ಈ ವ್ಯಕ್ತಿಗೆ ಬರೋಬರಿ 83 ವರ್ಷ ವಯಸ್ಸಾಗಿದ್ದರೂ, ಛಲ ಮಾತ್ರ ಇನ್ನೂ ಬಿಟ್ಟಿಲ್ಲ…! ಕಳೆದ 26 ವರ್ಷಗಳಿಂದ 23 ಬಾರಿ ದೇಶಾದ್ಯಂತ ಕಾಲ್ನಡಿಗೆಯಲ್ಲಿಯೇ ಸುತ್ತುತ್ತ ಇವರು ಮಾಡುತ್ತಿರುವ ಕಾರ್ಯ ಮಾತ್ರ ದೇಶಕ್ಕೆ ದೇಶವೇ ಮೆಚ್ಚುವಂಥದ್ದು.
ಅಷ್ಟಕ್ಕೂ ಈ ವ್ಯಕ್ತಿ ಯಾರು…? ಎಲ್ಲಿಯವರು…? ಯಾಕಾಗಿ ಬರಿಯ ಕಾಲಿನಲ್ಲಿ ದೇಶ ಪರ್ಯಟನೆ ಮಾಡುತ್ತಿದ್ದಾರೆ ? ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಮುಂದಿದೆ ನೋಡಿ…!
ಇವರು ಹರಿಯಾಣದ ಪಾಣಿಪತ್ ನಗರದ ಬಗೀಚಾ ಸಿಂಗ್. ವಯಸ್ಸು ಬರೋಬರಿ 83 . ಗುಟ್ಕಾ, ಮಧ್ಯಪಾನ ವಿರುದ್ಧ ದೇಶಾದ್ಯಂತ ಜನರಲ್ಲಿ ಜಾಗೃತಿ ಮೂಡಿಸುವುದೇ ಇವರ ಉದ್ದೇಶ. ಅದಕ್ಕಾಗಿಯೇ ಕಾಶ್ಮೀರದಿಂದ ಈಶಾನ್ಯ ರಾಜ್ಯಗಳು, ಅಲ್ಲಿಂದ ಕನ್ಯಾಕುಮಾರಿ-ಬೆಂಗಳೂರು-ಗೋವಾ ಮೂಲಕ ರಾಜಸ್ತಾನ, ಗುಜರಾತ, ದೆಹಲಿ ಮತ್ತೆ ಜಮ್ಮು-ಕಾಶ್ಮೀರ ಹೀಗೆ ಇವರ ಕಾಲುಗಳು ಹೆಜ್ಜೆಹಾಕುತ್ತಲೆ ಇವೆ. `ವಾಕಿಂಗ್ ಮಾಡಿ ಸುಸ್ತಾಗುವ ಜನರ ನಡುವೆ ಬಗೀಚಾ ಸಿಂಗ್ ಎನ್ನುವ ದೈತ್ಯ ‘ಛಲ ಬಿಡದ ವಿಕ್ರಮ’ನಂತೆ ನಡೆಯುತ್ತಲೇ ಇದ್ದಾರೆ.
ಇವರು ವಿಶ್ವ ಪ್ರಸಿದ್ಧಿಯನ್ನು ಪಡೆದವರಲ್ಲ, ಆದರೆ ತಮ್ಮ ಗುರಿ ಸಾಧನೆಯ ಕಾರ್ಯವನ್ನು ಮೌನವಾಗಿ ನಿರ್ವಹಿಸಿ ದೇಶದ ಉನ್ನತಿಗಾಗಿ ಶ್ರಮಿಸುತ್ತಿದ್ದಾರೆ.
ಬಗೀಚ ಸಿಂಗ್ ಎಂಬ ಈ ಸಮಾಜ ಸೇವಕ 90 ಕೆಜಿ ತೂಕದ ಲಗೇಜ್‌ನ್ನು ಬೆನ್ನ ಮೇಲೆ ಹೊತ್ತುಕೊಂಡು ಅದಕ್ಕೆ ಎರಡು ತ್ರಿವರ್ಣ ಧ್ವಜವನ್ನು ಸಿಕ್ಕಿಸಿಕೊಂಡು ಇವರು ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ 23 ಬಾರಿ ಸುಮಾರು 6 ಲಕ್ಷ ಕಿಲೋಮೀಟರ್ ದೂರ ಕ್ರಮಿಸಿದ್ದಾರೆ.
ಸುಮ್ಮನೆ ಕಾಲಹರಣ ಮಾಡಲು ಅವರು ಪ್ರಯಾಣಿಸುತ್ತಿಲ್ಲ, ಬದಲಿಗೆ ತಂಬಾಕು ಸೇವನೆ, ಪಾನ್ ಮಸಾಲ ಸೇವನೆ, ಗುಟ್ಕಾ ಸೇವನೆ, ಸಿಗರೇಟು ಸೇವನೆ, ಮದ್ಯ ವ್ಯಸನ ಇವುಗಳ ವಿರುದ್ಧ ಜಾಗೃತಿ ಮೂಡಿಸಲು, ಈ ಅನಿಷ್ಟಗಳನ್ನು ದೇಶದಿಂದ ನಿರ್ಮೂಲನೆಗೊಳಿಸುವ ಪಣತೊಟ್ಟು ದೇಶ ಪರ್ಯಟನೆ ಮಾಡುತ್ತಿದ್ದಾರೆ.
ಅವಿವಾಹಿತನಾಗಿರುವ ಬಗೀಚ ಸಿಂಗ್, 22 ಫೆಬ್ರವರಿ 1993 ರಿಂದ ಜಮ್ಮುವಿನಿಂದ ಕನ್ಯಾಕುಮಾರಿಗೆ ತನ್ನ ನಡಿಗೆಯನ್ನು ಆರಂಭಿಸಿದರು. ಮನೆ ಬಿಟ್ಟ ಇವರು ಇದುವರೆಗೆ ಹಿಂದಿರುಗಿ ಮನೆಗೆ ಹೋಗಿಲ್ಲ. ಪ್ರಸ್ತುತ ಇಡೀ ದೇಶವೇ ಅವರ ಮನೆ. ದೇಶವನ್ನು ಮಾದಕ ವ್ಯಸನ ಮುಕ್ತಗೊಳಿಸಬೇಕು ಎಂಬ ಏಕೈಕ ಗುರಿ ಅವರದ್ದು, ಆ ಗುರಿ ಸಾಧನೆಗೆ ಅವರ ವಯಸ್ಸು ಅಡ್ಡ ಬಂದಿಲ್ಲ ಎಂಬುದೇ ವಿಶೇಷ. ಅವರ ಈ ಕಾರ್ಯ ಅವರನ್ನು ಸೆಲೆಬ್ರಿಟಿ ಮಾಡಬೇಕಿತ್ತು, ಅವರಿಗೆ ಸನ್ಮಾನ ಪ್ರಶಸ್ತಿಗಳು ಒಲಿದು ಬರಬೇಕಿತ್ತು. ಆದರೆ ದುರಾದೃಷ್ಟವಶಾತ್ ಅದ್ಯಾವುದೂ ನಡೆದಿಲ್ಲ.
ತಂಬಾಕು ಪದಾರ್ಥ, ಡ್ರಗ್ಸ್‌ಗಳ ಅಪಾಯ, ಲೈಂಗಿಕ ಕಾರ್ಯಕರ್ತರೊಂದಿಗೆ ಲೈಂಗಿಕ ಸಂಪರ್ಕ ಹೊಂದಿದರೆ ಆಗುವ ಅಪಾಯಗಳ ಬಗ್ಗೆ ಇವರು ನಿರಂತರ ಜಾಗೃತಿ ಮೂಡಿಸುತ್ತಿದ್ದಾರೆ. ’ಯುವ ಜನಾಂಗ ದುರ್ಬಲಗೊಂಡರೆ, ದೇಶ ಕೂಡ ದುರ್ಬಲಗೊಳ್ಳುತ್ತದೆ’ ಎಂಬುದನ್ನು ಇವರು ಜನರಿಗೆ ತಿಳಿ ಹೇಳುತ್ತಾರೆ.
ಇವರ ಪ್ರಯಾಣದಾದ್ಯಂತ ಮುಖ್ಯಮಂತ್ರಿಗಳನ್ನು, ರಾಜಕಾರಣಿಗಳನ್ನು, ಸಿನಿಮಾ ನಟರನ್ನು ಇವರು ಭೇಟಿಯಾಗಿದ್ದಾರೆ. ಆದರೆ ಯರೊಬ್ಬರು ನನ್ನ ಅಭಿಯಾನಕ್ಕೆ ಸ್ಪಂದಿಸಿಲ್ಲ, ಎಲ್ಲರೂ ನನ್ನೊಂದಿಗೆ ಫೋಟೊ ತೆಗೆಸಿಕೊಳ್ಳುತ್ತಾರೆ ಆದರೆ ನನ್ನ ಮಿಷನ್‌ಗೆ ನೆರವಾಗಲ್ಲ ಎಂಬ ನೋವು ಇವರದ್ದು. ಪ್ರಾಣಿಗಳಾದರೂ ನನ್ನ ಮೇಲೆ ದಯೆ ತೋರಿವೆ ಆದರೆ ರಾಜಕಾರಣಿಗಳಲ್ಲ ಎಂದು ಇವರು ತನ್ನ ನೋವನ್ನು ತೋಡಿಕೊಳ್ಳುತ್ತಾರೆ.
ಬಿಸಿಲು, ಮಳೆ, ಚಳಿ ಸಹಿಸಲು ಸಾಧ್ಯವಾಗುವ ಉಡುಗೆಗಳು. ಅವರ ಬಗ್ಗೆ ಪ್ರಕಟವಾದ ಪತ್ರಿಕಾ ತುಣುಕುಗಳು. ಸಂದೇಶ ರವಾನಿಸುವ ಬ್ಯಾನರ್‌ಗಳು ಸೇರಿ ಒಟ್ಟು 90 ಕಿಲೋ ಭಾರವನ್ನು ಬಗೀಚಾ ಸಿಂಗ್ ತಮ್ಮ ಬೆನ್ನಮೇಲೆ ಹಾಕಿಕೊಂಡು ನಡೆಯುತ್ತಾರೆ. ಯಾರಿಂದಲೂ ಹಣ ಕೇಳುವುದಿಲ್ಲ. ಮನಸಾರೆ ಕೊಟ್ಟರೆ ಮಾತ್ರ ಹಣ ಪಡೆಯುತ್ತಾರೆ.
ಹೆಚ್ಚಿನ ಹಣವನ್ನು ಅನಾಥಶ್ರಮಕ್ಕೆ ನೀಡುವುದು ಇವರ ರೂಢಿ. ದೇವಸ್ಥಾನ, ಉದ್ಯಾನ ಅಥವಾ ಬಸ್ ನಿಲ್ದಾಣಗಳಲ್ಲಿ ರಾತ್ರಿ ಮಲಗುತ್ತಾರೆ. ಇವರು ಮಾಡುತ್ತಿರುವ ಜಾಗೃತಿ ಕಾರ್ಯ ಇಡೀ ದೇಶವೇ ಮೆಚ್ಚುವಂಥದ್ದು.
Comments are closed.