ನವದೆಹಲಿ: ಸಚಿವ ಸ್ಥಾನ ಪಡೆಯಬೇಕು ಎಂಬುದು ಪ್ರತಿಯೊಬ್ಬ ಶಾಸಕನ ಕನಸು. ಸಚಿವ ಸ್ಥಾನ ಪಡೆಯಲಿಕ್ಕಾಗಿ ಶಾಸಕರು ಶಕ್ತಿಮೀರಿ ಪ್ರಯತ್ನಿಸುತ್ತಾರೆ. ಅರುಣಾಚಲ ಪ್ರದೇಶದ ಮೂವರು ಶಾಸಕರು ಸಚಿವ ಸ್ಥಾನ ಪಡೆಯಲಿಕ್ಕಾಗಿ ವ್ಯಕ್ತಿಯೊಬ್ಬನಿಗೆ ಹಣ ನೀಡಿ ಮೋಸ ಹೋಗಿದ್ದಾರೆ.
ಹೌದು, ಅರುಣಾಚಲ ಪ್ರದೇಶದ ಮೂವರು ಶಾಸಕರಿಗೆ ಕಳೆದ ವರ್ಷ ಸಂಜಯ್ ತಿವಾರಿ ಎಂಬಾತ ಪರಿಚಯವಾಗಿದ್ದ. ಸಂಜಯ್ ತನ್ನನ್ನು ಸಂಸದರೊಬ್ಬರ ಆಪ್ತ ಸಹಾಯಕ ಎಂದು ಗುರುತಿಸಿಕೊಂಡಿದ್ದ. ಆ ನಂತರ ಸಂಜಯ್ ತಿವಾರಿ ನಿಮಗೆ ಯಾವುದಾದರೂ ಸಹಾಯ ಬೇಕಿದ್ದರೆ ನನಗೆ ತಿಳಿಸಿ ಎಂದಿದ್ದ. ಆ ನಂತರ ಮೂವರು ಶಾಸಕರು ತಮಗೆ ಸಚಿವರಾಗುವ ಆಸೆ ಇದೆ ಎಂದು ತಿಳಿಸಿದ್ದರು.
ಶಾಸಕರ ಅಪೇಕ್ಷೆಯ ಲಾಭ ಪಡೆಯಲು ನಿರ್ಧರಿಸಿದ ಸಂಜಯ್ ತಿವಾರಿ ನಿಮಗೆ ಸಚಿವ ಸ್ಥಾನ ಕೊಡಿಸುತ್ತೇನೆ ಎಂದು ಶಾಸಕರಿಗೆ ಭರವಸೆ ನೀಡಿದ್ದ. ಜತೆಗೆ ಅವರಿಂದ ಹಣ ಸಹ ಪಡೆದಿದ್ದ. ಹಣ ಪಡೆದ ನಂತರ ಸಂಜಯ್ ತಿವಾರಿ ಶಾಸಕರ ಸಂಪರ್ಕಕ್ಕೆ ಸಿಗದೆ ನಾಪತ್ತೆಯಾಗಿದ್ದ.
ಇದರ ಅರಿವಿರದ ಶಾಸಕರು ಸಚಿವ ಸ್ಥಾನ ಕೊಡಿಸಿ ಎಂದು ಸಂಸದರನ್ನು ಭೇಟಿ ಮಾಡಿದಾಗ ಸಂಜಯ್ ತಿವಾರಿ ಮಾಡಿರುವ ಮೋಸ ಬಯಲಿಗೆ ಬಂದಿತ್ತು. ಆ ನಂತರ ಶಾಸಕರು ಸಂಜಯ್ ತಿವಾರಿ ವಿರುದ್ಧ ದೂರು ದಾಖಲಿಸಿದ್ದರು. ಶಾಸಕರ ದೂರಿನ ಆಧಾರದಲ್ಲಿ ತನಿಖೆ ನಡೆಸಿದ ಪೊಲೀಸರು ದೆಹಲಿಯಲ್ಲಿ ಸಂಜಯ್ ತಿವಾರಿಯನ್ನು ಬಂಧಿಸಿದ್ದಾರೆ. ಸಂಜಯ್ ವಿರುದ್ಧ ವಂಚನೆ ಪ್ರಕರಣ ದಾಖಲಿಸಲಾಗಿದೆ.
Comments are closed.