ಕೋಲ್ಕತಾ; ಲೋಕಸಭಾ ಚುನಾವಣೆ ಮುಗಿದು ಫಲಿತಾಂಶ ಹೊರಬಿದ್ದರೂ ಕೇಂದ್ರ ಹಾಗೂ ಪಶ್ಚಿಮ ಬಂಗಾಳ ಸರ್ಕಾರಗಳ ನಡುವಿನ ಶೀತಲ ಸಮರ ಸದ್ಯಕ್ಕೆ ಮುಗಿಯುವ ಯಾವುದೇ ಲಕ್ಷಣಗಳೂ ಕಾಣಿಸುತ್ತಿಲ್ಲ. ನಾಳೆ (ಗುರುವಾರ) ಮೋದಿ ಎರಡನೇ ಅವಧಿಗೆ ಪ್ರಧಾನಿಯಾಗಿ ಅಧಿಕಾರ ಸ್ವೀಕಾರ ಮಾಡಲಿದ್ದಾರೆ. ಈ ಕಾರ್ಯಕ್ರಮಕ್ಕೆ ದೇಶದ ಬಹುತೇಕ ಮುಖ್ಯಮಂತ್ರಿಗಳಿಗೆ ಆಹ್ವಾನ ನೀಡಲಾಗಿದೆ. ಆದರೆ, ಈ ಕಾರ್ಯಕ್ರಮಕ್ಕೆ ತಾನು ಬರುವುದಿಲ್ಲ ಎಂದು ಪ್ರಧಾನಿ ಕಾರ್ಯಾಲಯಕ್ಕೆ ಕೋಲ್ಕತಾ ಸಿಎಂ ಮಮತಾ ಬ್ಯಾನರ್ಜಿ ಪತ್ರ ಬರೆದಿದ್ದು ಸದ್ಯಕ್ಕೆ ರಾಷ್ಟ್ರ ರಾಜಕಾರಣದಲ್ಲಿ ಕೂತೂಹಲ ಮೂಡಿಸಿದೆ.
ಈ ಕುರಿತು ಬುಧವಾರ ಪತ್ರ ಬರೆದು ಸ್ಪಷ್ಟನೆ ನೀಡಿರುವ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, “ನರೇಂದ್ರ ಮೋದಿಯವರೇ ನೀವು ಮತ್ತೊಮ್ಮೆ ಪ್ರಧಾನಿಯಾಗಿ ಆಯ್ಕೆಯಾಗಿದ್ದಕ್ಕೆ ಅಭಿನಂದನೆಗಳು. ನೀವು ನೀಡಿದ ಸಾಂವಿಧಾನಿಕ ಆಹ್ವಾನವನ್ನು ಸ್ವೀಕರಿಸಿ ನಿಮ್ಮ ಪ್ರಮಾಣ ವಚನ ಕಾರ್ಯಕ್ರಮಕ್ಕೆ ಆಗಮಿಸಬೇಕು ಎಂದೇ ನಾನು ಭಾವಿಸಿದ್ದೆ. ಆದರೆ ಕಳೆದ ಒಂದು ಗಂಟೆಯಿಂದ ಮಾಧ್ಯಮದಲ್ಲಿ ಪ್ರಸಾರವಾಗುತ್ತಿರುವ ವರದಿ ನನ್ನನ್ನು ವಿಚಲಿತಳನ್ನಾಗಿಸಿದೆ.
ಪಶ್ಚಿಮ ಬಂಗಾಳದಲ್ಲಿ ಈವರೆಗೆ 54 ರಾಜಕೀಯ ಹತ್ಯೆಗಳು ನಡೆದಿವೆ ಎಂದು ಬಿಜೆಪಿ ಆರೋಪಿಸಿದೆ. ಈ ಕುರಿತ ವರದಿಗಳು ಮಾಧ್ಯಮದಲ್ಲಿ ಪ್ರಸಾರವಾಗುತ್ತಿದೆ. ಆದರೆ, ಬಂಗಾಳದಲ್ಲಿ ಯಾವುದೇ ರಾಜಕೀಯ ಹತ್ಯೆಗಳು ನಡೆದಿಲ್ಲ. ಈ ಎಲ್ಲಾ ವರದಿಗಳು ಸತ್ಯಕ್ಕೆ ದೂರವಾದವು. ಕೌಟುಂಬಿಕ ಹಾಗೂ ವ್ಯಯಕ್ತಿಕ ಕಾರಣಗಳಿಗಾಗಿ ನಡೆದ ಹತ್ಯೆಗಳಿಗೆ ರಾಜಕೀಯ ಬಣ್ಣ ಕೊಡಲಾಗುತ್ತಿದೆ. ನಿಮ್ಮ ಆರೋಪಗಳಿಗೆ ಯಾವುದೇ ಸಾಕ್ಷ್ಯಾಧಾರಗಳಿಲ್ಲ” ಎಂದು ಸ್ಪಷ್ಟನೆ ನೀಡಿದ್ದಾರೆ.
ಅಲ್ಲದೆ ಮಾನ್ಯ ಮೋದಿಯವರೆ ನಿಮ್ಮ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮಕ್ಕೆ ಆಗಮಿಸದೆ ಇರುವುದಕ್ಕೆ ಕ್ಷಮೆ ಇರಲಿ ಎಂದು ಕೇಳಿಕೊಂಡಿದ್ದಾರೆ.
ಇದೇ ಪತ್ರದಲ್ಲಿ ಕೇಂದ್ರ ಸರ್ಕಾರದ ನಡೆಯ ವಿರುದ್ಧವೂ ಚಾಟಿ ಬೀಸಿರುವ ಅವರು, “ಪ್ರಧಾನಿ ಪ್ರಮಾಣ ವಚನ ಸ್ವೀಕಾರದಂತಹ ಕಾರ್ಯಕ್ರಮಗಳು ಪ್ರಜಾಪ್ರಭುತ್ವದ ಹಬ್ಬವಾಗಬೇಕೆ ಹೊರತು ಯಾವ ಪಕ್ಷವೂ ಅದನ್ನು ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳಬಾರದು” ಎಂದು ಟ್ವೀಟ್ ಮಾಡುವ ಮೂಲಕ ಹರಿಹಾಯ್ದಿದ್ದಾರೆ.
Comments are closed.