್ಬರು ನ್ಯಾ| ಗೊಗೋಯ್ ಅವರಿಂದ ತಮಗೆ ಲೈಂಗಿಕ ಕಿರುಕುಳವಾಗಿತ್ತೆಂದು ಆರೋಪಿಸಿದ್ದರು. ನಂತರ ಈ ಆರೋಪದ ತನಿಖೆಗಾಗಿ ಮುಖ್ಯ ನ್ಯಾಯಮೂರ್ತಿಗಳು ಮೂವರು ಸದಸ್ಯರಿರುವ ಆಂತರಿಕ ತನಿಖಾ ಮಂಡಳಿ ರಚಿಸಿ ತನಿಖೆಗೆ ಆದೇಶಿಸಿದರು. ನ್ಯಾ| ಎಸ್.ಎ. ಬೋಬಡೆ ನೇತೃತ್ವದ ಈ ಮಂಡಳಿಯು ಇದೀಗ ನ್ಯಾ| ರಂಜನ್ ಗೊಗೋಯ್ ಅವರಿಗೆ ಕ್ಲೀನ್ ಚಿಟ್ಟ ಕೊಟ್ಟಿದ್ದು ತನ್ನ ವರದಿಯನ್ನು ಮುಖ್ಯನ್ಯಾಯಮೂರ್ತಿ ಹಾಗೂ ಮತ್ತೊಬ್ಬ ಹಿರಿಯ ನ್ಯಾಯಮೂರ್ತಿಗೆ ಸಲ್ಲಿಸಿದೆ. ಸಿಬ್ಬಂದಿ ಮಾಡಿರುವ ಆರೋಪದಲ್ಲಿ ಯಾವುದೇ ಹುರುಳಿಲ್ಲ ಎಂದು ಈ ಮಂಡಳಿಯು ಅಭಿಪ್ರಾಯಪಟ್ಟಿದೆ. ಆದರೆ, ಅದು ಸಲ್ಲಿಸಿದ ವರದಿಯನ್ನು ಬಹಿರಂಗಪಡಿಸಲು ಕೋರ್ಟ್ ನಿರಾಕರಿಸಿದೆ. ಈ ತನಿಖಾ ಮಂಡಳಿಯಲ್ಲಿ ನ್ಯಾ| ಎಸ್.ಎ. ಬೋಬ್ಡೆ ಅವರ ಜೊತೆ ನ್ಯಾ| ಇಂದಿರಾ ಬ್ಯಾನರ್ಜಿ ಹಾಗೂ ನ್ಯಾ| ಇಂದು ಮಲ್ಹೋತ್ರ ಅವರಿದ್ದರು.
ಮಹಿಳಾ ಸಿಬ್ಬಂದಿ ಮಾಡಿದ ಆರೋಪವೇನಿತ್ತು?
ಸಿಜೆಐ ರಂಜನ್ ಗೊಗೋಯ್ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದ ಮಹಿಳೆಯು ಈ ಹಿಂದೆ ಅವರ ಜೊತೆ ಕೆಲಸ ಮಾಡಿದವರಾಗಿದ್ದರು. ದೆಹಲಿಯಲ್ಲಿನ ಅವರ ನಿವಾಸ ಕಚೇರಿಯಲ್ಲಿ ಆ ಮಹಿಳೆ ಕೆಲಸ ಮಾಡುತ್ತಿದ್ದರು. ಆ ಸಂದರ್ಭದಲ್ಲಿ ತನ್ನ ಮೇಲೆ ಎರಡು ಬಾರಿ ಲೈಂಗಿಕ ಕಿರುಕುಳ ನಡೆಯಿತು. ಅದನ್ನು ನಿರಾಕರಿಸಿದ್ದಕ್ಕೆ ನನಗೆ ಕಿರುಕುಳ ಕೊಟ್ಟು ಕೆಲಸದಿಂದಲೇ ತೆಗೆದುಹಾಕಲಾಯಿತು ಎಂದು ಆ ಮಹಿಳೆ ತನ್ನ ದೂರಿನಲ್ಲಿ ತಿಳಿಸಿದ್ದರು.
ಆದರೆ, ತನಿಖೆಗೆ ಆಂತರಿಕ ಸಮಿತಿ ರಚಿಸಿದ್ದು ದೂರುದಾರೆಗೆ ಅಪಥ್ಯವೆನಿಸಿತ್ತು. ಮೂರು ಬಾರಿ ವಿಚಾರಣೆಯಲ್ಲಿ ಭಾಗಿಯಾಗಿ ನಂತರ ಹಿಂತೆಗೆದುಕೊಂಡಿದ್ದರು. ವಿಶಾಖಾ ಮಾರ್ಗದರ್ಶಿಸೂತ್ರಗಳನ್ನು ಅನುಸರಿಸುತ್ತಿಲ್ಲ. ಸಮಿತಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರಿಲ್ಲ. ಈ ಸಮಿತಿಯ ತನಿಖೆಯಿಂದ ತನಗೆ ನ್ಯಾಯ ಸಿಗುವುದಿಲ್ಲ ಎಂದು ಆ ಮಹಿಳೆಯು ಈ ವಿಚಾರಣೆಯಿಂದಲೇ ಹೊರಬೀಳಲು ನಿರ್ಧರಿಸಿದ್ದರು. ಅಲ್ಲದೇ, ತನಿಖೆಯ ವಿಚಾರಣೆಗೆ ತನ್ನ ವಕೀಲರನ್ನು ಕರೆದುಕೊಂಡು ಹೋಗಲು ಹಾಗೂ ವಿಚಾರಣೆ ವೇಳೆ ಯಾವುದೇ ಆಡಿಯೋ ಮತ್ತು ವೀಡಿಯೋ ರೆಕಾರ್ಡಿಂಗ್ ಮಾಡಲಿಲ್ಲ. ಮೊದಲ ಎರಡು ವಿಚಾರಣೆಯಲ್ಲಿ ತಾನು ನೀಡಿದ ಹೇಳಿಕೆಯ ಪ್ರತಿಗಳನ್ನೂ ಅವರು ನೀಡಲಿಲ್ಲ ಎಂದು ಆ ಮಹಿಳೆ ವಿಷಾದಿಸಿದ್ದರು.
ಇನ್ನು, ನ್ಯಾ| ರಂಜನ್ ಗೊಗೋಯ್ ಅವರು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿ ನೇಮಕವಾದ ಕೆಲವೇ ದಿನಗಳಲ್ಲಿ ಈ ದೂರು ಬಂದಿದ್ದು ಹಲವರ ಹುಬ್ಬೇರಿಸಿತ್ತು. ಆ ಮಹಿಳೆ ದುರುದ್ದೇಶಪೂರ್ವಕವಾಗಿ ಆರೋಪ ಮಾಡುತ್ತಿದ್ದಾರೆ. ದೇಶದ ನ್ಯಾಯಾಂಗ ವ್ಯವಸ್ಥೆಯನ್ನು ಹಾಳುಗೆಡವಲು ದೊಡ್ಡ ಪಿತೂರಿ ನಡೆಯುತ್ತಿದೆ ಎಂಬ ಆತಂಕಗಳು ಕೇಳಿಬಂದವು. ಈ ನಿಟ್ಟಿನಲ್ಲಿ ಕೋರ್ಟ್ನಲ್ಲಿ ಅರ್ಜಿಯೂ ಸಲ್ಲಿಕೆಯಾಗಿದೆ. ನ್ಯಾ| ರಂಜನ್ ಗೊಗೋಯ್ ವಿರುದ್ಧದ ಲೈಂಗಿಕ ಕಿರುಕುಳ ಆರೋಪ ಪ್ರಕರಣದ ವಿಚಾರಣೆ ಮುಗಿದ ನಂತರ ಸಂಚು ಪ್ರಕರಣದ ವಿಚಾರಣೆ ಕೈಗೆತ್ತಿಕೊಳ್ಳಲು ಸರ್ವೋಚ್ಚ ನ್ಯಾಯಾಲಯ ನಿರ್ಧರಿಸಿತ್ತು. ಅದರಂತೆ, ಇದೀಗ ಲೈಂಗಿಕ ಕಿರುಕುಳ ಪ್ರಕರಣದ ವಿಚಾರಣೆ ಮುಗಿದಿದ್ದು, ಸಂಚು ಪ್ರಕರಣದ ವಿಚಾರಣೆ ಬಗ್ಗೆ ಕೋರ್ಟ್ ಸದ್ಯದಲ್ಲೇ ನಿರ್ಧಾರ ಕೈಗೊಳ್ಳಲಿದೆ.
Comments are closed.