ರಾಷ್ಟ್ರೀಯ

ಅಂತರ್ಜಾತಿ ವಿವಾಹವಾಗಿದ್ದಕ್ಕೆ ಗರ್ಭಿಣಿಗೆ ಬೆಂಕಿಹಚ್ಚಿ ಹತ್ಯೆ; ಗಂಡನ ಸ್ಥಿತಿ ಗಂಭೀರ

Pinterest LinkedIn Tumblr

ಪುಣೆ: ಅಂತರ್ಜಾತಿ ವಿವಾಹವಾದರೆಂದು 2 ತಿಂಗಳ ಗರ್ಭಿಣಿ ಮಗಳು ಹಾಗೂ ಆಕೆಯ ಪತಿಗೆ ಅಪ್ಪ ಸೇರಿ ಕುಟುಂಬಸ್ಥರೇ ಬೆಂಕಿ ಹಚ್ಚಿದ ಆಘಾತಕಾರಿ ಘಟನೆಯೊಂದು ಪುಣೆಯ ಅಹಮ್ಮದ್ ನಗರ ಜಿಲ್ಲೆಯಲ್ಲಿ ಮೇ 1ರಂದು ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.

ಮೃತ ದುರ್ದೈವಿಯನ್ನು 19 ವರ್ಷದ ರುಕ್ಮಿಣಿ ಎಂದು ಗುರುತಿಸಲಾಗಿದ್ದು, ಬೆಂಕಿಯಿಟ್ಟ ಪರಿಣಾಮ ಈಕೆಯ ದೇಹ ಶೇ.70ರಷ್ಟು ಸುಟ್ಟು ಹೋಗಿತ್ತು. ಕೂಡಲೇ ಆಕೆಯನ್ನು ಜನರಲ್ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಕಳೆದ ಶನಿವಾರ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾಳೆ. ಈಕೆಯ ಪತಿ ಮಂಗೇಶ್ ರಣ್‍ಸಿಂಗ್ ದೇಹಕ್ಕೆ ಶೇ.50ರಷ್ಟು ಹಾನಿಯಾಗಿದ್ದು, ಅದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಸಾವು ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಅಹಮ್ಮದ್ ನಗರ ಪಟ್ಟಣದಿಂದ 55 ಕಿ.ಮೀ ದೂರದ ಪರ್ನಾರ್ ತಾಲೂಕಿನ ನಿಘೋಜಿ ಎಂಬ ಗ್ರಾಮದಲ್ಲಿ ಮೇ 1ರಂದು ಮಧ್ಯಾಹ್ನ ಬಳಿಕ ಈ ಘಟನೆ ನಡೆದಿದೆ. ಸದ್ಯ ದಂಪತಿ ಚಿಕಿತ್ಸೆ ಪಡೆಯುತ್ತಿರುವ ಸಂದರ್ಭದಲ್ಲಿ ನೀಡಿದ ಹೇಳಿಕೆ ಮೇರೆಗೆ ಪೊಲೀಸರು ತನಿಖೆ ಆರಂಭಿಸಿರುವುದಾಗಿ ಅಹಮ್ಮದ್ ನಗರ ಪೊಲೀಸರು ಹೇಳಿದ್ದಾರೆ.

ಘಟನೆ ಸಂಬಂಧಿಸಿದಂತೆ ಪೊಲೀಸರು ಈಗಾಗಲೇ ರುಕ್ಮಿಣಿ ಚಿಕ್ಕಪ್ಪನನ್ನು ಬಂಧಿಸಿದ್ದಾರೆ. ಮಗಳು ತೀರಿಕೊಂಡ ಸುದ್ದಿ ತಿಳಿಯುತ್ತಿದ್ದಂತೆಯೇ ತಂದೆ ರಾಮಭಾರ್ತಿ ಸ್ಥಳದಿಂದ ಕಾಲ್ಕಿತ್ತಿದ್ದಾನೆ. ಹೀಗಾಗಿ ಆತನ ಪತ್ತೆಗೆ ಸುರೇಂದ್ರ ಹಾಗೂ ಘನಶ್ಯಾಮ್ ಪೊಲೀಸ್ ತಂಡ ಬಲೆ ಬೀಸಿದೆ.

ಘಟನೆ ವಿವರ:
ರುಕ್ಮಿಣಿ ಮೂಲತಃ ಉತ್ತರಪ್ರದೇಶದವಾಗಿದ್ದು, ನಿಘೋಜಿಯಲ್ಲಿ ವಾಸವಾಗಿದ್ದರು. ಮಂಗೇಶ್ ಲಾಹೋರ್ ಸಮುದಾಯಕ್ಕೆ ಸೇರಿದರೆ, ರುಕ್ಮಿಣಿ ಪಾಸಿ ಸಮುದಾಯದವಳಾಗಿದ್ದಾರೆ. ಕಳೆದ ವರ್ಷದ ದೀಪಾವಳಿ ಸಮಯದಲ್ಲಿ ಇವರಿಬ್ಬರ ಮಧ್ಯೆ ಪ್ರೇಮಾಂಕುರವಾಗಿದೆ. ಈ ವಿಚಾರ ಇಬ್ಬರ ಕುಟುಂಬದವರಿಗೆ ತಿಳಿದು ಪ್ರೀತಿಗೆ ಭಾರೀ ವಿರೋಧ ವ್ಯಕ್ತವಾಗಿತ್ತು. ಈ ಮಧ್ಯೆಯೇ ಇಬ್ಬರು ಪುಣೆಯ ಅಲಂದಿಯಲ್ಲಿ ಮದುವೆಯಾದರು. ಈ ಕಾರ್ಯಕ್ರಮಕ್ಕೆ ಮಂಗೇಶ್ ಕುಟುಂಬಸ್ಥರೆಲ್ಲರೂ ಭಾಗವಹಿಸಿದ್ದರೆ, ರುಕ್ಮಿಣಿ ತಾಯಿ ಮಾತ್ರ ಬಂದಿದ್ದರು. ಇವರಿಬ್ಬರು ಮದುವೆಯಾದ ಬಳಿಕ ರುಕ್ಮಿಣಿ ಕುಟುಂಬದವರು ಜೀವ ಬೆದರಿಕೆ ಹಾಕಲು ಆರಂಭಿಸಿದ್ದಾರೆ ಎಂದು ಸಬ್ ಇನ್ಸ್ ಪೆಕ್ಟರ್ ವಿಜಯ್ ಕುಮಾರ್ ಬೋತ್ರೆ ವಿವರಿಸಿದರು.

ಮದುವೆಯ ಬಳಿಕ ಚೆನ್ನಾಗಿಯೇ ಇದ್ದ ದಂಪತಿ ಏಪ್ರಿಲ್ 30ರಂದು ಇಬ್ಬರ ಮಧ್ಯೆ ಕ್ಲುಲ್ಲಕ ವಿಚಾರವೊಂದಕ್ಕೆ ಜಗಳವಾಗಿದೆ. ಇದರಿಂದ ನೊಂದ ರುಕ್ಮಿಣಿ ಪತಿಯನ್ನು ಬಿಟ್ಟು ತಂದೆ ಮನೆಗೆ ಬಂದಿದ್ದರು. ಬಂದ ಮರುದಿನ ಅಂದರೆ ಮೇ 1 ರಂದು ರುಕ್ಮಿಣಿಗೆ ಕರೆ ಮಾಡಿದ ಮಂಗೇಶ್, ಮನೆಗೆ ಬರುವಂತೆ ಹೇಳಿದ್ದಾರೆ. ಅಲ್ಲದೆ ಪತ್ನಿಯನ್ನು ಕರೆದೊಯ್ಯಲು ಮಾವನ ಮನೆಗೆ ಬಂದಿದ್ದಾರೆ. ಈ ವೇಳೆ ರುಕ್ಮಿಣಿ ಕುಟುಂಬದವರು ಆಕೆಯನ್ನು ಕಳುಹಿಸಿಕೊಡಲು ಒಪ್ಪಲಿಲ್ಲ. ಇದರಿಂದ ಅಲ್ಲಿ ಮಂಗೇಶ್ ಹಾಗೂ ರುಕ್ಮಿಣಿ ಕುಟುಂಬಸ್ಥರ ಮಧ್ಯೆ ಮಾತಿಗೆ ಮಾತು ಬೆಳೆದಿದೆ. ಪರಿಣಾಮ ಮಧ್ಯಾಹ್ನ ಬಳಿಕ ಮಾತಿನ ಚಕಮಕಿ ತಾರಕಕ್ಕೇರಿ, ರುಕ್ಮಿಣಿಯ ಇಬ್ಬರು ಚಿಕ್ಕಪ್ಪಂದಿರು ಬಂದು ಇಬ್ಬರನ್ನೂ ರೂಮಿನಲ್ಲಿ ಕೂಡಿ ಹಾಕಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ. ಈ ವೇಳೆ ರುಕ್ಮಿಣಿ ತಂದೆ ಹೊರಗಡೆಯಿಂದ ಬಾಗಿಲು ಲಾಕ್ ಮಾಡಿದ್ದಾರೆ ಎಂದು ಪಿಎಸ್‍ಐ ಘಟನೆ ಬಗ್ಗೆ ವಿವರಣೆ ನೀಡಿದ್ದಾರೆ.

ಘಟನೆಯಿಂದ ನೋವು ತಾಳಲಾರದೇ ದಂಪತಿ ಕಿರುಚಿಕೊಳ್ಳುತ್ತಿರುವುದು ನೆರೆಮನೆಯವರ ಕಿವಿಗೆ ಬಿದ್ದಿದೆ. ಕೂಡಲೇ ಅವರು ಘಟನಾ ಸ್ಥಳಕ್ಕೆ ತೆರಳಿ ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಸದ್ಯ ರುಕ್ಮಿಣಿ ಸಾವನ್ನಪ್ಪಿದ್ದು, ಮಂಗೇಶ್ ಸಾವು-ಬದುಕಿನ ಮಧ್ಯೆ ಹೋರಾಡುತ್ತಿದ್ದಾರೆ ಎಂಬುದಾಗಿ ಅವರು ಮಾಹಿತಿ ನೀಡಿದ್ದಾರೆ.

Comments are closed.