ರಾಂಚಿ: ಯೋಗವನ್ನು ಗ್ರಾಮೀಣ ಪ್ರದೇಶಕ್ಕೆ ಪರಿಚಯಿಸಬೇಕಾದ ಸಮಯವಿದು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಶುಕ್ರವಾರ 5ನೇ ಅಂತಾರಾಷ್ಟ್ರೀಯ ಯೋಗ ದಿನ. ಈ ಹಿನ್ನಲೆಯಲ್ಲಿ ಜಾರ್ಖಂಡ್ ರಾಜಧಾನಿ ರಾಂಚಿಯ ಪ್ರಭಾತ್ ತಾರಾ ಮೈದಾನದಲ್ಲಿ ಯೋಗಾಭ್ಯಾಸ ಮಾಡಿದ ಬಳಿಕ ಅವರು ಮಾತನಾಡಿದರು.
ಇಂದು ನಾನು ಆಧುನಿಕ ಯೋಗದ ಪ್ರಯಾಣವನ್ನು ನಗರ ಪ್ರದೇಶಗಳಿಂದ ಹಳ್ಳಿಗಳಿಗೆ ಬಡ ಮತ್ತು ಬುಡಕಟ್ಟು ಜನಾಂಗದವರ ಮನೆಗಳಿಗೆ ಕೊಂಡೊಯ್ಯಬೇಕಾಗಿದೆ. ಯೋಗ ಕೇವಲ ನಗರ ಪ್ರದೇಶಗಳ ಶ್ರೀಮಂತರ ದಿನಚರಿಯಾಗಿರದೆ ಹಳ್ಳಿಗಳ ಬಡ ಜನರ ಜೀವನದ ಭಾಗವು ಕೂಡ ಆಗಬೇಕಿದೆ. ಅನಾರೋಗ್ಯದಿಂದ ಹೆಚ್ಚು ನೋವು ಅನುಭವಿಸುವವರು, ಕಷ್ಟಪಡುವವರು ಬಡಜನರು, ಅಂತವರು ಯೋಗಾಭ್ಯಾಸದಲ್ಲಿ ನಿರತರಾಗಬೇಕು ಎಂದು ಹೇಳಿದರು.
ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಸಂದರ್ಭದಲ್ಲಿ ಭಾರತ ಸೇರಿದಂತೆ ವಿಶ್ವದ ಜನರಿಗೆ ಶುಭಾಶಯ ಕೋರಿದ ಪ್ರಧಾನಿ, ಇಂದು ವಿಶ್ವದ ಅನೇಕ ಭಾಗಗಳಲ್ಲಿ ಜನರು ಯೋಗ ಮಾಡುತ್ತಿದ್ದಾರೆ. ಯೋಗವನ್ನು ಪ್ರಚಾರ ಮಾಡುವಲ್ಲಿ ಮಾಧ್ಯಮಗಳು ಪ್ರಮುಖ ಪಾತ್ರ ವಹಿಸಿವೆ ಎಂದು ಹೇಳಿದರು.
ಇಂದು ಬದಲಾದ ಕಾಲಘಟ್ಟದಲ್ಲಿ ನಮ್ಮ ಆರೋಗ್ಯದ ಕಡೆಗೆ ಗಮನಹರಿಸಬೇಕಾದ ಅಗತ್ಯವಿದೆ. ಯೋಗದಿಂದ ಸದೃಢ ಮಾನಸಿಕ ಮತ್ತು ದೈಹಿಕ ಆರೋಗ್ಯ ಹೊಂದಲು ಸಾಧ್ಯ. ಅದು ಯೋಗ ಮತ್ತು ಭಾರತದ ತತ್ವಶಾಸ್ತ್ರದ ಶಕ್ತಿಯಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಜಾರ್ಖಂಡ್ ಮುಖ್ಯಮಂತ್ರಿ ರಘುವೀರ್ ದಾಸ್ ಮತ್ತು ಹಲವು ಸಚಿವರುಗಳು ಭಾಗವಹಿಸಿದ್ದರು. ಸುಮಾರು 30 ಸಾವಿರ ಜನ ಪ್ರಧಾನ ಮಂತ್ರಿ ಭಾಗಿಯಾಗಿದ್ದ ಕಾರ್ಯಕ್ರಮದಲ್ಲಿ ಹಾಜರಿದ್ದರು.
ಇಂದು ಕರ್ನಾಟಕ ಸೇರಿದಂತೆ ಪ್ರತಿ ರಾಜ್ಯ ಸರ್ಕಾರಗಳೂ ಸಹ ಯೋಗ ದಿನಾಚರಣೆಯನ್ನು ಕಡ್ಡಾಯವಾಗಿ ಆಚರಿಸುತ್ತಿದ್ದು, ಎಲ್ಲಾ ರಾಜ್ಯಗಳ ರಾಜಧಾನಿಗಳಲ್ಲಿ ಯೋಗ ದಿನಾಚರಣೆ ಕಳೆಗಟ್ಟಿದೆ. ಅಲ್ಲದೆ ದೇಶದ ಶಾಲೆ-ಕಾಲೇಜುಗಳಲ್ಲೂ ಸಹ ಯೋಗ ದಿನಾಚರಣೆಯನ್ನು ಕಡ್ಡಾಯವಾಗಿ ಆಚರಿಸಲಾಗುತ್ತಿದೆ.
Comments are closed.