ರಾಷ್ಟ್ರೀಯ

ರಾಜ್ಯದಲ್ಲಿ ತಲೆದೋರಿರುವ ಬರ ಪರಿಸ್ಥಿತಿ; ನೆರವು ನೀಡಲು ಪ್ರಧಾನ ಮಂತ್ರಿಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಮನವಿ

Pinterest LinkedIn Tumblr

ಬೆಂಗಳೂರು: ಈ ವರ್ಷವೂ ರಾಜ್ಯದ ಹಲವು ಜಿಲ್ಲೆಗಳಲ್ಲಿ ಬರದ ಛಾಯೆ ಇದ್ದು ಶೇಕಡಾ 45 ರಷ್ಟು ಮಳೆ ಕೊರತೆಯನ್ನು ರಾಜ್ಯ ಎದುರಿಸುತ್ತಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ರಾಜ್ಯದ ನೆರವಿಗೆ ಮುಂದಾಗಬೇಕು ಎಂದು ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರನ್ನು ಕೋರಿದ್ದಾರೆ.

ದೆಹಲಿಯಲ್ಲಿ ನೀತಿ ಆಯೋಗದ ಸಭೆಗೂ ಮುನ್ನ ಪ್ರಧಾನಿ ನರೇಂದ್ರ ಮೋದಿ ಅವರನ್ನು ಇಂದು ಭೇಟಿ ಮಾಡಿದ ಮುಖ್ಯಮಂತ್ರಿ ಕುಮಾರಸ್ವಾಮಿ ಎರಡನೆ ಭಾರಿ ಆಯ್ಕೆಯಾದ ಹಿನ್ನಲೆಯಲ್ಲಿ ಮೋದಿ ಅವರಿಗೆ ಅಭಿನಂದನೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಅವರು ರಾಜ್ಯದಲ್ಲಿ ತಲೆದೋರಿರುವ ಬರ ಪರಿಸ್ಥಿತಿ, ನರೇಗಾ ಬಾಕಿ ಅನುದಾನ ಬಿಡುಗಡೆ ಹಾಗೂ ಸಾಲ ಮನ್ನಾ ಯೋಜನೆಯ ಯಶಸ್ವಿ ಅನುಷ್ಠಾನದ ಕುರಿತು ಚರ್ಚಿಸಿದರು.

ರಾಜ್ಯದಲ್ಲಿ ಮಹಾತ್ಮಾ ಗಾಂಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಲಾಗುತ್ತಿದ್ದು, ಈ ಯೋಜನೆಯಡಿ ರಾಜ್ಯ ಸರ್ಕಾರ ಕೂಲಿಯ ಬಾಬ್ತು ಪಾವತಿಸಿದ 1200 ಕೋಟಿ ರೂ. ಮುಂಗಡ ಹಣವೂ ಸೇರಿದಂತೆ ಸುಮಾರು 1500 ಕೋಟಿ ರೂ. ಅನುದಾನ ಬಾಕಿ ಇದೆ. ಇದನ್ನು ಕೂಡಲೇ ಬಿಡುಗಡೆ ಮಾಡುವಂತೆ ಕೋರಿದರು.

ರಾಜ್ಯದಲ್ಲಿ ಸಾಲ ಮನ್ನಾ ಯೋಜನೆಯನ್ನು ಅತ್ಯಂತ ಯಶಸ್ವಿಯಾಗಿ, ಪಾರದರ್ಶಕವಾಗಿ ಅನುಷ್ಠಾನಗೊಳಿಸಲಾಗಿದೆ. ವಾಣಿಜ್ಯ ಹಾಗೂ ಸಹಕಾರಿ ಬ್ಯಾಂಕುಗಳಲ್ಲಿ ಒಟ್ಟು 30 ಲಕ್ಷ ರೈತರ 16,000 ಕೋಟಿ ರೂಪಾಯಿ ಸಾಲಮನ್ನಾ ಸೌಲಭ್ಯಕ್ಕೆ ಅರ್ಹ ಎಂದು ಗುರುತಿಸಲಾಗಿತ್ತು. ಅದರಲ್ಲಿ ಈವರೆಗೆ ದಾಖಲೆಗಳನ್ನು ಒದಗಿಸಿದ ರಾಜ್ಯದ ವಾಣಿಜ್ಯ ಬ್ಯಾಂಕುಗಳ 9 ಲಕ್ಷ ಹಾಗೂ ಸಹಕಾರಿ ಬ್ಯಾಂಕುಗಳ 14 ಲಕ್ಷ ಫಲಾನುಭವಿಗಳ ಒಟ್ಟು 12,830 ಕೋಟಿ ರೂಪಾಯಿ ಬೆಳೆ ಸಾಲ ಮನ್ನಾ ಮಾಡಲು ಕ್ರಮ ವಹಿಸಲಾಗಿದೆ.

ಫಲಾನುಭವಿಗಳನ್ನು ಗುರುತಿಸುವಲ್ಲಿ ಕೆಲವು ಬ್ಯಾಂಕುಗಳಿಂದ ಲೋಪವಾದ್ದರಿಂದ ಸ್ವಲ್ಪ ಗೊಂದಲ ಉಂಟಾಗಿತ್ತು. ನಿನ್ನೆ ಬ್ಯಾಂಕರ್ ಗಳ ಸಭೆ ನಡೆಸಿ ಗೊಂದಲ ಬಗೆಹರಿಸಲಾಯಿತು ಎಂದು ಪ್ರಧಾನಿಗೆ ಮುಖ್ಯಮಂತ್ರಿ ವಿವರಿಸಿದರು.

Comments are closed.