ಭುವನೇಶ್ವರ: ಕಂಪನಿಯ ಹಣವನ್ನೇ ದುರುಪಯೋಗ ಮಾಡಿಕೊಂಡು ಪ್ರೇಯಸಿಗೆ ಬೆಲೆಬಾಳುವ ಉಡುಗೊರೆ ನೀಡಿದ್ದಕ್ಕೆ ಪ್ರಿಯಕರನನ್ನು ಪೊಲೀಸರು ಬಂಧಿಸಿರುವ ಘಟನೆ ಒಡಿಶಾದ ಕೇಂದ್ರಾಪಾರಾ ಜಿಲ್ಲೆಯಲ್ಲಿ ನಡೆದಿದೆ.
ಬಂಧಿತ ಆರೋಪಿಯನ್ನು ಪ್ರಭಾಕರ್ ದಾಸ್ (24) ಎಂದು ಗುರುತಿಸಲಾಗಿದೆ. ಈತ ಕೊರಿಯರ್ ಕಂಪೆನಿಯ ಮೇಲ್ವಿಚಾರಕನಾಗಿ ಕೆಲಸ ಮಾಡುತ್ತಿದ್ದನು. ಆದರೆ ತನ್ನ ಪ್ರೇಯಸಿಗೆ ಬೆಲೆ ಬಾಳುವ ವಸ್ತುಗಳನ್ನು ಉಡುಗೊರೆಯಾಗಿ ನೀಡಲು 7.66 ಲಕ್ಷ ರೂ. ಕಂಪನಿ ಹಣವನ್ನು ದುರುಪಯೋಗ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಂಪನಿಗೆ ಸೇರಿದ್ದ 7.66 ಲಕ್ಷ ರೂ.ಯನ್ನು ಬ್ಯಾಂಕಿಗೆ ಪಾವತಿಸಲು ಹೋಗುತ್ತಿದ್ದೆ. ನನ್ನ ಮೋಟಾರ್ ಸೈಕಲ್ ಡಿಕ್ಕಿಯಲ್ಲಿ ಹಣ ಇಟ್ಟಿದ್ದೆ. ಆದರೆ ಅಲ್ಲಿಂದಲೇ ಹಣವನ್ನು ಲೂಟಿ ಮಾಡಲಾಗಿದೆ ಎಂದು ಆರೋಪಿಸಿ ಆತನೇ ಪೊಲೀಸರಿಗೆ ದೂರು ದಾಖಲಿಸಿದ್ದನು.
ದೂರು ದಾಖಲಿಸಿಕೊಂಡ ಪೊಲೀಸರು ತನಿಖೆ ಶುರು ಮಾಡಿದ್ದರು. ಈ ಸಂದರ್ಭದಲ್ಲಿ ಪ್ರಭಾಕರ್ ತನ್ನ ಗೆಳತಿಗೆ ಚಿನ್ನದ ಆಭರಣಗಳನ್ನು ಒಳಗೊಂಡಂತೆ ಬೆಲೆಬಾಳುವ ವಸ್ತುಗಳನ್ನು ಉಡುಗೊರೆಯಾಗಿ ನೀಡಿದ್ದನು. ಅನುಮಾನದ ಮೇರೆಗೆ ಪೊಲೀಸರು ಆರೋಪಿಯನ್ನು ವಶಪಡಿಸಿಕೊಂಡು ವಿಚಾರಣೆ ನಡೆಸಿದ್ದು, ಆತನೇ ಹಣವನ್ನು ಲೂಟಿ ಮಾಡಿ ಪ್ರೇಯಸಿಗಾಗಿ ಖರ್ಚು ಮಾಡಿರುವುದು ಬೆಳಕಿಗೆ ಬಂದಿದೆ.
ಸದ್ಯಕ್ಕೆ ಪೊಲೀಸರು ಆರೋಪಿಯನ್ನು ಬಂಧಿಸಿ, ಆತನ ಬಳಿಕ 40 ಸಾವಿರ ರೂ. ನಗದು, ದುಬಾರಿ ಮೊಬೈಲ್ ಫೋನ್‍ಗಳು, ಚಿನ್ನದ ಆಭರಣಗಳು, ಪೀಠೋಪಕರಣಗಳು, ಅಲ್ಮೇರಾ, ಏರ್ ಕೂಲರ್ ಮತ್ತು ಇತರೆ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
Comments are closed.