ಮುಂಬೈ: ಮಹಾರಾಷ್ಟ್ರದ ಶಿರಡಿಯಲ್ಲಿರುವ ಸಾಯಿಬಾಬಾ ದೇವಸ್ಥಾನ ದೇಶದ ಅತ್ಯಂತ ಶ್ರೀಮಂತ ದೇವಾಲಯಗಳಲ್ಲಿ ಒಂದಾಗಿದೆ. ದಿನನಿತ್ಯ ಲಕ್ಷಾಂತರ ಭಕ್ತರು ಆಗಮಿಸಿ ಬಾಬಾನ ದರ್ಶನ ಪಡೆಯುತ್ತಾರೆ. ಆದರೆ ಈ ದೇವಾಲಯಕ್ಕೆ ಭಕ್ತರಿಂದ ಬರುತ್ತಿರುವ ಯಥೇಚ್ಛವಾದ ಕಾಣಿಕೆ ಈಗ ಸಮಸ್ಯೆಯಾಗಿ ಪರಿಣಮಿಸಿದೆ. ಯಾಕೆಂದರೆ ಇಲ್ಲಿಗೆ ಬರುವ ಭಕ್ತಾದಿಗಳು ಅತಿ ಹೆಚ್ಚಾಗಿ ನಾಣ್ಯಗಳನ್ನು ಕಾಣಿಕೆಯಾಗಿ ನೀಡುತ್ತಿದ್ದಾರೆ. ಹೀಗಾಗಿ ಆ ನಾಣ್ಯಗಳನ್ನು ಏನು ಮಾಡಬೇಕೆಂದು ದೇವಾಲಯದ ಟ್ರಸ್ಟ್ಗೆ ತಲೆನೋವಾಗಿದೆ.
ಪ್ರತಿವಾರ ಬರೋಬ್ಬರಿ 14 ಲಕ್ಷ ನಾಣ್ಯಗಳು ದೇವಸ್ಥಾನದ ಹುಂಡಿಗೆ ಕಾಣಿಕೆಯಾಗಿ ಬೀಳುತ್ತಿವೆ. ಈ ಹಣವನ್ನು ಇಡಲು ಜಾಗವಿಲ್ಲದೇ ದೇವಸ್ಥಾನದ ಸಮಿತಿ ಪರಿತಪಿಸಿದೆ. ಬ್ಯಾಂಕ್ಗಳು ಸಹ ಇಷ್ಟೊಂದು ಮೌಲ್ಯದ ನಾಣ್ಯಗಳನ್ನು ತೆಗೆದುಕೊಳ್ಳಲು ನಿರಾಕರಿಸಿವೆ.
ಶಿರಡಿ ಸಾಯಿಬಾಬಾ ದೇವಾಲಯ ಮಹಾರಾಷ್ಟ್ರದ ಪ್ರಮುಖ ಪುಣಕ್ಷೇತ್ರವಾಗಿದೆ. ದೇಶ ಮಾತ್ರವಲ್ಲದೇ, ವಿದೇಶಗಳಿಂದಲೂ ಲಕ್ಷಾಂತರ ಭಕ್ತರು ವರ್ಷವಿಡೀ ಶಿರಡಿ ಸಾಯಿಬಾಬಾ ದೇವಸ್ಥಾನಕ್ಕೆ ಭೇಟಿ ನೀಡುತ್ತಾರೆ. ದೇವಾಲಯಕ್ಕೆ ಬರುವ ಈ ಭಕ್ತರು ಹುಂಡಿಗೆ ಹೆಚ್ಚಾಗಿ ನೋಟುಗಳಿಗಿಂತ ನಾಣ್ಯಗಳನ್ನೇ ಹಾಕುತ್ತಿದ್ದಾರೆ.
ದೇವಾಲಯಕ್ಕೆ ಬರುವ ಕಾಣಿಕೆಯನ್ನು ವಾರಕ್ಕೆ ಎರಡು ಬಾರಿ ಎಣಿಸುತ್ತೇವೆ. ಪ್ರತಿಬಾರಿ ಸುಮಾರು 2 ಕೋಟಿ ರೂ.ಹಣ ಇರುತ್ತದೆ. ಇದರಲ್ಲಿ 7 ಲಕ್ಷ ಹಣ ಬರೀ ನಾಣ್ಯಗಳೇ ಇರುತ್ತವೆ. ಬ್ಯಾಂಕ್ಗಳು ಸಹ ಈ ನಾಣ್ಯಗಳನ್ನು ತೆಗೆದುಕೊಳ್ಳಲು ನಿರಾಕರಿಸಿವೆ. ನಮಗೂ ಎಂದು ಶಿರಡಿ ಸಾಯಿಬಾಬಾ ಸಂಸ್ಥಾನಿ ಟ್ರಸ್ಟ್ನ ಸಿಇಒ ದೀಪಕ್ ಮುಗ್ಲೀಕರ್ ಹೇಳಿದ್ದಾರೆ.
ದೇವಾಲಯದ ಟ್ರಸ್ಟ್ ಈಗಾಗಲೇ ವಿವಿಧ 8 ಬ್ಯಾಂಕ್ಗಳಲ್ಲಿ ಖಾತೆಗಳನ್ನು ಹೊಂದಿದೆ. ಈ ನಾಣ್ಯಗಳನ್ನು ಖಾತೆಗೆ ಡೆಪಾಸಿಟ್ ಮಾಡಲು ಬ್ಯಾಂಕ್ನಲ್ಲಿ ಸ್ಥಳವಿಲ್ಲ. ಹೀಗಾಗಿ ನಾಣ್ಯಗಳನ್ನು ಇಡಲು ಬ್ಯಾಂಕ್ಗಳು ಜಾಗ ನೀಡಬೇಕೆಂದು ಟ್ರಸ್ಟ್ ಒತ್ತಾಯಿಸಿದೆ. ಈ ಸಮಸ್ಯೆಗೆ ಪರಿಹಾರ ಕೊಡಬೇಕೆಂದು ದೇವಸ್ಥಾನದ ಸಮಿತಿ ಭಾರತೀಯ ರಿಸರ್ವ್ ಬ್ಯಾಂಕ್ಗೆ ಮನವಿ ಮಾಡಿದೆ. ಈಗ 1.5 ಕೋಟಿ ರೂ.ನಾಣ್ಯಗಳಿದ್ದು, ದೇವಾಲಯದ ಸಮಿತಿ ಸಂಗ್ರಹಿಸಿಟ್ಟಿದೆ.
Comments are closed.